2021ನೇ ಸಾಲಿನ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಪ್ರಕಟ
2021ನೇ ಸಾಲಿನ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಘೋಷಣೆ
‘ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡ ‘ದೊಡ್ಡಹಟ್ಟಿ ಬೋರೇಗೌಡ’
ರಕ್ಷಿತ್ ಶೆಟ್ಟಿ, ಅರ್ಚನಾ ಜೋಯಿಸ್ ಮುಡಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿಯ ಗರಿ
2021ನೇ ಸಾಲಿನ ಕನ್ನಡ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ (Karnataka State FIlm Awards) ಪ್ರಕಟ ಆಗಿದೆ. ‘777 ಚಾರ್ಲಿ’ ಚಲನಚಿತ್ರದಲ್ಲಿನ ಅಭಿನಯಕ್ಕಾಗಿ ನಟ ರಕ್ಷಿತ್ ಶೆಟ್ಟಿ ಅವರು ‘ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ’ ಪಡೆದಿದ್ದಾರೆ.
‘ಮ್ಯೂಟ್’ ಚಲನಚಿತ್ರದ ಅಭಿನಯಕ್ಕಾಗಿ ನಟಿ ಅರ್ಚನಾ ಜೋಯಿಸ್ ಅವರು ‘ಅತ್ಯುತ್ತಮ ನಟಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಕೆ. ಎಂ. ರಘು ನಿರ್ದೇಶನದ ‘ದೊಡ್ಡಹಟ್ಟಿ ಬೋರೆಗೌಡ’ ಚಿತ್ರಕ್ಕೆ ‘ಮೊದಲನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ’ ನೀಡಲಾಗಿದೆ. ‘777 ಚಾರ್ಲಿ’ ಚಲನಚಿತ್ರ ‘2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ’ ಪಡೆದುಕೊಂಡಿದೆ. ‘ಬಿಸಿಲು ಕುದುರೆ’ ಚಲನಚಿತ್ರ ‘3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ’ ತನ್ನದಾಗಿಸಿಕೊಂಡಿದೆ.
58 ಚಿತ್ರಗಳ ಪೈಕಿ ಅತ್ಯುತ್ತಮ ಚಿತ್ರಗಳ ಆಯ್ಕೆ
2021ನೇ ಸಾಲಿನ ಪ್ರಶಸ್ತಿಗಳಿಗೆ ಒಟ್ಟು 58 ಚಿತ್ರಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ ‘ಫಿಸಿಕ್ಸ್ ಟೀಚರ್’, ‘ಪುಟ್ಟನ ಸ್ವರ್ಗ’, ‘ಸಾವಿತ್ರಿ’ ಚಿತ್ರಗಳು 2021ರಲ್ಲಿ ಸೆನ್ಸಾರ್ ಆಗಿ 2022ರಲ್ಲಿ ಮರುಸೆನ್ಸಾರ್ ಆದ ಹಿನ್ನೆಲೆಯಲ್ಲಿ ಮತ್ತು ‘ಡಿಯರ್ ವಿಕ್ರಮ್’ ಹೆಸರಿ
ನಲ್ಲಿ ಅರ್ಜಿ ಸಲ್ಲಿಸಿದ್ದ ಚಿತ್ರವು ಅದೇ ಹೆಸರಿನಲ್ಲಿ ಬಿಡುಗಡೆಯಾಗಿದ್ದರೂ, ಚಿತ್ರದ ಹೆಸರಿನಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಇಲ್ಲದಿದ್ದರಿಂದ ಹಾಗೂ 90 ನಿಮಿಷಗಳ ಅವಧಿಗಿಂತ ಕಡಿಮೆ ಇದ್ದ ಕಾರಣ ಮತ್ತು ‘ಏಕಚಕ್ರ’ ಚಿತ್ರವು ತಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಸಮಿತಿಯು ವೀಕ್ಷಿಸಿಲ್ಲ. ಈ ಐದು ಚಿತ್ರಗಳನ್ನು ಹೊರತುಪಡಿಸಿ ಮಿಕ್ಕಂತೆ 53 ಚಿತ್ರಗಳನ್ನು ಆಯ್ಕೆ ಸಮಿತಿಯು ವೀಕ್ಷಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ’ ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸದಾಶಿವ ಶೆಣೈ, ಸದಸ್ಯರಾಗಿ ರೆಹಮಾನ್ (ನಿರ್ಮಾಪಕ), ಜಿ. ಕೆ. ಮುದ್ದುರಾಜು (ನಿರ್ದೇಶಕರು) ಮುಂತಾದವರು ಈ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.
ಪ್ರಶಸ್ತಿ ಪಡೆದ ಚಲನಚಿತ್ರಗಳ ವಿವರ ಈ ಕೆಳಕಂಡಂತೆ ಇದೆ
ಅತ್ಯುತ್ತಮ ಅತ್ಯುತ್ತಮ ಚಿತ್ರ: ‘ದೊಡ್ಡಹಟ್ಟಿ ಬೋರೇಗೌಡ’
ದ್ವಿತೀಯ ಅತ್ಯುತ್ತಮ ಚಿತ್ರ: ‘777 ಚಾರ್ಲಿ’
ಮೂರನೇ ಅತ್ಯುತ್ತಮ ಚಿತ್ರ: ‘ಬಿಸಿಲು ಕುದುರೆ’
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ‘ಭಾರತದ ಪ್ರಜೆಗಳಾದ ನಾವು’
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ‘ಯುವರತ್ನ’
ಅತ್ಯುತ್ತಮ ಮಕ್ಕಳ ಚಿತ್ರ: ‘ಕೇಕ್’ 
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ‘ಬಡವ ರಾಸ್ಕಲ್’ (ಶಂಕರ್ ಗುರು)
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ‘ನಾಡ ಪೆದ ಆಶಾ’ (ಕೊಡವ ಭಾಷೆ)
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (‘777 ಚಾರ್ಲಿ’)
ಅತ್ಯುತ್ತಮ ನಟಿ: ಅರ್ಚನಾ ಜೋಯಿಸ್ (‘ಮ್ಯೂಟ್’)
ಅತ್ಯುತ್ತಮ ಪೋಷಕ ನಟ: ಪ್ರಮೋದ್ (‘ರತ್ನನ್ ಪ್ರಪಂಚ’)
ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (‘ರತ್ನನ್ ಪ್ರಪಂಚ’)
ಅತ್ಯುತ್ತಮ ಕಥೆ: ಮಂಜುನಾಥ್ ಮುನಿಯಪ್ಪ (‘9 ಸುಳ್ಳು ಕಥೆಗಳು’)
ಅತ್ಯುತ್ತಮ ಚಿತ್ರಕಥೆ: ರಘು ಕೆ. ಎಂ (‘ದೊಡ್ಡಹಟ್ಟಿ ಬೋರೇಗೌಡ’)
ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (‘ತಾಯಿ ಕಸ್ತೂರ್ ಗಾಂಧಿ’)
ಅತ್ಯುತ್ತಮ ಛಾಯಾಗ್ರಹಣ: ಭುವನೇಶ್ ಪ್ರಭು (‘ಅಮ್ಮೆ ಸಂಸಾರ’ – ಕೊಂಕಣಿ)
ಅತ್ಯುತ್ತಮ ಸಂಗೀತ ನಿರ್ದೇಶನ: ಇಮ್ತಿಯಾಜ್ ಸುಲ್ತಾನ್ (‘ಬಿಸಿಲು ಕುದುರೆ’)
ಅತ್ಯುತ್ತಮ ಸಂಕಲನ: ಪ್ರತೀಕ್ ಶೆಟ್ಟಿ (‘777 ಚಾರ್ಲಿ’)
ಅತ್ಯುತ್ತಮ ಬಾಲನಟ: ಮಾಸ್ಟರ್ ಅತೀಶ್ ಶೆಟ್ಟಿ (‘ಕೇಕ್’)
ಅತ್ಯುತ್ತಮ ಬಾಲನಟಿ: ಬೇಬಿ ಭೈರವಿ (‘ಭೈರವಿ’)
ಅತ್ಯುತ್ತಮ ಕಲಾ ನಿರ್ದೇಶನ: ರವಿ ಸಂತೇಹಕ್ಲು (‘ಭಜರಂಗಿ 2’)
ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ (‘777 ಚಾರ್ಲಿ’ ಚಿತ್ರದ ‘ಮಡಿಲನಲ್ಲಿ ಕಡಲಿನಷ್ಟು ಹರಿಗಳಿದ್ದರು …’)
ಅತ್ಯುತ್ತಮ ಹಿನ್ನೆಲೆ ಗಾಯಕ: ಅನೀಶ್ ಕೇಶವ ರಾವ್ (‘ಶ್ರೀ ಜಗನ್ನಾಥ ದಾಸರು’ – ‘ರಾಮದೂತನ ಪಾದ…’)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಹನಾ ಎಂ. ಭಾರದ್ವಾಜ್ (‘ದಂಡಿ’ – ‘ಮುಗಿಲೇ ಮಾತಾಡು ಮನಸಾಗಿ…’)
ತೀರ್ಪುಗಾರರ ವಿಶೇಷ ಪ್ರಶಸ್ತಿ: ‘ಭೈರವಿ’, ವಸ್ತ್ರವಿನ್ಯಾಸ (ಯೋಗಿ ಜಿ. ರಾಜ್ – ಭಜರಂಗಿ 2) ಮತ್ತು ಪ್ರಸಾದನ – ಶಿವಕುಮಾರ್ (ತಾಯಿ ಕಸ್ತೂರ್ ಗಾಂಧಿ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಕುಮಾರ್ ಎಸ್ (ಶಿವಾರ್ಜುನ್) – ‘ಪೊಗರು’















