ಕೋಮಲ್ ಹೊಸ ಅವತಾರ; ‘ಕೋಣ’ ಟ್ರೇಲರ್ ರಿಲೀಸ್..
ಥಿಯೇಟರ್‌ನಲ್ಲಿ ‘ಕೋಣ’ ಚಿತ್ರದ ಟ್ರೇಲರ್ ಬಿಡುಗಡೆ
ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್…
ಕುತೂಹಲ ಹೆಚ್ಚಿಸಿದ ‘ಕೋಣ’ ಚಿತ್ರದ ಟ್ರೇಲರ್…
ಇದೇ 2025ರ ಅಕ್ಟೋಬರ್ 2ರಂದು ಕನ್ನಡದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನೆಮಾ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಸಿನೆಮಾದ ಜೊತೆ ಜೊತೆಯಲ್ಲೇ ಥಿಯೇಟರಿನಲ್ಲಿ ನಟ ಕೋಮಲ್ ಕುಮಾರ್ ಅವರ ಫ್ಯಾನ್ಸ್ ಗೆ ಕೂಡ ಖುಷಿಯಾಗುವ ವಿಷಯವೊಂದಿದೆ. ಅದೇನಪ್ಪ ಅಂತೀರಾ..? ಅದೇನೆಂದರೆ, ‘ಕಾಂತಾರ 1’ ಸಿನೆಮಾ ಬಿಡುಗಡೆಯಾಗಿರುವ ಎಲ್ಲಾ ಥಿಯೇಟರ್ ನಲ್ಲಿ ಕೋಮಲ್ ಕುಮಾರ್ ಅಭಿನಯಿಸುತ್ತಿರುವ ಮುಂಬರುವ ‘ಕೋಣ’ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ.
ಹೌದು, ಕೋಮಲ್ ಕುಮಾರ್ ಅಭಿನಯದ ಮುಂಬರುವ ‘ಕೋಣ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರವನ್ನು ತೆರೆಗೆ ತರುವ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಸದ್ಯ ನಿಧಾನವಾಗಿ ‘ಕೋಣ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ಕೋಣ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಕೆಲಸ ಸಮಯದ ಹಿಂದೆ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ‘ಕೋಣ’ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇನ್ನು ಬಿಡುಗಡೆಯಾಗಿರುವ ‘ಕೋಣ’ ಚಿತ್ರದ ಟ್ರೇಲರ್ ನಲ್ಲಿ ನಟ ಕೋಮಲ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೇಗಿದೆ ‘ಕೋಣ’ ಚಿತ್ರದ ಟ್ರೇಲರ್..?
ಇನ್ನು ಡಾರ್ಕ್ ಕಾಮೆಡಿ ಶೈಲಿಯಲ್ಲಿ ‘ಕೋಣ’ ಸಿನೆಮಾ ಮೂಡಿಬರಲಿದೆ. ಚಿತ್ರದ ಟ್ರೇಲರ್‌ನಲ್ಲಿಯೂ ಕೂಡ ಇದೇ ಅಂಶಗಳನ್ನು ತೆರೆದಿಡಲಾಗಿದೆ. ‘ಕೋಣ’ ಸಿನೆಮಾದ ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಕೀರ್ತಿರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ. ಕೆ. ಮಠ, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರೀ, ಗೋಲ್ಡ್ ಸುರೇಶ್, ಸುಷ್ಮಿತಾ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ಕಲಾವಿದರ ತಾರಾಬಳಗವೇ ‘ಕೋಣ’ ಸಿನೆಮಾದಲ್ಲಿದೆ.
‘ಕೋಣ’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಶೀಘ್ರದಲ್ಲಿಯೇ ‘ಕೋಣ’ ಸಿನೆಮಾ ತೆರೆಗೆ…
ಈ ಹಿಂದೆ ನಟ ಜಗ್ಗೇಶ್ ನಟನೆಯ ‘8 ಎಂ. ಎಂ’ ಸಿನೆಮಾಗೆ ನಿರ್ದೇಶನ ಮಾಡಿದ್ದ ಎಸ್. ಹರಿಕೃಷ್ಣ ‘ಕೋಣ’ ಸಿನೆಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ.
ಕೋಮಲ್ ಕುಮಾರ್ ಅವರು ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ‘ಕೋಣ’ ಸಿನೆಮಾದಲ್ಲಿ ನಿಭಾಯಿಸಿದ್ದಾರೆ. ‘ಕುಪ್ಪಂಡಾಸ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್. ಎನ್ ಅವರು ‘ಕೋಣ’ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ಕೋಣ’ ಸಿನೆಮಾದ ಹಾಡುಗಳಿಗೆ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ನಾಗರಾಜ್‌ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು ಇವರ ಜೊತೆ ವಿಶಾಲ್ ಗೌಡ ಸಹ ಕೈ ಜೋಡಿಸಿದ್ದಾರೆ. ಉಮೇಶ್ ಆರ್. ಬಿ. ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್, ಮುರುಗನ್ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್, ಸಂದೀಪ್ ಆಚಾರ್ಯ ಸಂಭಾಷಣೆ ಚಿತ್ರಕ್ಕಿದ್ದು ಸದ್ಯ ಟ್ರೇಲರ್‌ನಲ್ಲಿ ‘ಕೋಣ’ ನಿಧಾನವಾಗಿ ಪ್ರೇಕ್ಷಕರನನ್ನು ಸೆಳೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯದೊಳಗೆ ‘ಕೋಣ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.















