Street Beat

‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಹಾಡುಗಳ ಬಿಡುಗಡೆ

ಯುವ ಪ್ರತಿಭೆಗಳ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಹಾಡು ಹೊರಕ್ಕೆ

ಲವ್, ಥ್ರಿಲ್ಲಿಂಗ್, ಎಮೋಶನ್‌ ಕಥಾನಕ ಹೊತ್ತ ಚಿತ್ರ ಸೆ. 5 ಕ್ಕೆ ಬಿಡುಗಡೆ

ಮಹಾಮೌನದ ನಡುವೆಯೇ ಮೂಡಿದ ಮೆಲೋಡಿ ಗೀತೆ 

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಆಸ್ಟಿನ್ ನ ಮಹನ್ಮೌನ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಈ ಚಿತ್ರದ ಟೀಸರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ. ಯುವ ಪ್ರತಿಭೆ ವಿನಯ ಕುಮಾರ್ ವೈದ್ಯನಾಥನ್ ‘ಆಸ್ಟಿನ್ ನ ಮಹನ್ಮೌನ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವುದರ ಜೊತೆಗೆ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದಾರೆ.

‘ಆಸ್ಟಿನ್ ನ ಮಹನ್ಮೌನ’ ಮಾತಾದಾಗ… 

‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿದ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ವಿನಯ ಕುಮಾರ್ ವೈದ್ಯನಾಥನ್, ‘ಮೂಲತಃ ನಾನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಚಿತ್ರರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಬೆಳೆಸಿಕೊಂಡ ನಾನು, ನನ್ನ ಶಿಕ್ಷಣ ಮುಗಿಸಿದ ಬಳಿಕ ಚಿತ್ರರಂಗದತ್ತ ಮುಖ ಮಾಡಿದೆ. ಈಗಾಗಲೇ ಹಲವು ಸಿನೆಮಾಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಾಗೆಯೇ ಒಂದಷ್ಟು ಕಿರು ಚಿತ್ರಗಳನ್ನ ನಿರ್ದೇಶನ ಮಾಡುತ್ತಾ, ತಾಂತ್ರಿಕ ವಿಭಾಗದಲ್ಲಿ ಕೂಡ ಹೆಚ್ಚು ಅನುಭವವನ್ನು ಪಡೆದು ಕೊಂಡಿದ್ದೇನೆ. ಸುಮಾರು 13 ವರ್ಷಗಳ ನಂತರ ಈ ಸಿನೆಮಾದ ಮೂಲಕ ನನ್ನ ಕನಸು ಈಗ ನನಸಾಗುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ನಾನೇ ನಟಿಸಿ, ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡಿದ್ದೇನೆ. ಈ ಚಿತ್ರದ ಟೈಟಲ್ ಕಥೆಗೆ ಸೂಕ್ತವಾಗಿದ್ದು, ಹಾಗಾಗಿ ಅದನ್ನೇ ಇಟ್ಟಿದ್ದೇವೆ’ ಎಂದರು.

ನಾಯಕಿಯರಿಗೆ ‘ಆಸ್ಟಿನ್ ನ ಮಹನ್ಮೌನ’ ಮೇಲೆ ಭರಪೂರ ನಿರೀಕ್ಷೆ…

ಈ ಚಿತ್ರದ ನಾಯಕಿ ರಿಷಾ ಗೌಡ ಮಾತನಾಡುತ್ತಾ, ‘ನಾನು ಮೂಲತಃ ಮೈಸೂರಿನವಳು, ಕಲಾ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡಿಕೊಂಡು ಬಂದಿದ್ದೇನೆ. ಇದು ನನ್ನ ಮೂರನೇ ಚಿತ್ರ. ಹೀರೋಯಿನ್ ಗಳನ್ನು ಗ್ಲಾಮರಸ್ ಪಾತ್ರಗಳಿಗೆ ಹೆಚ್ಚು ಬಳಸಿಕೊಳ್ಳುತ್ತಾರೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ನನಗೆ ಒಂದು ಉತ್ತಮ ಪಾತ್ರ ನೀಡಿದ್ದು, ಹೋಮ್ಲಿ ಹುಡುಗಿಯಾಗಿ ಅಭಿನಯಿಸಿದ್ದೇನೆ. ಚಿತ್ರದ ಕಂಟೆಂಟ್ ನೋಡಿ ಒಪ್ಪಿಕೊಂಡಿದ್ದೆ. ಚಿತ್ರ ಸೊಗಸಾಗಿ ಬಂದಿದೆ. ನಮ್ಮನ್ನ ಹರಸಿ, ಬೆಳೆಸಿ’ ಎಂದರು.

ಚಿತ್ರದ ಇನ್ನೋರ್ವ ನಾಯಕಿ ಮೈಸೂರಿನ ಬೆಡಗಿ ಪ್ರಕೃತಿ ಪ್ರಸಾದ್ ಮಾತನಾಡುತ್ತ, ‘ನಾನು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಚಿತ್ರವಾಗಿದ್ದು, ಡಾಕ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನನ್ನ ಪಾತ್ರವೂ ಬಹಳ ವಿಭಿನ್ನವಾಗಿದೆ. ಹಾಡುಗಳು ನಿಮಗೆ ಹೇಗೆ ಅನ್ನಿಸಿತು, ನಿರ್ದೇಶಕ ಬಹಳಷ್ಟು ಶ್ರಮ ಪಟ್ಟಿದ್ದಾರೆ. ನಮಗೆ ಬೆಂಬಲವನ್ನ ನೀಡಿ’ ಎಂದು ಕೇಳಿಕೊಂಡರು.

‘ಆಸ್ಟಿನ್ ನ ಮಹನ್ಮೌನ’ ಜಾತ್ಯಾತೀತ, ಧರ್ಮಾತೀತವಂತೆ..!

ಅಂದಹಾಗೆ, ‘ಆಸ್ಟಿನ್ ನ ಮಹನ್ಮೌನ’ ಚಿತ್ರ ಯಾವುದೇ ಜಾತಿ, ಧರ್ಮದ ಕಥೆಯನ್ನು ಒಳಗೊಂಡಿಲ್ಲ. ಇದೊಂದು ಪ್ಯೂರ್ ಎಮೋಷನಲ್, ಲವ್, ಥ್ರಿಲ್ಲಿಂಗ್ ಕಥೆಯನ್ನು ಒಳಗೊಂಡಿರುವ ಸಿನೆಮಾ. ‘ಆಸ್ಟಿನ್’ ಎನ್ನುವುದು ನಾಯಕನ ಪಾತ್ರದ ಹೆಸರು. ಈ ಚಿತ್ರದಲ್ಲಿ ನಾಯಕ ನಟನಿಗೆ ಎರಡು ಶೇಡ್ ಗಳಲ್ಲಿ ಬರುವಂತಹ ಪಾತ್ರವಿದೆ. ಅದು ಯಾಕೆ ಏನು ಎಂಬುದನ್ನು ಸಿನೆಮಾ ನೋಡಿಯೇ ತಿಳಿಯಬೇಕು. ಇನ್ನು ಈ ಚಿತ್ರದಲ್ಲಿ ಇರುವ ಬಹುತೇಕ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಧರ್ಮದಾಗಿದ್ದು, 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆ ಎಂಬುದು ‘ಆಸ್ಟಿನ್ ನ ಮಹನ್ಮೌನ’ ಚಿತ್ರತಂಡದ ಬಂದಿರುವ ವಿವರಣೆ.

ಶೀಘ್ರದಲ್ಲಿಯೇ ‘ಆಸ್ಟಿನ್ ನ ಮಹನ್ಮೌನ’ ತೆರೆಮುಂದೆ ಮಾತಾಡಲಿದೆ…

2023 ರಲ್ಲಿ ಆರಂಭಗೊಂಡ ‘ಆಸ್ಟಿನ್ ನ ಮಹನ್ಮೌನ’ ಚಿತ್ರವನ್ನು ಮೈಸೂರು , ಹೊನ್ನಾವರ ಹಾಗೂ ಚಿಕ್ಕಮಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸುಮಾರು 23 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸದ್ಯ ‘ಆಸ್ಟಿನ್ ನ ಮಹನ್ಮೌನ’ ಚಿತ್ರದ ಟೀಸರ್‌ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಇದೇ ವರ್ಷ ಸೆಪ್ಟಂಬರ್ 5ರಂದು ರಾಜ್ಯದ್ಯಂತ ‘ಕೆ.ಆರ್.ಜೆ ಫಿಲ್ಮ್ಸ್’ ಮೂಲಕ ‘ಆಸ್ಟಿನ್ ನ ಮಹನ್ಮೌನ’ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇನ್ನು ‘ಆಸ್ಟಿನ್ ನ ಮಹನ್ಮೌನ’ ಚಿತ್ರದಲ್ಲಿ ಬಾಲರಾಜವಾಡಿ, ರಘು ರಾಮನಕೊಪ್ಪ, ಜಗಪ್ಪ, ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ, ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಿಶ್ವಿ ಸಂಗೀತ ಸಂಯೋಜಿಸಿದ್ದಾರೆ.  ‘ಎವಿವಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳನ್ನು ‘ಎಂ.ಆರ್.ಟಿ ಮ್ಯೂಸಿಕ್’ ನಲ್ಲಿ ಬಿಡುಗಡೆಯಾಗಿದೆ. ಒಟ್ಟಾರೆ ತನ್ನ ಟೈಟಲ್‌ ಮತ್ತು ಕಥಾಹಂದರದ ಮೂಲಕ ಗಮನ ಸೆಳೆಯುತ್ತಿರುವ ‘ಆಸ್ಟಿನ್ ನ ಮಹನ್ಮೌನ’ ಥಿಯೇಟರಿನಲ್ಲಿ ಹೇಗಿರಲಿದೆ ಎಂಬುದು, ಇದೇ ಸೆಪ್ಟೆಂಬರ್‌ ವೇಳೆಗೆ ಗೊತ್ತಾಗಲಿದೆ.

Related Posts

error: Content is protected !!