Video

ಗೌರಿ-ಗಣೇಶ ಹಬ್ಬಕ್ಕೆ ‘ಜೈ’ ಎನ್ನುತ್ತ ಬಂದ ಟೀಸರ್‌!

ರೂಪೇಶ್‌ ಶೆಟ್ಟಿ ನಟನೆಯ ‘ಜೈ’ ಸಿನೆಮಾ ಟೀಸರ್‌ ಔಟ್‌

ಹಬ್ಬದ ವೇಳೆ ಹೊರಬಂತು ಕರಾವಳಿ ಪ್ರತಿಭೆಗಳ ಹೊಸಚಿತ್ರದ ಝಲಕ್‌… 

ತುಳು ಹಾಗೂ ಕನ್ನಡದಲ್ಲಿ ಬಿಡುಗಡೆಯಾದ ‘ಜೈ’ ಟೀಸರ್

ಕರ್ನಾಟಕದ ಕರಾವಳಿ ಭಾಗದ ಪ್ರತಿಭೆ ‘ಬಿಗ್ ಬಾಸ್’ ಖ್ಯಾತಿಯ ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ ‘ಜೈ’ ಸಿನೆಮಾದ ಟೀಸರ್‌ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ‘ಗೌರಿ-ಗಣೇಶ ಹಬ್ಬ’ದ ಶುಭ ಸಂದರ್ಭದಲ್ಲಿ ‘ಜೈ’ ಸಿನೆಮಾದ ಮೊದಲ ಟೀಸರ್‌ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದ ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ‘ಜೈ’ ಸಿನೆಮಾದ ಟೀಸರ್‌ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾಗಳಲ್ಲಿ ‘ಜೈ’ ಸಿನೆಮಾದ ಟೀಸರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹ್ಯಾಟ್ರಿಕ್‌ ಬಾರಿಸುವ ಸಿದ್ಧತೆಯಲ್ಲಿ ರೂಪೇಶ್‌ ಶೆಟ್ಟಿ

ಅಂದಹಾಗೆ, ರೂಪೇಶ್‌ ಶೆಟ್ಟಿ ಕನ್ನಡ ಕಿರುತೆರೆ ಮತ್ತು ಚಿತ್ರರಂಗಕ್ಕೆ ಪರಿಚಯವಾಗುವ ಮೊದಲೇ ‘ಕೋಸ್ಟಲ್‌ ವುಡ್‌’ ಅಂದರೆ, ತುಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ನಟ. ಕನ್ನಡದ ಕಿರುತೆರೆಯ ‘ಬಿಗ್ ಬಾಸ್’ ರಿಯಾಲಿಟಿ ಶೋಗೆ ಬಂದ ಮೇಲೆ ರೂಪೇಶ್‌ ಶೆಟ್ಟಿ ಬಹುತೇಕ ಕನ್ನಡಿಗರಿಗೆ ಪರಿಚಯವಾದವರು. ನಟನೆ ಮಾತ್ರವಲ್ಲದೇ ನಿರ್ದೇಶನದಲ್ಲೂ ತನ್ನದೇ ಆದ ಪರಿಣಿತಿ ಹೊಂದಿರುವ ರೂಪೇಶ್ ಶೆಟ್ಟಿ, ಈಗಾಗಲೇ ‘ಗಿರ್ಗಿಟ್’, ‘ಸರ್ಕಸ್’ ಸಿನೆಮಾಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶನದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ‘ಜೈ’ ರೂಪೇಶ್‌ ಶೆಟ್ಟಿ ನಿರ್ದೇಶನದ ಮೂರನೇ ಸಿನೆಮಾವಾಗಿದ್ದು, ಈ ಸಿನೆಮಾದ ಮೂಲಕ ಹ್ಯಾಟ್ರಿಕ್‌ ಬಾರಿಸುವ ವಿಶ್ವಾಸದಲ್ಲಿದ್ದಾರೆ ರೂಪೇಶ್‌ ಶೆಟ್ಟಿ. ‘ಜೈ’ ಎಂಬ ಈ ಸಿನೆಮಾದಲ್ಲಿ ತೆರೆಹಿಂದೆ ನಿರ್ದೇಶನ ಮಾಡಿರುವ ರೂಪೇಶ್ ಶೆಟ್ಟಿ, ತೆರೆಹಿಂದೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಜೈ’ ಚಿತ್ರದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಹೇಗಿದೆ ‘ಜೈ’ ಸಿನೆಮಾ ಟೀಸರ್‌..? 

ಸದ್ಯ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಜೈ’ ಸಿನೆಮಾ ಟೀಸರ್‌ ಪಕ್ಕಾ ಮಾಸ್‌ ಶೈಲಿಯಲ್ಲಿ ಮೂಡಿಬಂದಿದೆ.  ಟೀಸರ್ ನಲ್ಲಿ ಸಿನೆಮಾದಲ್ಲಿರುವ ಒಂದಷ್ಟು ಅಂಶಗಳನ್ನ ಬಿಟ್ಟುಕೊಡಲಾಗಿದೆ. ರೂಪೇಶ್ ಶೆಟ್ಟಿ ಒಬ್ಬ ಕಬ್ಬಡಿ ಪ್ಲೇಯರ್ ಆಗಿ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ಊರಲ್ಲೂ ಇರುವಂಥ ರಾಜಕೀಯದ ಎಳೆ ಕೂಡ ಟೀಸರ್ ನಲ್ಲಿ ಕಾಣುತ್ತಿದೆ. ಈ ಎಲ್ಲ ಅಂಶಗಳನ್ನು ನೋಡಿದವರಿಗೆ ‘ಜೈ’ ಒಂದೊಳ್ಳೆ ಪೊಲಿಟಿಕಲ್ ಡ್ರಾಮಾ ಕಂಟೆಂಟ್ ಇರುವ ಸಿನೆಮಾವಾಗಿದ್ದು, ಥಿಯೇಟರ್ ನಲ್ಲಿ ಮಿನಿಮಂ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ ಎಂಬಂತೆ ಭರವಸೆ ಟೀಸರ್ ಮೂಡಿಸಿದಂತಿದೆ.

ಇದೇ ನವೆಂಬರ್‌ 14ಕ್ಕೆ ‘ಜೈ’ ರಿಲೀಸ್‌

‘ಆರ್. ಎಸ್. ಸಿನೆಮಾಸ್’, ‘ಶೂಲಿನ್ ಫಿಲಂಸ್’, ‘ಮುಗ್ರೋಡಿ ಪ್ರೊಡಕ್ಷನ್’ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ‘ಜೈ’ ಸಿನೆಮಾಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರಕಥೆಯನ್ನ ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಅವರು ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ ‘ಜೈ’ ಸಿನೆಮಾದಲ್ಲಿ ನಾಯಕನಾಗಿ ರೂಪೇಶ್‌ ಶೆಟ್ಟಿ ಮತ್ತು ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಸುನೀಲ್‌ ಶೆಟ್ಟಿ ಕೂಡ ‘ಜೈ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೇವದಾಸ್ ಕಾಪಿಕಾಡ್, ರಾಜ್‌ ದೀಪಕ್‌ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ‘ಜೈ’ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಜೈ’ ಚಿತ್ರಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿನುತ್ ಛಾಯಾಗ್ರಹಣ , ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ ಹಾಗೂ ರಾಹುಲ್ ವಸಿಷ್ಠ ಸಂಕಲನ ‘ಜೈ’ ಚಿತ್ರಕ್ಕಿದೆ. ಅಂದಹಾಗೆ, ‘ಜೈ’ ಸಿನೆಮಾ ಇದೇ 2025ರ ನವೆಂಬರ್ 14ರಂದು ತುಳು ಹಾಗೂ ಕನ್ನಡ ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Related Posts

error: Content is protected !!