Video

ಹೊರಬಂತು ‘ಕೂಲಿ’ ಸಿನೆಮಾದ ಟ್ರೇಲರ್‌

ರಜನಿಕಾಂತ್‌ ಅಭಿನಯದ ‘ಕೂಲಿ’ ಟ್ರೇಲರ್‌ ರಿಲೀಸ್‌

ಬಹುನಿರೀಕ್ಷಿತ ‘ಕೂಲಿ’ ಟ್ರೇಲರಿನಲ್ಲಿ ಬಹುತಾರಾಗಣ ಅನಾವರಣ

ಬಿಗ್‌ ಬಜೆಟ್‌, ಅದ್ಧೂರಿ ಮೇಕಿಂಗ್‌ ‘ಕೂಲಿ’ ಹೈಲೈಟ್‌

ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಸಿನೆಮಾದ ಬಿಡುಗಡೆಗೆ ದಿನ ನಿಗದಿಯಾಗಿದೆ. ಹೌದು, ರಜನಿಕಾಂತ್‌ ಅಭಿಮಾನಿಗಳು ಬಹುದಿನದಿಂದ ಕಾಯುತ್ತಿದ್ದ ‘ಕೂಲಿ’ಸಿನೆಮಾ ಇದೇ ಆಗಸ್ಟ್ 14 ರಂದು ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ದ್ಯ ಭರದಿಂದ ‘ಕೂಲಿ’ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಕೂಲಿ’ ಸಿನೆಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ಕೂಲಿ’ ಟ್ರೇಲರ್‌..?

ಆರಂಭದಿಂದಲೂ ರಜನಿಕಾಂತ್‌ ಅಭಿಮಾನಿಗಳು ನಿರೀಕ್ಷಿಸಿಕೊಂಡು ಬಂದಿರುವಂತೆಯೇ, ‘ಕೂಲಿ’ ಸಿನೆಮಾದ ಟ್ರೇಲರ್‌ ಅದ್ಧೂರಿಯಾಗಿ ಮೂಡಿಬಂದಿದೆ. ‘ಕೂಲಿ’ ಬಹುತಾರಾಗಣದ ಸಿನೆಮಾವಾಗಿದ್ದು, ಟ್ರೇಲರಿನಲ್ಲಿ ರಜನಿಕಾಂತ್‌ ಜೊತೆಗೆ ಎಲ್ಲ ಪಾತ್ರಗಳು ಸಖತ್ ಆಗಿ ಮಿಂಚಿದಂತಿವೆ. ಟ್ರೇಲರಿನಲ್ಲಿ ರಜನಿಕಾಂತ್‌ ಜೊತೆಗೆ ನಾಗಾರ್ಜುನ, ಅಮೀರ್‌ ಖಾನ್‌, ಉಪೇಂದ್ರ, ಶ್ರುತಿ ಹಾಸನ್‌, ರಚಿತಾ ರಾಮ್, ಸತ್ಯರಾಜ್‌, ಸುಬಿನ್ ಸಾಹಿರ್ ಹೀಗೆ ದೊಡ್ಡ ಸ್ಟಾರ್ಸ್‌ ಕಲಾವಿದರ ದಂಡನ್ನೇ ಕಾಣಬಹುದು. ‘ಕೂಲಿ’ ಟ್ರೇಲರಿನಲ್ಲಿ ರಜನಿಕಾಂತ್ ಮಾತ್ರವೇ ಅಲ್ಲದೆ ಸಿನೆಮಾನಲ್ಲಿ ನಟಿಸಿರುವ ಎಲ್ಲ ಪ್ರಮುಖ ನಟ-ನಟಿಯರಿಗೂ ಸ್ಪೇಸ್ ನೀಡಲಾಗಿದೆ. ಆರಂಭದಲ್ಲಿ ‘ಕೂಲಿ’ ಸಿನೆಮಾದ ಟ್ರೇಲರ್‌ ಬಿಡುಗಡೆ ಆಗುವುದೇ ಇಲ್ಲ ಎಂಬ ಸುದ್ದಿ ಹರಡಿತ್ತು. ಆ ಬಳಿಕ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಚಿತ್ರತಂಡ, ಈಗ ಸಖತ್ ಪವರ್​ಫುಲ್ ಆಗಿರುವ ಟ್ರೇಲರನ್ನೇ ಬಿಡುಗಡೆ ಮಾಡಿದೆ. ಇನ್ನು ಔಟ್‌ ಅಂಡ್‌ ಔಟ್‌ ಆಕ್ಷನ್‌ ಜೊತೆಗೆ ಮಾಸ್‌ ಕಂಟೆಂಟ್‌ ಹೊಂದಿರುವ ‘ಕೂಲಿ’ ಟ್ರೇಲರ್‌ ಮಾಸ್‌ ಆಡಿಯನ್ಸ್‌ಗೆ ಸಖತ್‌ ಥ್ರಿಲ್ ನೀಡುವಂತೆ ಮೂಡಿಬಂದಿದೆ.

ಮಾಸ್‌ ಕಂಟೆಂಟ್‌ ಫುಲ್‌ ಎಂಟರ್‌ಟೈನ್ಮೆಂಟ್‌…

‘ಕೂಲಿ’ ಸಿನೆಮಾದಲ್ಲಿ ಹಲವಾರು ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ಎಲಿವೇಶನ್​ ದೃಶ್ಯಗಳಿವೆ ಎಂಬುದನ್ನು ಈಗ ಬಿಡುಗಡೆ ಆಗಿರುವ ಟ್ರೇಲರ್‌ ಹೇಳುತ್ತಿದೆ. ರಜನಿಕಾಂತ್‌ ಅವರೊಂದಿಗೆ ಅಮಿರ್ ಖಾನ್, ಉಪೇಂದ್ರ ಅವರ ಆಕ್ಷನ್​ ಸೀನ್​ಗಳು ಟ್ರೇಲರ್​​ನಲ್ಲಿವೆ. ನಾಗಾರ್ಜುನ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ರಜನೀಕಾಂತ್, ಸತ್ಯರಾಜ್ ಗೆಳೆಯರಾಗಿದ್ದು, ಸತ್ಯರಾಜ್ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ರಚಿತಾ ರಾಮ್ ಸಹ ಟ್ರೇಲರಿನಲ್ಲಿ ಕಂಡು ಮರೆಯಾಗುತ್ತಾರೆ. ಇನ್ನು ಉಪ್ಪಿಯ ಅದುರುವ ಕಣ್ಣುಗಳು ಸಹ ಟ್ರೇಲರಿ​​ನಲ್ಲಿ ಜಾಗ ಪಡೆದುಕೊಂಡಿವೆ.

‘ಕೂಲಿ’ ಸಿನೆಮಾದ ಟ್ರೇಲರ್‌ ಕೊನೆಯಲ್ಲಿ ಸಖತ್ ಟ್ವಿಸ್ಟ್ ಇರುವಂಥ ‘ಭಾಷಾ’ ಸಿನೆಮಾದ ಝಲಕ್ ಅನ್ನು ನಿರ್ದೇಶಕ ಲೋಕೇಶ್ ಕನಕರಾಜ್‌ ನೀಡಿದ್ದಾರೆ. ಸಿನಿಮಾದಲ್ಲಿ ರಜನೀಕಾಂತ್ ಪಾತ್ರದ ಹೆಸರು, ಟ್ರೇಲರ್‌ ಕೊನೆಯಲ್ಲಿ ಬದಲಾಗುವ ಆ ಕಲರ್ ಸ್ಕೀಂ ನೋಡಿದರೆ ‘ಕೂಲಿ’ ಸಿನೆಮಾ ರಜನೀಕಾಂತ್ ನಟನೆಯ ‘ಭಾಷಾ’ ಸಿನೆಮಾದ ಕಥೆಯೊಂದಿಗೆ ಬೆಸೆದುಕೊಂಡಿರುವಂತೆ ಕಾಣುತ್ತದೆ.

ಆಗಸ್ಟ್‌ 14ಕ್ಕೆ ‘ಕೂಲಿ’ ರಿಲೀಸ್‌…

ಇನ್ನು ‘ಕೂಲಿ’ ಸಿನೆಮಾದ ಟ್ರೇಲರ್‌ ನೋಡಿದವರು ಇದು ರಜನಿಕಾಂತ್‌ ಅಭಿನಯದ ‘ಭಾಷಾ’ ಸಿನೆಮಾದ ಸೀಕ್ವೆಲ್ ಎಂದು ಹೇಳುತ್ತಿದ್ದು, ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.  ಹಾಗೇನಾದರೂ, ‘ಕೂಲಿ’ ಸಿನೆಮಾ ‘ಬಾಷಾ’ ಸಿನೆಮಾದ ಸೀಕ್ವೆಲ್‌ ಆಗಿದ್ದರೆ, ಮಾತ್ರ ರಜನೀ ಅಭಿಮಾನಿಗಳಿಗೆ ಅದು ಬಿಗ್‌ ಸರ್‌ಪ್ರೈಸ್‌ ಎಂದೇ ಹೇಳಬಹುದು. ಇನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿರುವ ಈ ‘ಕೂಲಿ’ ಸಿನೆಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ‘ಸನ್ ನೆಟ್​ವರ್ಕ್ಸ್’​ನ ಕಲಾನಿಧಿ ಮಾರನ್ ಈ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, ಇದೇ ಆಗಸ್ಟ್ 14 ರಂದು ‘ಕೂಲಿ’ ಸಿನೆಮಾ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ ಬರಲಿದೆ.

Related Posts

error: Content is protected !!