Pop Corner

‘ಗಾಡ್ ಪ್ರಾಮಿಸ್’ಗೆ ಸಿಕ್ಕಳು ನಾಯಕಿ…

‘ಗಾಡ್ ಪ್ರಾಮಿಸ್’ ಸಿನಿಮಾಗೆ ಜೂಹಿ ಜಯಕುಮಾರ್ ನಾಯಕಿ

ಕೇರಳ ಮೂಲದ ಜೂಹಿ ‘ಗಾಡ್ ಪ್ರಾಮಿಸ್’ ಮೂಲಕ ಕನ್ನಡಕ್ಕೆ…

ಸೂಚನ್ ಶೆಟ್ಟಿಗೆ ಜೂಹಿ ಜಯಕುಮಾರ್ ನಾಯಕಿ

ನವ ನಿರ್ದೇಶಕ ಸೂಚನ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿ ಬರ್ತಿರುವ ಸಿನೆಮಾ ‘ಗಾಡ್ ಪ್ರಾಮಿಸ್’. ಈಗಾಗಲೇ ತನ್ನ ಟೈಟಲ್ ಮತ್ತು ಕಂಟೆಂಟ್‌ ನಿಂದ ಕುತೂಹಲ ಹೆಚ್ಚಿಸಿರುವ ಈ ‘ಗಾಡ್ ಪ್ರಾಮಿಸ್’ ಚಿತ್ರದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ‘ಗಾಡ್ ಪ್ರಾಮಿಸ್’ ಸಿನೆಮಾಕ್ಕೆ ಹೊಸ ನಾಯಕ ನಟಿಯ ಆಗಮನವಾಗಿದೆ. ಹೌದು, ‘ಗಾಡ್ ಪ್ರಾಮಿಸ್’ ಸಿನೆಮಾಕ್ಕೆ ಕೇರಳ ಮೂಲದ ನಟಿ ಜೂಹಿ ಜಯಕುಮಾರ್‌ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಮಲಯಾಳಂನ ಹಲವು ಚಿತ್ರಗಳಲ್ಲಿ ಮಿಂಚಿರುವ ಜೂಹಿ ಜಯಕುಮಾರ್ ಇದೇ ಮೊದಲ ಬಾರಿಗೆ ‘ಗಾಡ್ ಪ್ರಾಮಿಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಚಂದನವನಕ್ಕೆ ಅಡಿಯಿಡುತ್ತಿರುವ ಜೂಹಿ ಜಯಕುಮಾರ್

ಈಗಾಗಲೇ ‘ಪವಿ ಕೇರ್ ಟೇಕರ್’, ‘ತಲೈವಾ ತಲೈವಿ’ ಹಾಗೂ ‘ಸುಮತಿ ಒಲವು’ ಮೊದಲಾದ ಸಿನೆಮಾಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ಜೂಹಿ ಜಯಕುಮಾರ್‌, ಭರವಸೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿರುವಾಕೆ. ಇದೀಗ ‘ಗಾಡ್ ಪ್ರಾಮಿಸ್’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಜೂಹಿ ಜಯಕುಮಾರ್‌ ಕನ್ನಡಿಗರಿಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ‘ಗಾಡ್ ಪ್ರಾಮಿಸ್’ ಚಿತ್ರತಂಡ, ಜೂಹಿ ಜಯಕುಮಾರ್ ಅವರನ್ನು ಆಡಿಷನ್ ಮೂಲಕ ಚಿತ್ರಕ್ಕೆ ನಾಯಕ ನಟಿಯಾಗಿ ಆಯ್ಕೆ ಮಾಡಿದೆ. ಈ ಮೂಲಕ ಕನ್ನಡಕ್ಕೆ ಪರಭಾಷೆಯಿಂದ ಜೂಹಿ ಹೆಸರಿನ ಮತ್ತೊಬ್ಬ (ಈ ಹಿಂದೆ ಹಿಂದಿಯಿಂದ ಜೂಹಿ ಚಾವ್ಲಾ ನಾಯಕಿಯಾಗಿ ಕನ್ನಡಕ್ಕೆ ಪರಿಚಯವಾಗಿದ್ದರು) ನಟಿಮಣಿಯ ಆಗಮನವಾಗುತ್ತಿದೆ.

ಐದು ಸಾವಿರಕ್ಕೂ ಹೆಚ್ಚು ಆಡಿಷನ್‌! ಕೊನೆಗೂ ಜೂಹಿಗೆ ಮಣೆ…

ಚಿತ್ರತಂಡದ ಮೂಲಗಳ ಪ್ರಕಾರ, ಕುಂದಾಪುರ ಹಾಗೂ ಬೆಂಗಳೂರು ಎರಡು ಕಡೆ ‘ಗಾಡ್ ಪ್ರಾಮಿಸ್’ ಚಿತ್ರದ ನಾಯಕಿಯ ಪಾತ್ರಕ್ಕಾಗಿ ಕಲಾವಿದರ  ಆಡಿಷನ್ ನಡೆಸಲಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಎರಡು ವಿಧದಲ್ಲಿ ‘ಗಾಡ್ ಪ್ರಾಮಿಸ್’ ಚಿತ್ರದ ಆಡಿಷನ್ ನಡೆಸಲಾಗಿತ್ತು. ಈ ಪೈಕಿ ಸುಮಾರು 4 ಸಾವಿರಕ್ಕೂ ಹೆಚ್ಚು‌ ಆನ್ ಲೈನ್ ನಲ್ಲಿ ಹಾಗೂ ಆಫ್ ಲೈನ್ ಆಡಿಷನ್ ನಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇಷ್ಟು ಜನರ ಪೈಕಿ ಅಂತಿಮವಾಗಿ ಚಿತ್ರದ ನಾಯಕಿಯ ಪಾತ್ರಕ್ಕೆ ಜೂಹಿ ಜಯಕುಮಾರ್ ಸೂಕ್ತರಾಗಿದ್ದಾರೆಂದು ಚಿತ್ರತಂಡ ಅವರನ್ನು ಆಯ್ಕೆ ಮಾಡಿದೆ. ಆಯ್ಕೆ ಬಳಿಕ ಜೂಹಿ ಅವರಿಗಾಗಿ ವರ್ಕ್ ಶಾಪ್ ನಡೆಸಲಾಯಿತು. ಈ ವೇಳೆ ಅವರು ತಮ್ಮ ಕಲಾ ಕೌಶಲ್ಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಜೂಹಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಜೂಹಿ ತಮ್ಮ ಪಾತ್ರದ ಮೂಲಕ ನೋಡುಗರ ಮನಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ ‘ಗಾಡ್ ಪ್ರಾಮಿಸ್’ ಚಿತ್ರತಂಡ.

‘ಗಾಡ್ ಪ್ರಾಮಿಸ್’ ಪಾತ್ರದ ಮೇಲೆ ಜೂಹಿ ನಿರೀಕ್ಷೆ…

ಇನ್ನು ‘ಗಾಡ್ ಪ್ರಾಮಿಸ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಜೂಹಿ ಜಯಕುಮಾರ್, “ಗಾಡ್ ಪ್ರಾಮಿಸ್ ಸಿನೆಮಾದಲ್ಲಿ ನನ್ನ ಪಾತ್ರಕ್ಕೆ ತುಂಬಾ ಒಳ್ಳೆ ಸ್ಕೋಪ್ ಇದೆ. ಮರ ಸುತ್ತವ ಪಾತ್ರವಲ್ಲ. ಬದಲಿಗೆ ತೂಕ ಇರುವಂತಹ ಪಾತ್ರದಲ್ಲಿ ತಾವು ಅಭಿನಯಿಸಿದ್ದೇನೆ.‌‌ ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ. ನಿರ್ದೇಶಕ ಸೂಚನ್ ಶೆಟ್ಟಿ ಹೊಸತನಕ್ಕೆ ತುಡಿತ ಹೊಂದಿರುವ ನಿರ್ದೇಶಕರು.‌ ‘ಗಾಡ್ ಪ್ರಾಮಿಸ್’ ಈಗಿನ ಪ್ರೇಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿದೆ. ಇದೊಂದು ಹೊಸಥರದ ಸಿನೆಮಾವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದೇ ವರ್ಷಾಂತ್ಯಕ್ಕೆ ‘ಗಾಡ್ ಪ್ರಾಮಿಸ್’ ತೆರೆಗೆ…

‘ಪಾಂಚ ಜನ್ಯ ಫಿಲ್ಮ್ ಪ್ರೊಡಕ್ಷನ್’ ನಡಿ ಮಹೇಂದ್ರ ಶೆಟ್ಟಿ ನಿರ್ಮಿಸುತ್ತಿರುವ ‘ಗಾಡ್ ಪ್ರಾಮಿಸ್’ ಸಿನೆಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಮಾಡುತ್ತಿದ್ದಾರೆ. ನವೀನ್‌ ಶೆಟ್ಟಿ ಚಿತ್ರದ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಭರತ್ ಮಧುಸೂದನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈಗಾಗಲೇ ‘ಗಾಡ್ ಪ್ರಾಮಿಸ್’ ಚಿತ್ರದ ಶೇಕಡಾ 40ರಷ್ಟು ಶೂಟಿಂಗ್ ಅನ್ನು ಚಿತ್ರತಂಡ ಮುಕ್ತಾಯಗೊಳಿಸಿದೆ. ಇದೇ ಏಪ್ರಿಲ್ ತಿಂಗಳ ಅಂತ್ಯಕ್ಕೆ ‘ಗಾಡ್ ಪ್ರಾಮಿಸ್’ ಚಿತ್ರೀಕರಣ ಮುಗಿಸಿ, ಈ ವರ್ಷದ ಕೊನೆಯೊಳಗೆ ‘ಗಾಡ್ ಪ್ರಾಮಿಸ್’ ಚಿತ್ರವನ್ನು ತೆರೆಮೇಲೆ ತರುವ ಯೋಜನೆಯನ್ನು ಸೂಚನ್ ಶೆಟ್ಟಿ ಅಂಡ್ ಟೀಂ ಮಾಡಿಕೊಂಡಿದೆ.

Related Posts

error: Content is protected !!