Quick ಸುದ್ದಿಗೆ ಒಂದು click

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ನಿಧನ

ಬಣ್ಣದ ಲೋಕದಿಂದ ಮರೆಯಾದ ಬಿ. ಸರೋಜಾ ದೇವಿ

ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಹಿರಿಯ ನಟಿ ಬಿ. ಸರೋಜಾ ದೇವಿ

1960-70ರ ದಶಕದ ಸೂಪರ್‌ ಸ್ಟಾರ್‌ ಹೀರೋಯಿನ್‌ ಇನ್ನು ನೆನಪು ಮಾತ್ರ

ಬೆಂಗಳೂರು, ಜುಲೈ 14, 2025: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಸೋಮವಾರ (14 ಜುಲೈ, 2025) ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿ. ಸರೋಜಾ ದೇವಿ ಅವರನ್ನು ಕೆಲ ದಿನಗಳ ಹಿಂದಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಿ. ಸರೋಜಾ ದೇವಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಣ್ಣದ ಬದುಕಿನಲ್ಲಿ ಆರು ದಶಕಗಳ ಯಾನ… 

1955ರಲ್ಲಿ ಬಿಡುಗಡೆಯಾಗಿ ತೆರೆಗೆ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಬಿ. ಸರೋಜಾ ದೇವಿ ಮೊದಲ ಬಾರಿಗೆ ನಟಿಯಾಗಿ ಚಿತ್ರರಂಗದಲ್ಲಿ ಬಣ್ಣ ಹಚ್ಚಿದರು. ಆ ಬಳಿಕ ಒಂದರ ಹಿಂದೊಂದು ಸಿನೆಮಾಗಳು ಬಿ. ಸರೋಜಾ ದೇವಿ ಅವರನ್ನು ಹುಡುಕಿ ಬಂದವು. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಬಿ. ಸರೋಜಾ ದೇವಿ ಅಭಿನಯಿಸಿದ್ದಾರೆ. ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಬಿ. ಸರೋಜಾ ದೇವಿ, ವರನಟ ಡಾ. ರಾಜಕುಮಾರ್‌, ಕಲ್ಯಾಣ ಕುಮಾರ್‌, ಎಂಜಿಆರ್‌, ಎನ್‌ಟಿಆರ್‌ ಸೇರಿದಂತೆ ಆಗಿನ ಕಾಲದ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸ್ಟಾರ್‌ ನಟರ ಸಿನೆಮಾಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’,  ಹಿಂದಿಯಲ್ಲಿ  ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’ ಮೊದಲಾದವು ಬಿ. ಸರೋಜಾ ದೇವಿ ಅಭಿನಯಿಸಿರುವ ಪ್ರಮುಖ ಸಿನೆಮಾಗಳಾಗಿವೆ. ಕನ್ನಡದಲ್ಲಿ 2019ರಲ್ಲಿ ಬಿಡುಗಡೆಯಾದ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ‘ನಟಸಾರ್ವಭೌಮ’ ಚಿತ್ರದಲ್ಲಿ ಕೊನೆಯದಾಗಿ ಪಾತ್ರವೊಂದರಲ್ಲಿ ಬಿ. ಸರೋಜಾ ದೇವಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದ ಬಿ. ಸರೋಜಾ ದೇವಿ, ತಮ್ಮ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದರು.

ಚಿತ್ರರಂಗಕ್ಕೆ ಬರಲು ತಂದೆಯ ಪ್ರೇರಣೆ…

ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು.  ಅವರು ಬೆಂಗಳೂರಿನಲ್ಲಿ ಹುಟ್ಟಿದರು. ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ ಅವರು ಹೌಸ್​ವೈಫ್ ಆಗಿದ್ದರು. ಸರೋಜಾ ಬಳಿ ಭೈರಪ್ಪ ಅವರು ಡ್ಯಾನ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು. ಅವರು ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು. ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ಕಂಬನಿ

ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌, ಕೇಂದ್ರ ಸಚಿವ ಹೆಚ್‌. ಡಿ. ಕುಮಾರಸ್ವಾಮಿ, ನಟರಾದ ಶಿವರಾಜಕುಮಾರ್‌, ಸುದೀಪ್‌, ಧ್ರುವ ಸರ್ಜಾ, ನಟಿಯರಾದ ರಮ್ಯಾ, ಶ್ರುತಿ, ಸುಧಾರಾಣಿ, ಸುಮಲತಾ ಅಂಬರೀಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಸೇರಿದಂತೆ ಕನ್ನಡ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Related Posts

error: Content is protected !!