Pop Corner

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಚಿತ್ರ

ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ

ಲಕ್ಷ್ಮಿ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಮನೋರಂಜನ್ ರವಿಚಂದ್ರನ್ ಹೊಸಚಿತ್ರ ಶುರು

ಮುಹೂರ್ತದ ಸಂಭ್ರಮದಲ್ಲಿ ಮನೋರಂಜನ್ ಹೊಸಚಿತ್ರ

ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಈ ವರ್ಷದ ಸದ್ದಿಲ್ಲದೆ ಮತ್ತೊಂದು ಹೊಸ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ. ಹೌದು, ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಇನ್ನೂ ಹೆಸರಿಡದ ಈ ಸಿನೆಮಾದ ಮುಹೂರ್ತ ಇತ್ತೀಚೆಗೆ ಸದ್ದಿಲ್ಲದೆ ನೆರವೇರಿದೆ.

ಅಂದಹಾಗೆ, ಮನೋರಂಜನ್ ರವಿಚಂದ್ರನ್ ಅವರ ಐದನೇ ಸಿನೆಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ‘ಶ್ರೀಲಕ್ಷ್ಮಿ ನರಸಿಂಹಸ್ವಾಮಿ’ ಸನ್ನಿಧಿಯಲ್ಲಿ ಸರಳವಾಗಿ ನೆರವೇರಿದೆ. ಮನೋರಂಜನ್‌ ಹೊಸ ಸಿನೆಮಾ ಸಾಹಸಕ್ಕೆ ಅವರ ಸಹೋದರ ವಿಕ್ರಮ್ ರವಿಚಂದ್ರನ್ ಸಾಥ್ ಕೊಟ್ಟಿದ್ದಾರೆ. ಮನೋರಂಜನ್‌ ಹೊಸ  ಸಿನೆಮಾಗೆ ಕ್ಲ್ಯಾಪ್ ಮಾಡಿದ ವಿಕ್ರಮ್‌ ರವಿಚಂದ್ರನ್‌, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಸಾಹೇಬ’ನಿಗೆ ಹೊಸ ಚಿತ್ರದ ಮೇಲೆ ನಿರೀಕ್ಷೆ…

‘ಸಾಹೇಬ’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿರುವ ಕ್ರೇಜಿಸ್ಟಾರ್ ರವಿಚಂದ್ರನ್‌  ಪುತ್ರ ಮನೋರಂಜನ್ ರವಿಚಂದ್ರನ್ ಆ ನಂತರ ಒಂದಷ್ಟು ಸಿನೆಮಾಗಳಲ್ಲಿ ಅಭಿನಯಿಸಿದರೂ, ಆ ಯಾವ ಸಿನೆಮಾಗಳೂ ಕೂಡ ಮನೋರಂಜನ್‌ಗೆ ಹೇಳಿಕೊಳ್ಳುವ ಮಟ್ಟಿಗೆ ಸಕ್ಸಸ್‌ ತಂದುಕೊಡಲಿಲ್ಲ. ಕಳೆದ ಎರಡು – ಮೂರು ವರ್ಷಗಳಿಂದ ಚಿತ್ರರಂಗದಿಂದ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದ ರವಿಪುತ್ರ ಮನೋರಂಜನ್‌, ಈ ಬಾರಿ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಹಾಜರಾಗುವ ತಯಾರಿಯಲ್ಲಿದ್ದಾರೆ. ಹಿಂದಿನ ತಮ್ಮ ಎಲ್ಲಾ ಸಿನೆಮಾಗಳಿಗಿಂತ ವಿಭಿನ್ನವಾದ ಕಂಟೆಂಟ್‌ ಅನ್ನು ಈ ಬಾರಿ ಮನು ಆಯ್ಕೆ ಮಾಡಿಕೊಂಡಿದ್ದು, ಈ ಸಿನೆಮಾ ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂಬ ಭರವಸೆಯಲ್ಲಿದ್ದಾರೆ.

ಒಂದೊಳ್ಳೆ ಕಂಟೆಂಟ್ ಗೆ ಕಮರ್ಷಿಯಲ್ ಟಚ್!

ಇನ್ನು ಮನೋರಂಜನ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ ಯುವ ಪ್ರತಿಭೆ ರುದ್ರೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟ ಮನೋರಂಜನ್ ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿ ಜೊತೆಯಾಗಿದ್ದಾರೆ. ನಟಿ ಅನುಷಾ ರೈ ಕೂಡ ಈ ಚಿತ್ರದ ಸ್ಪೆಷಲ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಒಂದೊಳ್ಳೆ ಕಂಟೆಂಟ್ ಗೆ ಕಮರ್ಷಿಯಲ್ ಟಚ್ ಕೊಟ್ಟು ನಿರ್ದೇಶಕ ರುದ್ರೇಶ್ ಕಥೆ ಹೆಣೆದಿದ್ದು, ಅದನ್ನು ತೆರೆಮೇಲೆ ತರುತ್ತಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತ ಸಿನೆಮಾ ಇದಾಗಲಿದೆ. ಎಂಬುದು ನವ ನಿರ್ದೇಶಕರು ಮತ್ತು ಚಿತ್ರತಂಡದ ನಿರೀಕ್ಷೆಯ ಮಾತು. ಒಟ್ಟಾರೆ ರವಿಪುತ್ರನ ಹೊಸ ಸಿನೆಮಾ ಹೇಗಿರಲಿದೆ? ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಚಿತ್ರ ಬಿಡುಗಡೆಯಾಗಿ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

ಮುಂದಿನ ವರ್ಷ ಥಿಯೇಟರಿಗೆ ಬರುವ ಸಾಧ್ಯತೆ

‘ವೈಎಸ್ ಪ್ರೊಡಕ್ಷನ್’ನಡಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಮ್ಯೂಸಿಕ್, ಸೆಲ್ವಂ ಕ್ಯಾಮೆರಾ ವರ್ಕ್ ಹಾಗೂ ಕೆ. ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಆಗಸ್ಟ್‌ ಎರಡನೇ ವಾರದಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ‌. ಆ ಬಳಿಕ ಬಾದಾಮಿ ಸುತ್ತಮುತ್ತ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ಸುಮಾರು ನಾಲ್ಕು ಹಂತಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಮನೋರಂಜನ್‌ ಹೊಸ ಸಿನೆಮಾ ಥಿಯೇಟರಿಗೆ ಬರುವ ಸಾಧ್ಯತೆಯಿದೆ.

Related Posts

error: Content is protected !!