ಗ್ರ್ಯಾಂಡ್ ಎಂಟ್ರಿಗೆ ‘ಜೂನಿಯರ್’ ರೆಡಿ..!
ಕಿರೀಟಿ ನಟನೆಯ ಚೊಚ್ಚಲ ಚಿತ್ರ ಅದ್ಧೂರಿಯಾಗಿ ತೆರೆಗೆ
1000ಕ್ಕೂ ಹೆಚ್ಚು ಪರದೆಗಳಲ್ಲಿ ಕಿರೀಟಿ ‘ಜೂನಿಯರ್’ ಪ್ರದರ್ಶನ
ದೊಡ್ಡಮಟ್ಟದಲ್ಲಿ ‘ಜೂನಿಯರ್’ ಚಿತ್ರ ಬಿಡುಗಡೆಗೆ ತಯಾರಿ
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಅವರ ರಂಗ ಪ್ರದರ್ಶನಕ್ಕೆ ಅಂತೂ ಮುಹೂರ್ತ ನಿಗಧಿಯಾಗಿದೆ. ಇದೇ 2025ರ ಜುಲೈ 18ರ ಶುಕ್ರವಾರ ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ‘ಜೂನಿಯರ್’ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿರುವ ‘ಜೂನಿಯರ್’ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಕೂಡ ಯೋಜನೆ ಹಾಕಿಕೊಂಡಿದೆ.
ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ಸ್‌ನಲ್ಲಿ ‘ಜೂನಿಯರ್’ ರೆಡ್ಡಿ ಹವಾ…!
ಎಲ್ಲರಿಗೂ ಗೊತ್ತಿರುವಂತೆ ಗಾಲಿ ಜನಾರ್ಧನ ರೆಡ್ಡಿ, ರಾಜಕೀಯ ರಂಗದಲ್ಲಿ ಒಂದು ಕಾಲದಲ್ಲಿ ತಮ್ಮದೇ ಆದ ಹವಾ ಇಟ್ಟುಕೊಂಡಿದ್ದವರು. ರೆಡ್ಡಿಗಾರು ಮನಸ್ಸು ಮಾಡಿದ್ರೆ, ಏನೂ ಬೇಕಾದರೂ ಮಾಡಬಲ್ಲರು ಎನ್ನುವಷ್ಟರ ಮಟ್ಟಿಗೆ ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿಯಾಗಿದ್ದ ಜನಾರ್ಧನ ರೆಡ್ಡಿ, ಆನಂತರ ಅಕ್ರಮ ಗಣಿಗಾರಿಕೆ ಪ್ರಕರಣ, ಕೋರ್ಟ್ ತೀರ್ಪಿನಿಂದಾಗಿ ರಾಜಕೀಯದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳಬೇಕಾಯಿತು.
ಇದೀಗ ರೆಡ್ಡಿ ಪುತ್ರ ‘ಜೂನಿಯರ್’ ರೆಡ್ಡಿ ಉರೂಫ್ ಕಿರೀಟಿ ಕೂಡ ಅದೇ ರೀತಿ ತಮ್ಮ ಮೊದಲ ಸಿನೆಮಾದಲ್ಲೇ ದೊಡ್ಡ ಹವಾ ಸೃಷ್ಟಿಸುತ್ತ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಭಾಷೆಗಳಲ್ಲಿ ‘ಜೂನಿಯರ್’ ಸಿನೆಮಾ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸುಮಾರು 1116 ತೆರೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಬಿಗ್ ಬಜೆಟ್‌ನಲ್ಲಿ ‘ಜೂನಿಯರ್’ ಮೇಕಿಂಗ್
ಕಿರೀಟಿ ನಟನೆಯ ಚೊಚ್ಚಲ ಸಿನೆಮಾ ‘ಜೂನಿಯರ್’ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನೆಮಾವನ್ನು ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ‘ಜೂನಿಯರ್’ ಸಿನೆಮಾಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.
‘ಜೂನಿಯರ್’ ಸಿನೆಮಾದಲ್ಲಿ ನಾಯಕ ನಟ ಕಿರೀಟಿ ಅವರಿಗೆ ಶ್ರೀಲೀಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ಜೆನಿಲಿಯಾ ಡಿಸೋಜಾ, ಸುಧಾರಾಣಿ, ಅಚ್ಯುತ ಕುಮಾರ್ ಹೀಗೆ ದೊಡ್ಡ ಕಲಾವಿದರ ತಾರಾಗಣವೇ ಈ ಚಿತ್ರದಲ್ಲಿದೆ.
‘ಜೂನಿಯರ್’ ಜೊತೆ ನುರಿತ ತಂತ್ರಜ್ಞರ ಸಮಾಗಮ
ತೆಲುಗಿನಲ್ಲಿ ಬಾಹುಬಲಿ, ಆರ್‌ಆರ್‌ಆರ್ ಅಂತಹ ಸಿನೆಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ‘ಜೂನಿಯರ್’ ಸಿನೆಮಾಕ್ಕೆ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ‘ಜೂನಿಯರ್’ ಸಿನೆಮಾಕ್ಕೆ ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ‘ಜೂನಿಯರ್’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಎರಡನ್ನೂ ಮೂಡಿಸಿರುವ ‘ಜೂನಿಯರ್’ ತೆರೆಮೇಲೆ ಹೇಗಿರಲಿದೆ ಎಂಬ ಪ್ರಶ್ನೆಗೆ ಜುಲೈ 18ಕ್ಕೆ ಉತ್ತರ ಸಿಗಲಿದೆ.















