ಥಿಯೇಟರಿನಲ್ಲಿ ಆಗಸ್ಟ್ 15ಕ್ಕೆ ‘ಪೌಡರ್’ ಘಮಲು!

ಜುಲೈ ಬದಲು ಆಗಸ್ಟ್ ತಿಂಗಳು ‘ಪೌಡರ್’ ಸಿನಿಮಾ ರಿಲೀಸ್
ಸಿನಿಮಾದ ಬಿಡುಗಡೆ ಒಂದು ತಿಂಗಳು ಮುಂದಕ್ಕೆ
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಜುಲೈ 15ರಂದು ದಿಗಂತ್, ಧನ್ಯಾ ರಾಮಕುಮಾರ್, ರಂಗಾಯಣ ರಘು ಮೊದಲಾದವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಪೌಡರ್’ ಸಿನಿಮಾ ಬಿಡುಗಡೆಯಾಗಿ ತೆರೆಗೆ ಬರಬೇಕಿತ್ತು.
ಚಿತ್ರತಂಡ ಕೂಡ ಕೆಲ ತಿಂಗಳ ಹಿಂದೆಯೇ ಜುಲೈ 15ರಂದು ‘ಪೌಡರ್’ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಆದರೆ ಇದೀಗ ‘ಪೌಡರ್’ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಒಂದು ತಿಂಗಳ ಕಾಲ ಮುಂದೂಡಿದೆ. ಹೌದು, ‘ಪೌಡರ್’ ಸಿನಿಮಾ ಜುಲೈ 15ರ ಬದಲು ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ‘ಪೌಡರ್’ ಸಿನಿಮಾದ ಬಿಡುಗಡೆಯ ಹೊಸ ದಿನಾಂಕವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾಗಳ ಮೂಲಕ ತಿಳಿಸಿದೆ. ಸದ್ಯ ಸಿನಿಮಾ ತಂಡ ನೀಡಿರುವ ಮಾಹಿತಿಗಳ ಪ್ರಕಾರ ಸರಿ ಸುಮಾರು ಒಂದು ತಿಂಗಳು ಕಾಲ ‘ಪೌಡರ್’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.
‘ಪೌಡರ್’ ಸಿನಿಮಾ ಮುಂದೂಡಲು ಕಾರಣವೇನು?
ಅಂದಹಾಗೆ, ‘ಪೌಡರ್’ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಲು ಸಿನಿಮಾದಲ್ಲಿ ಇನ್ನೂ ಪೂರ್ಣವಾಗದಿರುವ ತಾಂತ್ರಿಕ ಕೆಲಸಗಳು ಕಾರಣವಂತೆ. ‘ಪೌಡರ್’ ಸಿನಿಮಾ ಒಂದು ಹಾಸ್ಯಭರಿಚ ಚಿತ್ರವಾಗಿದ್ದು, ಅದರಲ್ಲಿ ಸಿ.ಜಿ.ಐ. ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಾರಲ್ಲೂ ಸಿನಿಮಾದ ಕೊನೆಯ 20ನಿಮಿಷಗಳು ಈ ತಂತ್ರ ಕೌಶಲ್ಯ ಆಧಾರಿತವಾಗಿದ್ದು, ಅದನ್ನು ಪರಿಪೂರ್ಣವಾಗಿ, ಅಚ್ಚುಕಟ್ಟಾಗಿ ಸಿನಿ ಪ್ರೇಕ್ಷಕರ ಮುಂದಿಡಲು ಇನ್ನಷ್ಟು ಸಮಯ ಮತ್ತು ಸ್ವಾತಂತ್ರ್ಯದ ಅಗತ್ಯವಿದೆ. ಈ ಕಾರಣದಿಂದ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ತಂಡವರೊಡನೆ ಚರ್ಚಿಸಿ ಸಂಸ್ಥೆಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
ಇನ್ನು ಇತ್ತೀಚೆಗಷ್ಟೇ ʼದ ಜಡ್ಜ್‌ಮೆಂಟ್ʼ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ದಿಗಂತ್ ಮತ್ತು ನಟಿ ಧನ್ಯಾ ರಾಮಕುಮಾರ್ ಜೋಡಿ ಎರಡನೇ ಬಾರಿಗೆ ‘ಪೌಡರ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ.