‘ಅಂದೊಂದಿತ್ತು ಕಾಲ’ದಿಂದ ಬಂತು ಮತ್ತೊಂದು ಹಾಡು
‘ಅಂದೊಂದಿತ್ತು ಕಾಲ’ ಚಿತ್ರದ ಮೂರನೇ ಹಾಡು ಬಿಡುಗಡೆ
‘ಮಹಾರಾಜ ಆಗೆಂದು…’ ಎಂಬ ತಾಯಿ-ಮಗನ ಬಾಂಧವ್ಯದ ಗೀತೆ
ಕಿನ್ನಾಳ್ ರಾಜ್ ಸಾಹಿತ್ಯದ ಗೀತೆಗೆಸುನಿಲ್ ಕಶ್ಯಪ್ ಧ್ವನಿ
ನಟ ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರ ಇದೇ 2025ರ ಆಗಸ್ಟ್ 29ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಬಿಡುಗಡೆಗೂ ಮೂರು ದಿನಗಳ ಮುನ್ನ ಚಿತ್ರದ ‘ಮಹಾರಾಜ ಆಗೆಂದು.. ಮನಸಾರೆ ಹಾರೈಸಿದೆ ನೀನಮ್ಮ…’ ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡನ್ನು ಬಿಡುಗಡೆ ಮಾಡಿದೆ. 
ಹೌದು, ‘ಗೌರಿ-ಗಣೇಶ ಹಬ್ಬ’ದ ಶುಭ ಸಂದರ್ಭದಲ್ಲಿ ‘ಅಂದೊಂದಿತ್ತು ಕಾಲ’ ಚಿತ್ರದ ಮೂರನೇ ಹಾಡು ಹೊರ ಬಂದಿದೆ. ‘ಕೆಜಿಎಫ್’ ಖ್ಯಾತಿಯ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಮನಮುಟ್ಟುವಂತೆ ಹಾಡಿದ್ದಾರೆ. ತಾಯಿ-ಮಗನ ಪ್ಯಾತೋ ಸಾಂಗ್ ಇದಾಗಿದ್ದು, ಮದರ್ ಆ್ಯಂತಮ್ ಎಂದೇ ಹೇಳಬಹುದು. ಈ ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು, ಈಗಾಗಲೇ ಎರಡು ಹಾಡು ಭರ್ಜರಿ ಹಿಟ್ ಆಗಿದ್ದು , ಮೂರನೇ ಹಾಡು ಕೂಡ ಎಲ್ಲರ ಮನಸ್ಸನ್ನು ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
‘ಅಂದೊಂದಿತ್ತು ಕಾಲ’ ಚಿತ್ರದ ‘ಮಹಾರಾಜ ಆಗೆಂದು ಮನಸಾರೆ ಹಾರೈಸಿದೆ ನೀನಮ್ಮ…’ ಎಂಬ ಗೀತೆಯ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಅಮ್ಮನ ಹಾಡಿನ ಮೇಲೆ ವಿನಯ್‌ಗೆ ನಿರೀಕ್ಷೆ…
ಇನ್ನು ‘ಅಂದೊಂದಿತ್ತು ಕಾಲ’ ಚಿತ್ರದ ಮೂರನೇ ಸೆಂಟಿಮೆಂಟ್ ಹಾಡಿನ ಬಗ್ಗೆ ಮಾತನಾಡಿರುವ ನಟ ವಿನಯ್ ರಾಜಕುಮಾರ್, ‘ನನ್ನ ಎಲ್ಲಾ ಸಿನೆಮಾಗಳಿಗಿಂತ ಈ ಚಿತ್ರ ಬಹಳ ವಿಶೇಷ. ಈ ಚಿತ್ರದ ಒಂದೊಂದು ಹಾಡು ಬಹಳ ವಿಭಿನ್ನವಾಗಿದ್ದು, ಈ ಅಮ್ಮ ಮಗನ ಸೆಂಟಿಮೆಂಟ್ ಸಾಂಗ್ ಬಹಳ ಮನಸನ್ನ ಸೆಳೆಯುತ್ತದೆ. ಈ ಚಿತ್ರದಲ್ಲಿ ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದಾಗಿದೆ. ಇದೊಂದು ಫಿಲ್ ಗುಡ್ ಚಿತ್ರವಾಗಿದ್ದು, ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ. ಈ ಹಾಡು ಈ ಸಿನೆಮಾ ಎಲ್ಲವೂ ನೋಡುಗರಿಗೆ ಇಷ್ಟವಾಗುತ್ತದೆ’ ಎಂದಿದ್ದಾರೆ. 
ಈ ಹಾಡು ಪ್ರತಿ ಹೃದಯಕ್ಕೂ ಹತ್ತಿರವಾಗುತ್ತಿದೆ…
‘ಅಂದೊಂದಿತ್ತು’ ಚಿತ್ರದಲ್ಲಿ ತಾಯಿ ಪಾತ್ರವನ್ನು ಮಾಡಿರುವ ಅರುಣಾ ಬಾಲರಾಜ್ ಮಾತನಾಡಿ, ‘ಈ ಚಿತ್ರದ ಲಿರಿಕಲ್ ಹಾಡು ನನಗೆ ಬಹಳ ಇಷ್ಟ. ಈ ಹಾಡು ಪ್ರತಿಯೊಬ್ಬರ ಹೃದಯಕ್ಕೂ ಹತ್ತಿರವಾಗುತ್ತಿದೆ. ಇದನ್ನು ಸಿನೆಮಾದಲ್ಲಿ ನೋಡಿದಾಗ ಇನ್ನೂ ಆಪ್ತವಾಗಿದೆ. ಮಗನನ್ನು ಆಶೀರ್ವಾದ ಮಾಡಿ ಕಳಿಸಿದ ಮೇಲೆ ಹೇಗೆ ಹೆಸರು ಮಾಡುತ್ತಾನೆ ಎಂಬುದರ ಮೇಲೆ ಕಥೆ ಇದೆ. ನಾನು ಡಬ್ಬಿಂಗ್ ಮಾಡುವ ಸಮಯದಲ್ಲಿ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಹಾಗೆಯೇ ವಿನಯ್ ಜೊತೆ ಮೂರು ಸಿನೆಮಾ ಮಾಡಿದ್ದು, ಮೂರು ವಿಭಿನ್ನ ಪಾತ್ರ ಸಿಕ್ಕಿದ್ದವು. ತಾಯಿ ತಾನು ಕಷ್ಟ ಪಟ್ಟರು ಮಕ್ಕಳಿಗೆ ಸಾಧನೆ ಮಾಡಲು ಕಳಿಸಲು ಏನೆಲ್ಲಾ ಶ್ರಮ ಪಡುತ್ತಾಳೆ ಎಂಬುದನ್ನು ಕೂಡ ನೋಡಬಹುದು. ಈ ಸಿನೆಮಾ ಎಲ್ಲರಿಗೂ ಇಷ್ಟವಾಗುವಂತಹ ಅಂಶವನ್ನು ಒಳಗೊಂಡಿದೆ ‘ ಎಂದಿದ್ದಾರೆ.















