ಚಂದನವನಕ್ಕೆ ಮೊತ್ತೊಬ್ಬ ಚೆಂದದ ನಟ ರಾಹುಲ್
‘ನೀ ನಂಗೆ ಅಲ್ಲವಾ…’ ಅಂತ ಚಂದನವನಕ್ಕೆ ರಾಹುಲ್ ಎಂಟ್ರಿ
‘ಸುರಮ್ ಮೂವಿ’ ಬ್ಯಾನರ್ ನಿಂದ ನಿರ್ಮಾಣನವಾಗುತ್ತಿರುವ ‘ನೀ ನಂಗೆ ಅಲ್ಲವಾ…’ ಚಿತ್ರಕ್ಕೆ ರಾಹುಲ್ ಹೀರೋ
ಯುವನಟ ರಾಹುಲ್ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯ 
ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಾಯಕ ನಟರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಆ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಮತ್ತೊಂದು ಹೊಸ ಹೆಸರು ರಾಹುಲ್. ಹೌದು, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ‘ಬಘೀರ’ ಸಿನೆಮಾಗಳಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಯುವ ನಟ ರಾಹುಲ್ ಈಗ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ರಾಹುಲ್ ನಾಯಕ ನಟನಾಗಿ ಚಂದನವನಕ್ಕೆ ಪರಿಚಯವಾಗುತ್ತಿರುವುದು ‘ನೀ ನಂಗೆ ಅಲ್ಲವಾ…’ ಎಂಬ ಸಿನೆಮಾದ ಮೂಲಕ. ಕನ್ನಡದ ಜನಪ್ರಿಯ ಗೀತೆಯೊಂದರ ಸಾಲುಗಳನ್ನೇ ಈ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿರುವ ಚಿತ್ರತಂಡ, ಈ ಸಿನೆಮಾದ ಮೂಲಕ ರಾಹುಲ್ ಎಂಬ ಹೊಸ ಹೀರೋವನ್ನು ಕನ್ನಡದ ಸಿನಿಪ್ರಿಯರ ಮುಂದೆ ಪರಿಚಯಿಸುವ ಯೋಜನೆ ಹಾಕಿಕೊಂಡಿದೆ.
ಬೆಂಗಳೂರು ಹುಡುಗನ ಸಿನಿ ಕನಸು…
ಅಂದಹಾಗೇ, ರಾಹುಲ್ ಬೆಂಗಳೂರು ಮೂಲದ ಹುಡುಗ. ಸದ್ಯ ಬೆಂಗಳೂರಿನಲ್ಲಿ ಬಿಬಿಎ ವಿದ್ಯಾಭ್ಯಾಸ ಮಾಡಿರುವ ರಾಹುಲ್, ಸಿನೆಮಾರಂಗದಲ್ಲಿ ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸನ್ನು ಹೊತ್ತುಕೊಂಡಿರುವ ಹುಡುಗ. ತಮ್ಮ ಶಿಕ್ಷಣದ ಬಳಿಕ ಸಿನೆಮಾದಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಆಶಯದಿಂದ ಆಡಿಷನ್ ಕೊಡುವುದಕ್ಕೆ ಶುರು ಮಾಡಿದ್ದ ರಾಹುಲ್. ಬಳಿಕ ಕಲಾವಿದೆ ಉಷಾ ಭಂಡಾರಿ ಅವರ ಗರಡಿಯಲ್ಲಿ ಪಳಗಿದ ರಾಹುಲ್, ಅಲ್ಲಿಂದ ವರ್ಕ್ ಶಾಪ್ ಮುಗಿಸಿಕೊಂಡು ಬಂದು ಸಿನೆಮಾದಲ್ಲಿ ಅಭಿನಯಿಸಲು ಶುರು ಮಾಡಿದರು. 
ಅಪ್ಪು ಅಂದ್ರೆ ಸ್ಫೂರ್ತಿ..!
ಇನ್ನು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (ಅಪ್ಪು) ಅಂದ್ರೆ ಯುವನಟ ರಾಹುಲ್ ಗೆ ಸ್ಪೂರ್ತಿ. ಪುನೀತ್ ರಾಜಕುಮಾರ್ ಅವರ ಜೊತೆಗೆ ‘ಯುವರತ್ನ’ ಸಿನೆಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಕ್ಕೇನೆ ಸಾರ್ಥಕ ಭಾವವನ್ನು ವ್ಯಕ್ತಪಡಿಸುತ್ತಾರೆ ರಾಹುಲ್. ಮತ್ತೊಬ್ಬ ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಣ್ಣನ ಸ್ಥಾನದಲ್ಲಿ ನಿಂತು ಸಪೋರ್ಟ್ ಮಾಡ್ತಾ ಇರುವುದಕ್ಕೆ ಕೂಡ ರಾಹುಲ್ ಖುಷಿ ಪಡುತ್ತಾರೆ. ‘ಅಪ್ಪು ಸರ್ ಬಿಟ್ರೆ ಗೋಲ್ಡನ್ ಹಾರ್ಟ್ಸ್ ಅಂದ್ರೆ ಅಂದ್ರೆ ಮುರುಳಿ ಅಣ್ಣನೆ. ನನ್ನ ಫಿಟ್ನೆಸ್ ಗೂ ಅವರೇ ಕಾರಣ. ಅವರಿಂದ ಕಲಿಯುವುದು ಸಾಕಷ್ಟಿದೆ’ ಎನ್ನುತ್ತಾರೆ ರಾಹುಲ್.
‘ನೀ ನಂಗೆ ಅಲ್ಲವಾ…’ ಚಿತ್ರಕ್ಕೆ ರಾಹುಲ್ ಹೀರೋ
ಸದ್ಯ ‘ನೀ ನಂಗೆ ಅಲ್ಲವಾ…’ ಸಿನೆಮಾದ ಮೂಲಕ ಯುವನಟ ರಾಹುಲ್ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಕೆಲ ಸಮಯದ ಹಿಂದೆ ಸಂಗೀತ ನಿರ್ದೇಶಕ ಸೂರಜ್ ಅವರಿಂದ ನಿರ್ದೇಶಕ ಮನೋಜ್ ಅವರ ಪರಿಚಯವಾಗುತ್ತದೆ. ಆ ಪರಿಚಯ ನಟ ರಾಹುಲ್ ಅವರನ್ನು ನಾಯಕ ನಟನನ್ನಾಗಿ ಮಾಡುತ್ತದೆ. ಹೀಗೆ ಶುರುವಾದ ಕಥೆಯೇ ‘ನೀ ನಂಗೆ ಅಲ್ಲವಾ…’ ಸಿನೆಮಾ. ಮೊದಲಿಗೆ ಕಥೆ ಎಲ್ಲಾ ಮಾಡಿಕೊಂಡ ತಂಡ, ನಿರ್ಮಾಪಕ ಜಯರಾಮ್ ದೇವಸಮುದ್ರ ಅವರನ್ನು ಭೇಟಿ ಮಾಡುತ್ತದೆ. ಅವರಿಗೂ ಕಥೆ ಇಷ್ಟವಾಗಿ ‘ಸುರಮ್ ಮೂವಿ’ ಬ್ಯಾನರ್ ನಲ್ಲಿ ಸಿನೆಮಾವನ್ನು ನಿರ್ಮಾಣ ಮಾಡಲು ಮುಂದಾಗುತ್ತಾರೆ. 
ಮೊದಲಿನಿಂದಲೂ ನಿರ್ಮಾಪಕ ಜಯರಾಮ್ ದೇವಸಮುದ್ರ ಅವರಿಗೆ ಸಿನೆಮಾ ಮೇಲೆ ವಿಪರೀತ ಪ್ಯಾಷನ್. ತಮ್ಮ ‘ಸುರಮ್ ಮೂವಿ’ ಬ್ಯಾನರ್ ನಲ್ಲಿ ಈಗಾಗಲೇ ಕನ್ನಡದಲ್ಲಿ ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಎಂಬ ಸಿನೆಮಾ ಮಾಡಿದ ಅನುಭವವಿರುವ ಜಯರಾಮ್ ದೇವಸಮುದ್ರ, ಅದರ ಬೆನ್ನಲ್ಲೇ ಚೈತ್ರಾ ಆಚಾರ್ ಗೆ ಕೂಡ ಒಂದು ಸಿನೆಮಾ ಅನೌನ್ಸ್ ಮಾಡಿದ್ದಾರೆ. ಇದರ ಜೊತೆಗೆ ಶ್ರೀಮುರುಳಿ ಅವರ ಜೊತೆಗೂ ಸಿನೆಮಾ ಮಾಡುತ್ತಿದ್ದು, ಶೀಘ್ರದಲ್ಲಿಯೇ ಅಧಿಕೃತ ಟೈಟಲ್ ಅನೌನ್ಸ್ ಆಗಲಿದೆ. ಇದೆಲ್ಲರ ಜೊತೆ ಜೊತೆಗೇ ಹೊಸ ಪ್ರತಿಭೆ ರಾಹುಲ್ ಅವರಿಗೆ ‘ನೀ ನಂಗೆ ಅಲ್ಲವಾ…’ ಎಂಬ ಹೊಸ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ನೀ ನಂಗೆ ಅಲ್ಲವಾ…’ ಎಲ್ಲರಿಗೂ ಇಷ್ಟವಾಗುತ್ತದೆ…
ಈ ಹಿಂದೆ ಕನ್ನಡದಲ್ಲಿ ‘ಆನ’ ಮತ್ತು ‘ಮೇರಿ’ ಸಿನೆಮಾಗಳನ್ನು ನಿರ್ದೇಶನ ಮಾಡಿರುವ ಮನೋಜ್ ಪಿ. ನಡುಲಮನೆ ಅವರೇ ಈ ಸಿನೆಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಸದ್ಯ ‘ನೀ ನಂಗೆ ಅಲ್ಲವಾ…’ ಸಿನೆಮಾದ ಬಹುತೇಕ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಮಧ್ಯಮ ಕುಟುಂಬದ ಹುಡುಗನೊಬ್ಬನ ಜೀವನ ಕಥೆಯ ಸುತ್ತ ‘ನೀ ನಂಗೆ ಅಲ್ಲವಾ…’ ಚಿತ್ರ ಸಾಗುತ್ತದೆ. ಈ ಚಿತ್ರದಲ್ಲಿ ರಾಹುಲ್ ಮಧ್ಯಮ ಕುಟುಂಬದ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ಗೆ ಬೇಕಾಗುವ ಎಲ್ಲಾ ಅಂಶಗಳೂ ಈ ಸಿನೆಮಾದಲ್ಲಿರಲಿದೆಯಂತೆ. ”ನೀ ನಂಗೆ ಅಲ್ಲವಾ…’ ಸಿನೆಮಾಕ್ಕಾಗಿಯೇ ನಟ ರಾಹುಲ್ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ‘ನೀ ನಂಗೆ ಅಲ್ಲವಾ…’ ಸಿನೆಮಾದ ಪಾತ್ರಕ್ಕಾಗಿಯೇ ಡ್ಯಾನ್ಸ್, ಆಕ್ಟಿಂಗ್ ಎಲ್ಲಾ ಥರದ ತಯಾರಿ ಮಾಡಿಕೊಂಡು ಸೆಟ್ ಹೋಗುವುದಕ್ಕೂ ಮುನ್ನವೇ ರಿಹರ್ಸಲ್ ಮಾಡಿಕೊಂಡು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆ. ಈ ಸಿನೆಮಾ ಎಲ್ಲಾ ಥರದ ಆಡಿಯನ್ಸ್ ಗೂ ಇಷ್ಟವಾಗಲಿದೆ. ಈ ಸಿನೆಮಾದ ಮೇಲೆ ನನಗೆ ಸಾಕಷ್ಟು ಭರವಸೆಯಿದೆ’ ಎನ್ನುತ್ತಾರೆ ರಾಹುಲ್.















