Pop Corner

‘ಜನತಾ ಸಿಟಿ’ಯಲ್ಲಿ ‘ಕೋಟಿ’ ಹಾಡು…

ಬಿಡುಗಡೆಯಾಯಿತು ʼಕೋಟಿʼ ಸಿನಿಮಾದ ಮತ್ತೊಂದು ಗೀತೆ

ಮಹಾನಗರಗಳು ಎಂತವರನ್ನೂ ಸೆಳೆಯುತ್ತವೆ‌. ಅವುಗಳು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಕೌತುಕತೆಗೆ ಸೋಲದವರಿಲ್ಲ. ಇಂತ ಒಂದು ಮಹಾನಗರ ‘ಜನತಾ ಸಿಟಿ’ಯಲ್ಲಿ ‘ಕೋಟಿ’ ಜೀವನ ನಡೆಸುತ್ತಿದ್ದಾನೆ.‌ ಇದು ಒಂದು ಭ್ರಷ್ಟ ನಗರವೂ ಹೌದು. ʼಕೋಟಿʼ ಸಿನಿಮಾದ ಈ ನಗರದ ಬಗೆಗಿನ ಹಾಡು ‘ಜನತಾ ಸಿಟಿ’ ಈಗ ಬಿಡುಗಡೆಯಾಗಿದೆ. ವಾಸುಕಿ ವೈಭವ್ ಸಾಹಿತ್ಯ ರಚಿಸಿ, ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.

ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಕೋಟಿ ‘ಜನತಾಸಿಟಿ’ಯಲ್ಲಿ ಜೀವನ ನಡೆಸುತ್ತಿದ್ದಾನೆ. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿಯುವ ಆಸೆ. ಈ ಹಾಡು ಅವನ ಮತ್ತು ಜನತಾ ಸಿಟಿಯ ಸಂಬಂಧವನ್ನು ಹೇಳುತ್ತದೆ. ಈ ಹಾಡನ್ನು ಬರೆದು, ಸಂಯೋಜಿಸುವುದು ಎಕ್ಸೈಂಟಿಂಗ್ ಮತ್ತು ಚಾಲೆಂಜಿಂಗ್ ಆಗಿತ್ತು. ಸಖತ್ ಮಜ ಮಾಡಿದೀನಿ ಈ ಹಾಡನ್ನು ಮಾಡುವ ಪ್ರಕ್ರಿಯೆಯಲ್ಲಿ” ಎಂದು ಹೇಳಿದರು.

“ಕೋಟಿ ಸಿನಿಮಾದಲ್ಲಿ ‘ಜನತಾ ಸಿಟಿ’ ಹಾಡು ನನಗೆ ತುಂಬಾ ಇಷ್ಟದ ಹಾಡು. ನಾನು ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದವನು. ಮಹಾನಗರಗಳಿಗೆ ಏನೋ ಸೆಳೆಯುವ ಗುಣ. ಈ ಹಾಡು ಮಹಾನಗರಗಳ‌ಲ್ಲಿ ಬದುಕುವ ಎಲ್ಲರಿಗೂ ತುಂಬಾ ರಿಲೇಟೆಬಲ್ ಆಗಲಿದೆ ” ಎಂದು ʼಕೋಟಿʼಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಡುತ್ತಾರೆ.

ʼಕೋಟಿʼ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ʼ777 ಚಾರ್ಲಿʼ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ʼಕಾಂತಾರʼ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ʼಜಿಯೋ ಸ್ಟುಡಿಯೋಸ್ʼ ನಿರ್ಮಾಣ ಮಾಡಿದ್ದು, ʼಕಲರ್ಸ್ ಕನ್ನಡʼವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!