Video

ದರ್ಶನ್‌ ‘ದಿ ಡೆವಿಲ್’ ಅಡ್ಡದಿಂದ ಹೊರಬಂತು ಎರಡನೇ ಹಾಡು

ಬಿಡುಗಡೆಯಾಯಿತು ‘ದಿ ಡೆವಿಲ್’ನ ಮತ್ತೊಂದು ಗೀತೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ದಿ ಡೆವಿಲ್’ ಚಿತ್ರದ ಎರಡನೇ ಗೀತೆ ಬಿಡುಗಡೆ

ಸದ್ದಿಲ್ಲದೆ ಬಿಡುಗಡೆಯಾಯಿತು ‘ದಿ ಡೆವಿಲ್’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌

ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ತೂಗುದೀಪ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲೇ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ‘ದಿ ಡೆವಿಲ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಕೆಲ ದಿನಗಳ ಹಿಂದೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿತ್ತು. ಇದೀಗ ‘ದಿ ಡೆವಿಲ್’ ಚಿತ್ರತಂಡ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ದಿ ಡೆವಿಲ್’ ಸೆಕೆಂಡ್‌ ಸಾಂಗ್‌..?

ಇನ್ನು ‘ದಿ ಡೆವಿಲ್’ ಚಿತ್ರದ ಎರಡನೇ ಹಾಡು ‘ಸರೆಗಮ’ ಯೂ-ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿದೆ.  ಸಾಮಾನ್ಯವಾಗಿ ಬಿಗ್‌ ಸ್ಟಾರ್ ನಟರ ಹಾಗೂ ಮಾಸ್ ಆಕ್ಷನ್ ಸಿನೆಮಾಗಳಲ್ಲಿ ಮೆಲೋಡಿ ಸಂಗೀತಕ್ಕೆ, ಅರ್ಥಪೂರ್ಣ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎನ್ನುವ ಮಾತುಗಳ ನಡುವೆಯೇ ಅದಕ್ಕೆ ಅಪವಾದವೆಂಬಂತೆ, ಈ ಗೀತೆ ಮೂಡಿಬಂದಿದೆ ಎನ್ನಬಹುದು. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯ ‘ದಿ ಡೆವಿಲ್’ ಚಿತ್ರದ ಈ ಹಾಡಿಗೆ ಪ್ರಮೋದ್‌ ಮರವಂತೆ ಸಾಹಿತ್ಯದ ಸಾಲುಗಳನ್ನು ಪೋಣಿಸಿದ್ದಾರೆ. ‘ಒಂದೆ ಒಂದು ಸಲ ಸೋತು ಬಿಡೆ ನೀ… ಒಂದೇ ಒಂದು ಮಾತು ಆಡದೆ…’ ಎಂಬ ಸಾಲುಗಳ ಸಾಹಿತ್ಯವಿರುವ ಈ ಗೀತೆಗೆ ಗಾಯಕ ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಧ್ವನಿಯಾಗಿದ್ದಾರೆ.

ಇನ್ನು ‘ದಿ ಡೆವಿಲ್’ ಚಿತ್ರದ ಈ ಹಾಡು ಕೇಳಕ್ಕೆ ಮಾತ್ರವಲ್ಲ, ನೋಡುವುದಕ್ಕೂ ಸುಂದರವಾಗಿದೆ. ಕಡಲ ಹಿನ್ನೆಲೆಯಲ್ಲಿ ಈ ಹಾಡನ್ನು ಸುಂದರವಾಗಿ ಚಿತ್ರೀಕರಿಸಲಾಗಿದ್ದು, ಛಾಯಾಗ್ರಹಕ ಸುಧಾಕರ್ ಎಸ್. ರಾಜ್ ತಮ್ಮ ಕ್ಯಾಮರಾದಲ್ಲಿ ಹಾಡನ್ನು ರೊಮ್ಯಾಂಟಿಕ್‌ ಆಗಿ ಸೆರೆಹಿಡಿದಿದ್ದಾರೆ. ಇಡೀ ಹಾಡಿನ ಬ್ಯೂಟಿಯನ್ನು ಹೆಚ್ಚಿಸಿರೋದು ಲೋಕೇಶನ್ ಗಳು ಎನ್ನಬಹುದು. ಸಂತು ಮಾಸ್ಟರ್ ಅವರ ನೃತ್ಯ ಸಂಯೋಜನೆಯಲ್ಲಿ ಈ ಗೀತೆ ತೆರೆಮೇಲೆ ಮೂಡಿಬಂದಿದೆ.

‘ದಿ ಡೆವಿಲ್’ ಚಿತ್ರದ ‘ಒಂದೇ ಒಂದು ಸಲ…’ ಎಂಬ ಎರಡನೇ ಗೀತೆಯನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ಡಿಸೆಂಬರ್‌ನಲ್ಲಿ ತೆರೆಮೇಲೆ ‘ದಿ ಡೆವಿಲ್’ ದರ್ಶನ

ಸದ್ಯ ಬಿಡುಗಡೆಯಾಗಿರುವ ‘ದಿ ಡೆವಿಲ್’ ಚಿತ್ರದ ಎರಡನೇ ಹಾಡಿಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳಂತೂ ಈ ಹಾಡು ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ. ಇನ್ನು ‘ದಿ ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ದಿ ಡೆವಿಲ್’ ಚಿತ್ರದಲ್ಲಿ ದರ್ಶನ್‌ ಅವರೊಂದಿಗೆ ತುಳಸಿ, ಅಚ್ಯುತ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭರಾಜ್ ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ಒಟ್ಟಾರೆ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ದಿ ಡೆವಿಲ್’ ಚಿತ್ರ ಇದೇ 2025ರ ಡಿಸೆಂಬರ್‌ 12ಕ್ಕೆ ಅದ್ದೂರಿಯಾಗಿ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!