ಬಿಡುಗಡೆಯಾಯಿತು ‘ಕೊತ್ತಲವಾಡಿ’ ಟ್ರೇಲರ್
ಹೋರಾಟದ ಕಥೆಯಲ್ಲಿ ‘ಕೊತ್ತಲವಾಡಿ’ ಟ್ರೇಲರ್
‘ಕೊತ್ತಲವಾಡಿ’ ಟ್ರೇಲರ್ ನಲ್ಲಿ ಮೂಡಿದ ಭರವಸೆ, ಆ. 1ಕ್ಕೆ ಚಿತ್ರ ಬಿಡುಗಡೆ
ಯಶ್ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ
ಈಗಾಗಲೇ ತನ್ನ ಟೈಟಲ್ ಮತ್ತು ಫಸ್ಟ್‌ಲುಕ್ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಸಿನೆಮಾದ ಟ್ರೇಲರ್ ರಿಲೀಸ್ ಆಗಿದೆ. ಪುಷ್ಪಾ ಅರುಣಕುಮಾರ್ ತಮ್ಮದೇ ‘ಪಿ. ಎ ಪ್ರೊಡಕ್ಷನ್’ ನಡಿ ‘ಕೊತ್ತಲವಾಡಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದು, ಯುವ ಪ್ರತಿಭೆ ಶ್ರೀರಾಜ್ ‘ಕೊತ್ತಲವಾಡಿ’ ಸಿನೆಮಾಕ್ಕೆ ನಿರ್ದೇಶನ ಮಾಡಿದ್ದಾರೆ. 
ಹೇಗಿದೆ ‘ಕೊತ್ತಲವಾಡಿ’ ಟ್ರೇಲರ್..?
ಸಿನೆಮಾದ ಟೈಟಲ್ಲೇ ಹೇಳುವಂತೆ, ‘ಕೊತ್ತಲವಾಡಿ’ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದೆ. ರಾಜಕೀಯ ದಂಗಲ್, ಪೊಲೀಸ್ ವ್ಯವಸ್ಥೆ, ಅವಕಾಶವಾದಿತನ, ನಾಯಕನ ಹೋರಾಟ, ಛಲ ಸುತ್ತ ‘ಕೊತ್ತಲವಾಡಿ’ ಸಿನೆಮಾದ ಕಥಾಹಂದರ ಸಾಗುತ್ತದೆ. ಇನ್ನು ಪಕ್ಕಾ ಹಳ್ಳಿಯ ಹುಡುಗನಾಗಿ ನಾಯಕ ನಟ ಪೃಥ್ವಿ ಅಂಬರ್ ರಗಡ್ ಅವತಾರ ತಾಳಿದ್ದು, ನಾಯಕಿಯಾಗಿ ಕಾವ್ಯಾ ಶೈವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ ಮೊದಲಾದ ಕಲಾವಿದರ ತಾರಾಗಣ ‘ಕೊತ್ತಲವಾಡಿ’ ಚಿತ್ರದಲ್ಲಿದೆ.
ಔಟ್ ಅಂಡ್ ಔಟ್ ಆಕ್ಷನ್ ಮತ್ತು ಕ್ರೈಂ-ಥ್ರಿಲ್ಲರ್ ಅಂಶಗಳು ‘ಕೊತ್ತಲವಾಡಿ’ ಸಿನೆಮಾದ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದ್ದು, ಟ್ರೇಲರ್ ನಿಧಾನವಾಗಿ ಮಾಸ್ ಆಡಿಯನ್ಸ್ ಗಮನ ಸೆಳೆಯುತ್ತಿದೆ. ಟ್ರೇಲರ್ ಗುಣಮಟ್ಟದಿಂದ ಮೂಡಿಬಂದಿದ್ದು, ಒಂದೊಳ್ಳೆ ಕಂಟೆಂಟ್ ಚಿತ್ರವನ್ನು ನಿರ್ದೇಶಕ ಶ್ರೀರಾಜ್ ಮಾಡಿರುವಂತೆ ಕಾಣುತ್ತದೆ. ರಾಜಕೀಯ, ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ ‘ಕೊತ್ತಲವಾಡಿ’ ಚಿತ್ರದಲ್ಲಿದೆ. ಟ್ರೇಲರ್‌ನಲ್ಲಿ ರಘು ನಿಡುವಳ್ಳಿ ಸಂಭಾಷಣೆ ಹೈಲೆಟ್ ಆಗಿದೆ.
‘ಕೊತ್ತಲವಾಡಿ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಆಗಸ್ಟ್ 1ಕ್ಕೆ ‘ಕೊತ್ತಲವಾಡಿ’ ತೆರೆಗೆ
‘ಕೊತ್ತಲವಾಡಿ’ ಸಿನೆಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡಿಗೆ ಸಂಗೀತ ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಎಸ್. ಛಾಯಾಗ್ರಹಣ ಹಾಗೂ ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ‘ಕೊತ್ತಲವಾಡಿ’ ಸಿನೆಮಾದ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ‘ಕೊತ್ತಲವಾಡಿ’ ಸಿನೆಮಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸದ್ಯ ಟೈಟಲ್, ಫಸ್ಟ್‌ಲುಕ್ ಮತ್ತು ಇದೀಗ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ‘ಕೊತ್ತಲವಾಡಿ’ ಸಿನೆಮಾ ಇದೇ 2025ರ ಆಗಸ್ಟ್ 1ಕ್ಕೆ ತೆರೆಗೆ ಬರುತ್ತಿದೆ.















