ಯಶ್ ‘ಟಾಕ್ಸಿಕ್’ ಬಿಡುಗಡೆ ಮತ್ತೆ ಮುಂದಕ್ಕೆ…!
‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮತ್ತೊಮ್ಮೆ ಮುಂದೂಡಿಕೆ
ಅಧಿಕೃತವಾಗಿ ‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆ ಖಚಿತಪಡಿಸಿದ ನಟ ಯಶ್
ಜೂ. 4ಕ್ಕೆ ‘ಟಾಕ್ಸಿಕ್’ ದರ್ಶನವಿಲ್ಲ!
ಏ. 29, 2026, ಬೆಂಗಳೂರು: ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇದೇ ಮಾರ್ಚ್ ತಿಂಗಳಿನಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬಂದಿರಬೇಕಿತ್ತು. ಆದರೆ ‘ಟಾಕ್ಸಿಕ್’ ಬಿಡುಗಡೆಗೆ ಎರಡು ವಾರಗಳು ಬಾಕಿಯಿರುವಾಗಲೇ, ಚಿತ್ರತಂಡ ‘ಟಾಕ್ಸಿಕ್’ ಬಿಡುಗಡೆಯನ್ನು ಮುಂದೂಡಿರುವ ಸುದ್ದಿಯನ್ನು ಪ್ರೇಕ್ಷಕರಿಗೆ ಕೊಟ್ಟಿತ್ತು. ಮಾರ್ಚ್ ಬದಲು ಜೂನ್ 4ಕ್ಕೆ ‘ಟಾಕ್ಸಿಕ್’ ಅನ್ನು ಪ್ರೇಕ್ಷಕರ ಮುಂದೆ ತರುವ ಘೋಷಣೆಯನ್ನು ಮಾಡಿತ್ತು. ಇದೀಗ ಮತ್ತೊಮ್ಮೆ ‘ಟಾಕ್ಸಿಕ್’ ಚಿತ್ರತಂಡ ಚಿತ್ರದ ಬಿಡುಗಡೆಯನ್ನು ಮುಂದೂಡಿದೆ.
‘ಟಾಕ್ಸಿಕ್’ ಬಿಡುಗಡೆ ಮುಂದಕ್ಕೆ.. ಯಾಕೆ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನೆಮಾದ ಬಿಡುಗಡೆ ಇದೇ 2026ರ ಜೂನ್ 4ಕ್ಕೆ ನಿಗದಿಯಾಗಿತ್ತು. ಇದೀಗ ‘ಟಾಕ್ಸಿಕ್’ ಬಿಡುಗಡೆಯನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡುವ ಸಲುವಾಗಿ ಬಿಡುಗಡೆ ಮುಂದಕ್ಕೆ ಹಾಕಲಾಗಿದೆ. ‘ಸಿನೆಮಾ ಕಾನ್’ನಲ್ಲಿ ಸಿಕ್ಕ ಪ್ರತಿಕ್ರಿಯೆಯಿಂದ ಯಶ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ‘ಸಿನೆಮಾ ಕಾನ್’ (CinemaCon) ಅಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಜಾಗತಿಕ ಮಟ್ಟದ ವಿತರಕರಿಂದ ಸಿನಿಮಾಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆಯಂತೆ. ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಭರ್ಜರಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ, ಚಿತ್ರತಂಡ ತನ್ನ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಳ್ಳಲು ನಿರ್ಧರಿಸಿದೆ. ಸಿನೆಮಾವನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿ ದೊಡ್ಡ ಮಟ್ಟಕ್ಕೆ ತಲುಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯಶ್ ತಿಳಿಸಿದ್ದಾರೆ. ಸದ್ಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೋಷಿಸುವುದಾಗಿ ಯಶ್ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪತ್ರ ಹಂಚಿಕೊಂಡ ಯಶ್
ಸೋಶಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡಿಕೆಯ ಕುರಿತು ಪತ್ರವೊಂದನ್ನು ಹಂಚಿಕೊಂಡಿರುವ ನಟ ಯಶ್, ”ಟಾಕ್ಸಿಕ್’ ನನ್ನ ಪಾಲಿಗೆ ಒಂದು ವಿಶೇಷ ಪ್ರಯಾಣ. ‘ಸಿನೆಮಾ ಕಾನ್’ನಲ್ಲಿ ವ್ಯಕ್ತವಾದ ಜಾಗತಿಕ ಮಟ್ಟದ ಪ್ರತಿಕ್ರಿಯೆ ಈ ಚಿತ್ರಕ್ಕೆ ವಿಶ್ವಮಟ್ಟದಲ್ಲಿ ಸಿನಿಮಾಗೆ ದೊಡ್ಡ ವೇದಿಕೆ ಬೇಕು ಎಂಬ ನಮ್ಮ ನಂಬಿಕೆಯನ್ನು ಹೆಚ್ಚಿಸಿದೆ. ಭಾರತೀಯ ಸಿನೆಮಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಚಿತ್ರವನ್ನು ಅತ್ಯಂತ ಪ್ರಭಾವಶಾಲಿಯಾಗಿ ಪ್ರೇಕ್ಷಕರ ಮುಂದೆ ತರುವುದು ನಮ್ಮ ಜವಾಬ್ದಾರಿ. ಹೀಗಾಗಿ ಬಿಡುಗಡೆಯ ದಿನಾಂಕವನ್ನು ಬದಲಿಸಿದ್ದೇವೆ. ತಾಳ್ಮೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ನಾವು ಹೆಮ್ಮೆ ಪಡುವಂತಹ ಚಿತ್ರವನ್ನು ನೀಡುತ್ತೇವೆ’ ಎಂದು ಯಶ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಗೀತು ಮೋಹನ್ ದಾಸ್ ಅವರು ‘ಟಾಕ್ಸಿಕ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕ ಕಾಲಕ್ಕೆ ಸಿನಿಮಾ ಚಿತ್ರೀಕರಣಗೊಂಡಿದ್ದು, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಲಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಜಾಗತಿಕ ಮಟ್ಟದ ವಿತರಣೆ ಮತ್ತು ಅಂತರಾಷ್ಟ್ರೀಯ ಸಹಭಾಗಿತ್ವದ ಮೇಲೆ ಗಮನ ಹರಿಸುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮತ್ತೆ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಈಗ ಅದು ನಿಜವಾಗಿದೆ. ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಜೂನ್ 4ರಂದು ಬಿಡುಗಡೆಯಾಗುತ್ತಿಲ್ಲ. ಇದು ಫ್ತಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳಿಗೆ ನಿರಾಸೆಯಾಗಿದ್ದರೂ, ವಿಶ್ವಮಟ್ಟದ ಸಿನಿಮಾವನ್ನು ನೀಡುವ ಭರವಸೆ ನೀಡಿದ್ದಾರೆ.















