Pop Corner

ಶಿವರಾಜಕುಮಾರ್‌ ಅಭಿನಯದ ಹೊಸಚಿತ್ರ ‘ಬೇಲ್’ ಫಸ್ಟ್ ಲುಕ್ ಹೊರಕ್ಕೆ

ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌

ಕೆವಿಎನ್-ಪವನ್ ಒಡೆಯರ್-ಶಿವಣ್ಣ ಕಾಂಬಿನೇಶನ್ ಸಿನೆಮಾದ ಟೈಟಲ್ ರಿವೀಲ್…

ಶಿವಣ್ಣ ನಟನೆಯ ‘ಬೇಲ್’ ಫಸ್ಟ್ ಲುಕ್ ಅನಾವರಣ

ಕೆಲ ದಿನಗಳ ಹಿಂದಷ್ಟೇ ‘ಕೆವಿಎನ್ ಪ್ರೊಡಕ್ಷನ್ಸ್‌’ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಕೈ ಜೋಡಿಸಿರುವ ಸುದ್ದಿ ಹೊರಬಿದ್ದಿತ್ತು. ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಬಹು ನಿರೀಕ್ಷಿತ ಸಿನೆಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಇದೀಗ ಅನಾವರಣಗೊಂಡಿದೆ. ಹೌದು, ಇದೇ ಏಪ್ರಿಲ್‌ 24ರಂದು ವರನಟ ಡಾ. ರಾಜಕುಮಾರ್‌ ಅವರ ಜನ್ಮೋತ್ಸವದ ಸಂದರ್ಭದಲ್ಲಿ ಶಿವಣ್ಣ, ‘ಕೆವಿಎನ್ ಪ್ರೊಡಕ್ಷನ್ಸ್‌’ ಮತ್ತು ಪವನ್‌ ಒಡೆಯರ್‌ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಹೊಸಚಿತ್ರದ ಫಸ್ಟ್‌ಲುಕ್‌ ಮತ್ತು ಟೈಟಲ್‌ ಅನಾವರಣ ಮಾಡಲಾಗಿದೆ.

ಅಣ್ಣಾವ್ರ ಜನ್ಮದಿನದಂದು ‘ಕೆವಿಎನ್ ಪ್ರೊಡಕ್ಷನ್ಸ್‌’ ಹೊಸ ಅನೌನ್ಸ್‌

ಅಂದಹಾಗೆ, ‘ಕೆವಿಎನ್ ಪ್ರೊಡಕ್ಷನ್ಸ್‌’ ಬ್ಯಾನರಿನಲ್ಲಿ ವೆಂಕಟ್ ಕೆ. ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಹೊಸ ಸಿನೆಮಾಗೆ ‘ಬೇಲ್’ ಎಂಬ ಟೈಟಲ್ ಇಡಲಾಗಿದೆ. ಮಳೆ‌ಯಲ್ಲಿ ಛತ್ರಿ ಹಿಡಿದು ಶಿವಣ್ಣ‌‌ ನಿಂತಿರುವ ಶಿವರಾಜಕುಮಾರ್‌ ಅವರ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದ್ದು, ಶಿವಣ್ಣ ಅವರ ಹೊಸಲುಕ್‌ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ. ಸಸ್ಪೆನ್ಸ್‌ ಕಂ ಆಕ್ಷನ್‌-ಥ್ರಿಲ್ಲರ್‌ ಶೈಲಿಯಲ್ಲಿ ‘ಬೇಲ್‌’ ಸಿನೆಮಾ ಮೂಡಿಬರಲಿದೆ ಎನ್ನಲಾಗುತ್ತಿದ್ದು, ಚಿತ್ರದ ಕಥಾಹಂದರ ಮತ್ತು ಇತರ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

ಬಿಗ್‌ ಬಜೆಟ್‌ನಲ್ಲಿ ‘ಬೇಲ್‌’ ತೆರೆಗೆ…

ಇನ್ನು ಈ ಮಹತ್ವಾಕಾಂಕ್ಷೆಯ ‘ಬೇಲ್‌’ ಸಿನೆಮಾವನ್ನು ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ತಮ್ಮದೇ ‘ಕೆವಿಎನ್ ಪ್ರೊಡಕ್ಷನ್’ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಬೇಲ್‌’ ಸಿನೆಮಾವನ್ನು ‘ಗೋವಿಂದಾಯ ನಮಃ’, ‘ಗೂಗ್ಲಿ’, ‘ರಣವಿಕ್ರಮ’, ‘ನಟಸಾರ್ವಭೌಮ’, ‘ರೇಮೋ’ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಒಡೆಯರ್‌ ನಟ ಶಿವಣ್ಣಗೆ ಆಕ್ಷನ್-ಕಟ್ ಹೇಳಬೇಕೆಂಬ ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

‘ಬೇಲ್‌’ ವಿಶೇಷ ಸಿನೆಮಾವಾಗುವ ವಿಶ್ವಾಸ…

ಇನ್ನು ‘ಬೇಲ್‌’ ಸಿನೆಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ಪವನ್ ಒಡೆಯರ್, ‘ನಿಜವಾಗಿಯೂ ಈ ಹೊಸಚಿತ್ರ ನನಗೂ ಮತ್ತು ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷವಾದ ಚಿತ್ರವಾಗಲಿದೆ. ನಿಮಗಾಗಿ ನಾವು ಬಹಳಷ್ಟು ಕಾಯ್ದಿರಿಸಿದ್ದೇವೆ ಮತ್ತು ಶೀಘ್ರದಲ್ಲೇ ಟೀಸರ್ ಅನ್ನು ಘೋಷಿಸುತ್ತೇವೆ. ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು ನನಸಾಗಿದೆ. ಅವರು ದಶಕಗಳಿಂದ ಐಕಾನ್ ಆಗಿದ್ದಾರೆ ಮತ್ತು ಹಿಂದೆಂದೂ ಮಾಡದ ರೀತಿಯಲ್ಲಿ ಅವರನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಖಂಡಿತವಾಗಿಯೂ ‘ಬೇಲ್‌’ ಶಿವಣ್ಣ ಅಭಿಮಾನಿಗಳಿಗೆ ಹೊಸಥರದ ಸಿನೆಮಾವಾಗಲಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಹೊಸ ಅವತಾರದಲ್ಲಿ ಶಿವಣ್ಣನನ್ನು ನೋಡುವ ಕಾತರ…

ಇನ್ನು ‘ಬೇಲ್’ ಸಿನೆಮಾದ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್‌ ಪ್ರೊಡಕ್ಷನ್ಸ್‌’ ಕೂಡ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ವೆಂಕಟ್‌ ಕೆ. ನಾರಾಯಣ್‌, ‘ಈ ಸಿನೆಮಾ ನಮಗೆ ಬಹಳ ವಿಶೇಷವಾದ ಯೋಜನೆಯಾಗಿದ್ದು, ಇದು ಬಲವಾದ ಕಥೆ ಹೇಳುವಿಕೆಯನ್ನು ವಿಶಿಷ್ಟ ಸಿನಿಮೀಯ ದೃಷ್ಟಿಕೋನದೊಂದಿಗೆ ಸಮತೋಲನಗೊಳಿಸುತ್ತದೆ. ಪವನ್ ಒಡೆಯರ್ ಅವರಂತಹ ಸಾಬೀತಾದ ಕಥೆಗಾರರೊಂದಿಗೆ ಕೈ ಜೋಡಿಸುವುದು ಮತ್ತು ಶಿವಣ್ಣ ಅವರಂತಹ ಐಕಾನ್ ಜೊತೆಗೆ ಕೆಲಸ ಮಾಡುವುದು ಸಂಪೂರ್ಣ ಗೌರವವಾಗಿದೆ ಮತ್ತು ಅರ್ಥಪೂರ್ಣ ಸಿನಿಮಾವನ್ನು ನೀಡುವ ನಮ್ಮ ಉದ್ದೇಶದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಪ್ರೇಕ್ಷಕರು ಇಲ್ಲಿಯವರೆಗೆ ನೋಡಿರದ ಹೊಸ ದೃಷ್ಟಿಕೋನದಲ್ಲಿ ಶಿವಣ್ಣ ಅವರನ್ನು ಪ್ರಸ್ತುತಪಡಿಸಲು ನಾವು ವಿಶೇಷವಾಗಿ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ. ಸದ್ಯ ‘ಬೇಲ್‌’ ಸಿನೆಮಾದ ಟೈಟಲ್‌ ಅನೌನ್ಸ್‌ ಆಗಿದ್ದು, ನಾಯಕ ನಟ ಶಿವರಾಜಕುಮಾರ್‌ ಅವರ ಫಸ್ಟ್‌ಲುಕ್‌ ಕೂಡ ಹೊರಬಂದಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ‘ಬೇಲ್‌’ ಚಿತ್ರ ತೆರೆಗೆ ಬರಲಿದೆ ಎನ್ನುತ್ತಿವೆ ಗಾಂಧಿನಗರದ ಮೂಲಗಳು.

Related Posts

error: Content is protected !!