ಉಪೇಂದ್ರ ‘ನೆಕ್ಸ್ಟ್ ಲೆವೆಲ್’ ಚಿತ್ರಕ್ಕೆ ಆರಾಧನಾ ನಾಯಕಿ
ಉಪೇಂದ್ರ ‘ನೆಕ್ಸ್ಟ್ ಲೆವೆಲ್’ಗೆ ಮಾಲಾಶ್ರೀ ಪುತ್ರಿ ಆರಾಧನಾ ಜೋಡಿ
‘ನೆಕ್ಸ್ಟ್ ಲೆವೆಲ್’ ಸಿನೆಮಾಗೆ ‘ಕಾಟೇರ’ ಕ್ವೀನ್ ಆರಾಧನಾ ನಾಯಕಿ
ಉಪೇಂದ್ರ ಸಿನೆಮಾಗೆ ಸಿಕ್ಕಳು ನಾಯಕಿ…
ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಕಾಟೇರ’ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ, ಮೊದಲ ಸಿನೆಮಾದಲ್ಲೇ ಸಿನಿಪ್ರಿಯರ ಮನ ಮತ್ತು ಗಮನ ಎರಡನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
‘ಕಾಟೇರ’ ಸಿನೆಮಾದ ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ನಟಿ ಆರಾಧನಾ, ಈಗ ಸದ್ದಿಲ್ಲದೆ ತಮ್ಮ ಎರಡನೇ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ.
ಮತ್ತೊಮ್ಮೆ ಸ್ಟಾರ್ ಸಿನೆಮಾಕ್ಕೆ ಹೀರೋಯಿನ್!
ಹೌದು, ನಟಿ ಆರಾಧನಾ ಅಭಿನಯಿಸುತ್ತಿರುವ ಎರಡನೇ ಸಿನೆಮಾದ ಹೆಸರು ‘ನೆಕ್ಸ್ಟ್ ಲೆವೆಲ್’. ಕೆಲ ದಿನಗಳ ಹಿಂದಷ್ಟೇ ಈ ಸಿನೆಮಾದ ಟೈಟಲ್ ಅನೌನ್ಸ್ ಮಾಡಿದ್ದ ಚಿತ್ರತಂಡ, ಇದೀಗ ಈ ಸಿನೆಮಾದ ಹೆಸರನ್ನೂ ಕೂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಅಂದಹಾಗೆ ‘ರಿಯಲ್ ಸ್ಟಾರ್’ ಉಪೇಂದ್ರ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ನೆಕ್ಸ್ಟ್ ಲೆವೆಲ್’ ಸಿನೆಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ಮೊದಲ ಸಿನೆಮಾದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಹೀರೋಗೆ ಜೋಡಿಯಾಗಿ ಅಭಿನಯಿಸಿದ್ದ ಆರಾಧನಾ, ಇದೀಗ ತಮ್ಮ ಎರಡನೇ ಚಿತ್ರದಲ್ಲಿಯೂ ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. 
ತರುಣ್ ಶಿವಪ್ಪ ನಿರ್ಮಾಣ, ಅರವಿಂದ್ ಕೌಶಿಕ್ ನಿರ್ದೇಶನ
ಇನ್ನು ‘ನೆಕ್ಸ್ಟ್ ಲೆವೆಲ್’ ಸಿನೆಮಾವನ್ನು ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ. ‘ರೋಸ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ತರುಣ್ ಶಿವಪ್ಪ, ಆ ಬಳಿಕ ಶಿವರಾಜಕುಮಾರ್ ಅಭಿನಯದ ‘ಮಾಸ್ ಲೀಡರ್’ ಸಿನೆಮಾವನ್ನು ನಿರ್ಮಿಸಿದ್ದರು. ಅದಾದ ಬಳಿಕ ‘ವಿಕ್ಟರಿ-2’, ‘ಖಾಕಿ’, ‘ಛೂ ಮಂತರ್’ ಹೀಗೆ ಈಗಾಗಲೇ ಐದು ಸಿನೆಮಾಗಳನ್ನು ನಿರ್ಮಿಸಿರುವ ತರುಣ್ ಶಿವಪ್ಪ, ಇದೀಗ ತಮ್ಮ ಆರನೇ ಸಿನೆಮಾವಾಗಿ ‘ನೆಕ್ಸ್ಟ್ ಲೆವೆಲ್’ ಅನ್ನು ಕೈಗೆತ್ತಿಕೊಂಡಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ‘ನೆಕ್ಸ್ಟ್ ಲೆವೆಲ್’ ಸಿನೆಮಾ ಮೂಡಿಬರುತ್ತಿದೆ.
ಟೈಟಲ್‌ಗೆ ತಕ್ಕಂತೆ ‘ನೆಕ್ಸ್ಟ್ ಲೆವೆಲ್’ ಸಿನೆಮಾ ನಿರ್ಮಾಣ!
ಇನ್ನು ಸಿನೆಮಾದ ಟೈಟಲ್ಗೆ ತಕ್ಕಂತೆ, ‘ನೆಕ್ಸ್ಟ್ ಲೆವೆಲ್’ ಸಿನೆಮಾ ‘ನೆಕ್ಸ್ಟ್ ಲೆವೆಲ್’ನಲ್ಲೇ ನಿರ್ಮಾಣವಾಗುತ್ತಿದೆಯಂತೆ! ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಸೇರಿದಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ‘ನೆಕ್ಸ್ಟ್ ಲೆವೆಲ್’ ನಿರ್ಮಾಣವಾಗುತ್ತಿದೆ.
ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿಯೇ ‘ನೆಕ್ಸ್ಟ್ ಲೆವೆಲ್’ ಸಿನೆಮಾದ ಅದ್ಧೂರಿ ಮುಹೂರ್ತ ನಡೆಯಲಿದ್ದು, ಆ ಬಳಿಕ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ಭಾರತದ ಹಲವು ಕಡೆ ‘ನೆಕ್ಸ್ಟ್ ಲೆವೆಲ್’ ಚಿತ್ರದ ಶೂಟಿಂಗ್ ನಡೆಯಲಿದೆ. ಸಿನೆಮಾದ ಹೆಚ್ಚಿನ ಭಾಗ ವಿಎಫ್‌ಎಕ್ಸ್‌ನಿಂದ ಕೂಡಿರಲಿದೆ. ಇದಕ್ಕಾಗಿ ಈ ಚಿತ್ರತಂಡವು ಕೆನಡಾ ಸೇರಿದಂತೆ ಅನೇಕ ವಿದೇಶಿ ಗ್ರಾಫಿಕ್ಸ್ ಸ್ಟುಡಿಯೋಗಳು ಹಾಗೂ ಭಾರತದ ಪ್ರತಿಷ್ಠಿತ ಗ್ರಾಫಿಕ್ಸ್ ನಿರ್ಮಾಣ ಸಂಸ್ಥೆಗಳ ಸಹಯೋಗದೊಂದಿಗೆ ಪ್ಯಾನ್ ಇಂಡಿಯಾ ಮಟ್ಟದ ಈ ದೊಡ್ಡ ಸಿನೆಮಾವನ್ನು ಕಡಿಮೆ ಅವಧಿಯಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. 
‘ನೆಕ್ಸ್ಟ್ ಲೆವೆಲ್’ ಉಪ್ಪಿ ಸ್ಟೈಲ್‌ನಲ್ಲೇ ಇರಲಿದೆಯಂತೆ…
ಉಪೇಂದ್ರ ಅಭಿನಯದ ಬ್ಲಾಕ್‌ಬಸ್ಟರ್ ‘ಎ’, ‘ಉಪೇಂದ್ರ’, ‘ರಕ್ತ ಕಣ್ಣೀರು’ ಸಿನೆಮಾಗಳ ಶೈಲಿಯಲ್ಲೇ ‘ನೆಕ್ಸ್ಟ್ ಲೆವೆಲ್’ ಸಿನೆಮಾ ಕೂಡ ಇರಲಿದೆ ಅನ್ನೋದು ಮತ್ತೊಂದು ವಿಶೇಷ. ಇದನ್ನ ದೊಡ್ಡ ಮಟ್ಟದಲ್ಲಿಯೇ ಮಾಡೋಕೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ‘ಛೂ ಮಂತರ್’ ಚಿತ್ರದ ಕ್ಯಾಮರಾಮನ್ ಅನೂಪ್ ಕಟ್ಟುಕರನ್ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಸದ್ಯ ‘ನೆಕ್ಸ್ಟ್ ಲೆವೆಲ್’ ಸಿನೆಮಾದ ನಾಯಕಿಯಾಗಿ ಆರಾಧನಾ ಆಯ್ಕೆಯಾಗಿದ್ದು, ಉಳಿದಂತೆ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ತೆರೆಮರೆಯಲ್ಲಿ ನಡೆಯುತ್ತಿದೆ.















