‘ಮೋಡ ಕವಿದ ವಾತಾವರಣ’ದಲ್ಲಿ ಸುನಿ ಹೊಸಪ್ರೇಮ ಕಥೆ!
ಸಿಂಪಲ್ ಸುನಿ ಹೊಸಚಿತ್ರ ‘ಮೋಡ ಕವಿದ ವಾತಾವರಣ’ ಘೋಷಣೆ
‘ಮೋಡ ಕವಿದ ವಾತಾವರಣ’ಕ್ಕೆ ಸುನಿ ಶಿಷ್ಯ ಯುವ ಪ್ರತಿಭೆ ಶೀಲಮ್ ಹೀರೋ
ಸದ್ದಿಲ್ಲದೆ ಶುರುವಾಯಿತು ‘ಮೋಡ ಕವಿದ ವಾತಾವರಣ’ ಚಿತ್ರ
‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಈ ಬಾರಿ ಸದ್ದಿಲ್ಲದೆ ಮತ್ತೊಂದು ನವಿರಾದ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳೋದಕ್ಕೆ ತಯಾರಾಗಿದ್ದಾರೆ. ಸದ್ಯ ಕನ್ನಡ ಚಿತ್ರರಂಗಕ್ಕೆ ಹೊಸಮುಖಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿರುವ ಸಿಂಪಲ್ ಸುನಿ ಇದೀಗ ಮತ್ತೊಬ್ಬ ಹೊಸ ಹೀರೋವನ್ನು ‘ಮೋಡ ಕವಿದ ವಾತಾವರಣ’
ಎಂಬ ಹೆಸರಿನ ಸಿನೆಮಾದ ಮೂಲಕ ಪ್ರೇಕ್ಷಕರ ಎದುರು ಪರಿಚಯಿಸುತ್ತಿದ್ದಾರೆ. ಸುನಿ ಅವರ ಹೊಸ ಚಿತ್ರ ‘ಮೋಡ ಕವಿದ ವಾತಾವರಣ’ ಸಿನೆಮಾದ ಮೂಲಕ ಶೀಲಮ್ ಎಂಬ ಯುವ ಪ್ರತಿಭೆ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ. ನಿರ್ದೇಶಕ ಸುನಿ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ, ಸಣ್ಣ ಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಂಡಿರುವ ಶೀಲಮ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ.
ಸದ್ದಿಲ್ಲದೆ ಚಿತ್ರೀಕರಣ ಕೂಡ ಸಂಪೂರ್ಣ…!
ಅಂದಹಾಗೆ, ‘ಮೋಡ ಕವಿದ ವಾತಾವರಣ’ ಸಿನೆಮಾದ ಚಿತ್ರೀಕರಣ ಕೂಡ ಸದ್ದಿಲ್ಲದೆ ಸಂಪೂರ್ಣವಾಗಿದೆ. ‘ಮೋಡ ಕವಿದ ವಾತಾವರಣ’ ಚಿತ್ರದ ಚಿತ್ರೀಕರಣದ ಕೊನೆಯ ದಿನ ಮಾಧ್ಯಮದವರನ್ನು ಚಿತ್ರೀಕರಣ ನಡೆಯುತ್ತಿದ್ದ ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ಆಹ್ವಾನಿಸಿದ್ದ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಹೊಸಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡರು.
ಚಿತ್ರೀಕರಣ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ನಿರ್ದೇಶಕ ಸಿಂಪಲ್ ಸುನಿ, ”ಒಂದು ಸರಳ ಪ್ರೇಮಕಥೆ’ ನನ್ನ ಲೈಫ್‌ನಲ್ಲಿ ಬೇರೆ ರೀತಿ ಸಿನೆಮಾ. ನನ್ನ ಲೈಫ್‌ಗೆ ಬೂಸ್ಟ್ ಕೊಡ್ತು. ಇದಾದ ಬಳಿಕ ಕೈಗೆತ್ತಿಕೊಂಡಿರುವ ಸಿನೆಮಾವೇ ‘ಮೋಡ ಕವಿದ ವಾತಾವರಣ’. ಈ ಚಿತ್ರದ ಮೂಲಕ ಹೊಸ ಹೀರೋ ಲಾಂಚ್ ಆಗುತ್ತಿದ್ದಾರೆ. ಹೀರೋ ನಮ್ಮ ಮನೆ ಮಗ. ಶೀಲಮ್ ನನ್ನ ಬ್ರದರ್’ ಎಂದು ಮಾಹಿತಿ ನೀಡಿದರು.
ಹೊಸಬರ ಜೊತೆ ಸುನಿ ಹೊಸಚಿತ್ರ
ನವನಟ ಶೀಲಮ್ ಮಾತನಾಡಿ, ‘ಗುರುಪೂರ್ಣಿಮಾ ದಿನ ಸುನಿ ಸರ್ ತಮ್ಮ ಶಿಷ್ಯನನ್ನು ಲಾಂಚ್ ಮಾಡಿದ್ದಾರೆ. ಈ ಸಿನೆಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಟೆಕ್ನಿಷಿಯನ್ ದೊಡ್ಡ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಒಂದೊಳ್ಳೆ ಟೀಂ ಜೊತೆ ಲಾಂಚ್ ಆಗುತ್ತಿರುವುದು ಖುಷಿ ಇದೆ’ ಎಂದರು.
ನಟಿ ಸಾತ್ವಿಕಾ ಮಾತನಾಡಿ, ‘ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಸುನಿ ಸರ್ ಜೊತೆ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬಾನೇ ಇದೆ. ಈ ಜರ್ನಿಯಲ್ಲಿ ಬಹಳಷ್ಟು ಕಲಿತಿದ್ದೇನೆ. ಶೀಲಮ್ ಡಿಡಿಕೇಟರ್ ಆಕ್ಟರ್. ಅವರು ಸಿನೆಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ಸೈಂಟಿಫಿಕ್ ಫಿಕ್ಷನ್ ಪ್ರೇಮಕಥಾಹಂದರ! 
‘ಮೋಡ ಕವಿದ ವಾತಾವರಣ’ ಸಿನೆಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ರೀ-ರೆಕಾರ್ಡಿಂಗ್ ಕೆಲಸಗಳೆಲ್ಲ ಬಹುತೇಕ ಮುಗಿದು ಚಿತ್ರದ ರಿಲೀಸ್‌ಗೆ ತಯಾರಾಗಿದೆ. ಸೈಂಟಿಫಿಕ್ ಫಿಕ್ಷನ್ ಪ್ರೇಮಕಥಾಹಂದರವನ್ನು ಹೊಂದಿರುವ ‘ಮೋಡ ಕವಿದ ವಾತಾವರಣ’ವನ್ನು ‘ಒಂದು ಸರಳ ಪ್ರೇಮಕಥೆ’ ಸಿನೆಮಾ ನಿರ್ಮಾಣ ಮಾಡಿದ್ದ ‘ರಾಮ್ ಮೂವೀಸ್’ ಈ ಸಿನೆಮಾ ನಿರ್ಮಾಣ ಮಾಡುತ್ತಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜಂಟಿಯಾಗಿ ಈ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಮೋಡ ಕವಿದ ವಾತಾವರಣ’ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಆದಿತ್ಯ ಕಶ್ಯಪ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮೋಡ ಕವಿದ ವಾತಾವರಣ’ ಸಿನೆಮಾದ ಹಾಡುಗಳಿಗೆ ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ಸಂಯೋಜಿಸುತ್ತಿದ್ದು, ಇದೇ ವರ್ಷಾಂತ್ಯಕ್ಕೆ ‘ಮೋಡ ಕವಿದ ವಾತಾವರಣ’ ಸಿನೆಮಾ ತೆರೆಗೆ ಬರುವ ಸಾಧ್ಯತೆಯಿದೆ.















