Street Beat

‘ಸ್ಲಂ ಶ್ರಾವಣಿ ದಿ ಗ್ರೇಟ್’ ಟೈಟಲ್ ಪೋಸ್ಟರ್ ಬಿಡುಗಡೆ

‘ಸ್ಲಂ ಶ್ರಾವಣಿ’ಗೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಸಾಥ್

ಹೊರಬಂತು ‘ಸ್ಲಂ ಶ್ರಾವಣಿ ದಿ ಗ್ರೇಟ್’ ಟೈಟಲ್ ಪೋಸ್ಟರ್

ತೆರೆಗೆ ಬರಲು ತಯಾರಾಗುತ್ತಿದೆ ‘ಸ್ಲಂ ಶ್ರಾವಣಿ’ ಸಾಹಸಗಾಥೆ

‘ಪೂರ್ವಿಕಾಮೃತ ಕ್ರಿಯೇಷನ್’ ಲಾಂಛನದ ಅಡಿಯಲ್ಲಿ ತಯಾರಾಗುತ್ತಿರುವ, ರಶ್ಮಿ ಎಸ್. (ಸಾಯಿ ರಶ್ಮಿ) ನಿರ್ದೇಶನದ ಹೊಸಚಿತ್ರಕ್ಕೆ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಚಿತ್ರದ ಶೀರ್ಷಿಕೆ ಮತ್ತು ಮೊದಲ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ.

ಹೊಸಥರದ ಪ್ರಯತ್ನಕ್ಕೆ ಶುಭಕೋರಿದ ‘ಕನಸಿನ ರಾಣಿ’

ಕನ್ನಡ ಚಿತ್ರರಂಗದ ‘ಕನಸಿನ ರಾಣಿ’, ‘ಆ್ಯಕ್ಷನ್ ಕ್ವೀನ್’ ಖ್ಯಾತಿಯ ನಟಿ ಮಾಲಾಶ್ರೀ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರದ ಶೀರ್ಷಿಕೆ ಮತ್ತು ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ನಟಿ ಮಾಲಾಶ್ರೀ, ‘ಈ ಸಿನಿಮಾದ ಟೈಟಲ್ ಮತ್ತು ಮೊದಲ ಪೋಸ್ಟರ್ ಎರಡೂ ಕೂಡ ಗಮನ ಸೆಳೆಯುವಂತಿದೆ. ಈ ಸಿನಿಮಾವನ್ನು ಆದಷ್ಟು ಬೇಗ ನಾನು ಕೂಡ ನೋಡಬೇಕೆಂದು ಕಾತುರದಿಂದ ಇದ್ದೇನೆ. ಸಿನಿಮಾ ಯಶಸ್ಸು ಗಳಿಸಿ ಒಳ್ಳೆ ದುಡ್ಡು ಮಾಡಲಿ’ ಎಂದು ಶುಭ ಹಾರೈಸಿದರು.

ರಶ್ಮಿ ಎಸ್. (ಸಾಯಿ ರಶ್ಮಿ) ನಿರ್ದೇಶನದ ಚಿತ್ರ

ಇನ್ನು ‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕಿ ರಶ್ಮಿ ಎಸ್. (ಸಾಯಿ ರಶ್ಮಿ), ‘ಈ ಹಿಂದೆ ನಾನು 5 ಸಿನಿಮಾಗಳನ್ನು ಮಾಡಿದ್ದರೂ, ಇದು ನನ್ನ ಮೊದಲ ಸಿನಿಮಾದ ರೀತಿಯಲ್ಲೇ ಕೆಲಸ ಮಾಡ್ತಾ ಇದ್ದೇನೆ. ಈ ಹಿಂದೆ ನನ್ನ ನಿರ್ದೇಶನದ ‘ಸುಮಾ ದಿ ಫ್ಲವರ್’ ಚಿತ್ರಕ್ಕೆ ಸುಮಾರು 160ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿಗಳು ಜೊತೆಗೆ ಮುಂಬೈನಲ್ಲಿ ನಡೆದ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಆಫ್ ಇಂಡಿಯಾ’ ಪ್ರಶಸ್ತಿ ಕೂಡ ಲಭಿಸಿತ್ತು. ಈಗ ಅಂಥದ್ದೇ ಮತ್ತೊಂದು ಸಾಮಾಜಿಕ ಕಥಾಹಂದರವನ್ನು ಈ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದಿದ್ದಾರೆ.

ಹರಿಹರನ್ ಬಿ. ಪಿ ನಿರ್ಮಾಣ

ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ನಟನೆ ಮತ್ತು ನಿರ್ದೇಶನ ಮಾಡಿರುವ ಹರಿಹರನ್ ಬಿ. ಪಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಸಂಸ್ಥೆಯಿಂದ ತಯಾರಾಗುತ್ತಿರುವ ಎರಡನೇ ಸಿನಿಮಾ. ‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರಕ್ಕೆ ಎನ್. ಟಿ. ಜಯರಾಮ ರೆಡ್ಡಿ ಕಥೆ, ಚಿತ್ರಕಥೆ ಬರೆದಿದ್ದು ಅವರ ಗರಡಿಯಲ್ಲೇ ಪಳಗಿದ ಹರಿಹರನ್ ಬಿ. ಪಿ ಈ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಸ್ಲಂ ಹುಡುಗಿಯ ಜೀವನದ ಕಥಾಹಂದರ

ಒಂದು ಸ್ಲಂ ಹುಡುಗಿಯ ಜೀವನದಲ್ಲಿ ನಡೆಯುವ ನೋವು, ಮುಳ್ಳುಗಳ ಹಾದಿಯಲ್ಲಿ ನಡೆದು ಮುಂದೆ ಒಂದು ಉತ್ತುಂಗ ಸ್ಥಾನಕ್ಕೆ ಹೋಗುತ್ತಾಳೆ ಎಂಬುದೇ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರದ ಕಥಾಹಂದರ. ಕಿರುತೆರೆಯ ‘ಉಧೋ ಉಧೋ ರೇಣುಕಾ ಯಲ್ಲಮ್ಮ’ ಧಾರಾವಾಹಿಯ ‘ಯಲ್ಲಮ್ಮ’ ಖ್ಯಾತಿಯ ಬೇಬಿ ಭೈರವಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ವಿಶೇಷ ಪಾತ್ರದಲ್ಲಿ ಐಶ್ವರ್ಯ ಶಿಂಧೋಗಿ, ಸನತ್, ಶಿವಕುಮಾರ್ ಆರಾಧ್ಯ, ಲಯನ್ ಸುರೇಶ್ (ಮೈಸೂರು), ನಾಗೇಂದ್ರ ಅರಸ್, ವಿಜಯಲಕ್ಷ್ಮೀ ಉಪಾಧ್ಯಾಯ, ಮಹೇಂದ್ರ ಮುನ್ನೋತ್, ಹೇಮಾ, ಮಂಜುಳಾ ರುದ್ರೇಶ್, ಮಾಸ್ಟರ್ ನಿಶ್ಚಲ್ (ಆದಿ), ಸೂರ್ಯೋದಯ (ಪರಮಾತ್ಮ ಸ್ಟುಡಿಯೋ) ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದೇ ವರ್ಷಾಂತ್ಯದಲ್ಲಿ ಪ್ರೇಕ್ಷಕರ ಮುಂದೆ…

‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರಕ್ಕೆ ಗಗನ್ ಆರ್. ಮತ್ತು ನಾಗೇಂದ್ರ ರಂಗರಿ ಛಾಯಾಗ್ರಹಣವಿದ್ದು, ರವಿತೇಜ ಸಿ. ಹೆಚ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಎ. ಟಿ. ರವೀಶ್ ಸಂಗೀತ ಸಂಯೋಜಿಸುತ್ತಿದ್ದು, ಅರಸು ಅಂತಾರೆ ಮತ್ತು ರೇವಣ್ಣ ನಾಯಕ್ ಸಾಹಿತ್ಯ ರಚಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಚಿತ್ರದ ಅಂತಿಮ ಹಂತದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Related Posts

error: Content is protected !!