‘ಮೋಡ ಕವಿದ ವಾತಾವರಣ’ದಲ್ಲಿ ಕೇಳಿತು ಮೊದಲ ಗೀತೆ!
‘ಮೋಡ ಕವಿದ ವಾತಾವರಣ’ ಚಿತ್ರದ ಮೊದಲ ಹಾಡು ರಿಲೀಸ್
‘ನನ್ನೆದೆಯ ಹಾಡೊಂದನು…’ ಎನ್ನುತ್ತಾ ಮಧುರ ಗೀತೆಗೆ ಹೆಜ್ಜೆ ಹಾಕಿದ ಶೀಲಂ
ಮೊದಲ ಹಾಡಿನ ಮೂಲಕ ‘ಮೋಡ ಕವಿದ ವಾತಾವರಣ’ ಪ್ರಚಾರ ಶುರು…
ಇಲ್ಲಿಯವರೆಗೆ ಬಹುತೇಕ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿ ಗೆಲುವಿನ ನಗು ಬೀರಿರುವ ನಿರ್ದೇಶಕ ಸಿಂಪಲ್ ಸುನಿ, ಈಗ ತಮ್ಮದೇ ಗರಡಿಯ ಮತ್ತೊಬ್ಬ ಹುಡ್ಗ ಶೀಲಮ್ ಅವರನ್ನು ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಅದಕ್ಕಾಗಿ ಸಿಂಪಲ್ ಸುನಿ ‘ಮೋಡ ಕವಿದ ವಾತಾವರಣ’ವನ್ನೇ ಸೃಷ್ಟಿಸಿದ್ದಾರೆ. ಹೌದು, ನಿರ್ದೇಶಕ ಸಿಂಪಲ್ ಸುನಿ ಆಕ್ಷನ್-ಕಟ್ ಹೇಳಿರುವ ಹೊಸ ಸಿನೆಮಾ ‘ಮೋಡ ಕವಿದ ವಾತಾವರಣ’ದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.
ಶಿಷ್ಯನನ್ನು ಹೀರೋ ಅಗಿ ಪರಿಚಯಿಸಲು ‘ಸಿಂಪಲ್’ ಸೂತ್ರ!
‘ಮೋಡ ಕವಿದ ವಾತಾವರಣ’ ಸಿನೆಮಾದ ಹೀರೋ ಶೀಲಮ್, ನಿರ್ದೇಶಕ ಸಿಂಪಲ್ ಸುನಿ ಅವರೊಂದಿಗೆ ಕೆಲ ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ‘ಮೋಡ ಕವಿದ ವಾತಾವರಣ’ ಸಿನೆಮಾದ ಮೂಲಕ ಈಗ ನಾಯಕನಾಗಿ ಶೀಲಮ್ ಹೀರೋ ಆಗಿ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಸಿಂಪಲ್ ಸುನಿ ತನ್ನ ಶಿಷ್ಯನನ್ನೇ ಹೀರೋ ಮಾಡುವುದಕ್ಕೆ ಮುಂದಾಗಿದ್ದಾರೆ. ಹಾಗಂತ ಶೀಲಮ್ ಇದೇ ಮೊದಲ ಬಾರಿಗೆ ನಟಿಸುತ್ತಿರೋದೇ ಅಲ್ಲ. ಈ ಹಿಂದೆ ಕೆಲವು ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಆಗಿ ಚಿತ್ರರಂಗದಲ್ಲಿ ಗೆಲುವಿನ ನಗೆ ಬೀರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ‘ಮೋಡ ಕವಿದ ವಾತಾವರಣ’ ಸಿನೆಮಾದ ಮೊದಲ ಹಾಡನ್ನು ಅನಾವರಣ ಮಾಡಿದೆ.
‘ಮೋಡ ಕವಿದ ವಾತಾವರಣ’ ಸಿನೆಮಾದ ‘ನನ್ನೆದೆಯ ಹಾಡೊಂದನು…’ ಎಂಬ ಮೊದಲ ಗೀತೆಯ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಹೇಗಿದೆ ‘ಮೋಡ ಕವಿದ ವಾತಾವರಣ’ದ ಮೊದಲ ಹಾಡು..?
ಇನ್ನು ‘ಮೋಡ ಕವಿದ ವಾತಾವರಣ’ ಸಿನೆಮಾದ ಮೊದಲ ಹಾಡು ರೊಮ್ಯಾಂಟಿಕ್ ಆಗಿ ಮೂಡಿ ಬಂದಿದೆ. ‘ನನ್ನೆದೆಯ ಹಾಡೊಂದನು…’ ಎಂಬ ಸಾಲುಗಳಿಂದ ಶುರುವಾಗುವ ಈ ಗೀತೆ ಗಾಯಕ ಸಂಚಿತ್ ಹೆಗ್ಡೆ ಧ್ವನಿಯಲ್ಲಿ ಮೂಡಿಬಂದಿದೆ. ಸಿಂಪಲ್ ಸುನಿ ಸಾಹಿತ್ಯವಿರುವ ಈ ಹಾಡಿಗೆ ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.
ನೃತ್ಯ ಸಂಯೋಜಕ ಮಧು ಈ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ. ವಿಲಿಯಂ ಡೇವಿಡ್ ತಮ್ಮ ಕ್ಯಾಮರಾದಲ್ಲಿ ಈ ಗೀತೆಯನ್ನು ಸೆರೆಹಿಡಿದಿದ್ದಾರೆ. ನಾಯಕ ನಟ ಶೀಲಂ ಜೊತೆಗೆ ನಾಯಕಿಯರಾದ ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ಜೊತೆಯಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಸರೆಗಮ’ ಮ್ಯೂಸಿಕ್ ಯು-ಟ್ಯೂಬ್ ಚಾನೆಲ್‌ನಲ್ಲಿ ‘ಮೋಡ ಕವಿದ ವಾತಾವರಣ’ ಸಿನೆಮಾದ ಈ ಮೊದಲ ಗೀತೆಗೆ ಬಿಡುಗಡೆಯಾಗಿದೆ.
ಹೊಸವರ್ಷ ‘ಮೋಡ ಕವಿದ ವಾತಾವರಣ’ ತೆರೆಗೆ
ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರುವ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದ ‘ಒಂದು ಸರಳ ಪ್ರೇಮಕಥೆ’ ಸಿನೆಮಾವನ್ನು ನಿರ್ಮಾಣ ಮಾಡಿದ್ದ ‘ರಾಮ್ ಮೂವೀಸ್’ ಬ್ಯಾನರ್‌ನಲ್ಲಿ ಈ ಸಿನೆಮಾ ನಿರ್ಮಾಣ ಆಗುತ್ತಿದೆ. ಮೈಸೂರು ಮೂಲದ ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜಂಟಿಯಾಗಿ ಬಂಡವಾಳ ಹೂಡಿ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಮೋಡ ಕವಿದ ವಾತಾವರಣ’ ಸಿನೆಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಆದಿತ್ಯ ಕಶ್ಯಪ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸದ್ಯ ‘ಮೋಡ ಕವಿದ ವಾತಾವರಣ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ವರ್ಷ ಅಂದರೆ, 2026ರ ಜನವರಿ 9ರಂದು ಚಿತ್ರವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.















