Street Beat

ಸಾಮಾಜಿಕ ಕಾದಂಬರಿ’ಕೆಂದಾವರೆ’ಗೆ ಚಿತ್ರರೂಪ

ಸಾಮಾಜಿಕ ಕಥಾಹಂದರದ ‘ಕೆಂದಾವರೆ’ ಕೃತಿ ಬಿಡುಗಡೆ

ಮಹಿಳಾ ಪ್ರಧಾನ ‘ಕೆಂದಾವರೆ’ ಕೃತಿ ಶೀಘ್ರದಲ್ಲಿಯೇ ಚಿತ್ರರೂಪದಲ್ಲಿ ತೆರೆಗೆ…

ನಟ ಆದಿತ್ಯ ವಿನೋದ್ ಸಾಮಾಜಿಕ ಕಾಳಜಿಯ ನವ ಪ್ರಯತ್ನ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯುವನಟನಾಗಿ, ಬರಹಗಾರನಾಗಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ ಆದಿತ್ಯ ವಿನೋದ್ ಈಗ ಕಾದಂಬರಿಕಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಆದಿತ್ಯ ವಿನೋದ್‌, ‘ಕೆಂದಾವರೆ’ ಎಂಬ ಹೆಸರಿನಲ್ಲಿ ಮಹಿಳಾ ಪ್ರಧಾನ ಮತ್ತು ಸಾಮಾಜಿಕ ಕಥಾಹಂದರದ ಕಾದಂಬರಿಯನ್ನು ರಚಿಸಿದ್ದು, ಇತ್ತೀಚೆಗೆ ಈ ‘ಕೆಂದಾವರೆ’ ಕಾದಂಬರಿ ಬಿಡುಗಡೆಯಾಯಿತು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ‘ಕೆಂದಾವರೆ’ ಕಾದಂಬರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಶುಭ ಕೋರಿದರು.

ಸಿನೆಮಾವಾಗಲಿದೆ ‘ಕೆಂದಾವರೆ’ ಕಾದಂಬರಿ

ಇನ್ನು ಬಿಡುಗಡೆಯಾಗಿರುವ ಈ ‘ಕೆಂದಾವರೆ’ ಕಾದಂಬರಿಯನ್ನು ಚಲನಚಿತ್ರ ರೂಪದಲ್ಲಿ ತೆರೆಮೇಲೆ ತರಲು ತೆರೆಹಿಂದೆ ಕೆಲಸಗಳು ಶುರುವಾಗಿದೆ. ಈ ಚಿತ್ರದಲ್ಲಿ ನಟ ಆದಿತ್ಯ ವಿನೋದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ‘ಕಡಲ ತೀರದ ಭಾರ್ಗವ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಭಾರ್ಗವ ಈ ಕಾದಂಬರಿಯನ್ನು ನಿರ್ದೇಶಿಸಿ ಸಿನೆಮಾ ರೂಪದಲ್ಲಿ ತೆರೆಮೇಲೆ ತರುತ್ತಿದ್ದಾರೆ.

ಹೆಣ್ಣು ಮಕ್ಕಳ ಸುರಕ್ಷತೆಯ ಸುತ್ತ ‘ಕೆಂದಾವರೆ’ ಕಥಾನಕ

ಇನ್ನು ಆದಿತ್ಯ ವಿನೋದ್‌ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ‘ಕೆಂದಾವರೆ’ ಕಾದಂಬರಿಗೆ ಡಾ. ಶಯದೇವಿಸುತೆ ಮರವಂತೆ ಅಕ್ಷರ ರೂಪ ನೀಡಿ ಕೃತಿಯನ್ನಾಗಿಸಿದ್ದಾರೆ. ತಮ್ಮ ‘ಕೆಂದಾವರೆ’ ಕಾದಂಬರಿಯ ಬಗ್ಗೆ ಮಾತನಾಡುವ ನಟ ಮತ್ತು ಬರಹಗಾರ ಆದಿತ್ಯ ವಿನೋದ್, ‘ನಮ್ಮ ಸುತ್ತಲಿ ವಾಸ್ತವಗಳಿಂದ ತೀವ್ರವಾಗಿ ಪ್ರಭಾವಿತನಾಗಿ ಮತ್ತು ಪ್ರಸ್ತುತ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಮಕ್ಕಳ ಕಳ್ಳಸಾಗಣೆ ಮತ್ತು ಬಲವಂತದ ವೇಶ್ಯಾವಾಟಿಕೆಯನ್ನು ಬೆಳಕಿಗೆ ತರಲು ನಾನು ಈ ಕಥೆಯನ್ನು ಬರೆದಿದ್ದೇನೆ. ಈ ಕೃತಿಯ ಹಲವು ಭಾಗಗಳು ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿದ ನೈಜ ಘಟನೆಗಳು ಮತ್ತು ವೈಯಕ್ತಿಕ ಮುಖಾಮುಖಿಗಳಿಂದ ತೆಗೆದುಕೊಳ್ಳಲಾಗಿದೆ. ಈ ಪುಸ್ತಕವು ಕೇವಲ ಕಥೆಯಲ್ಲ – ಇದು ಎಚ್ಚರಿಕೆಯ ಕರೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಪುಸ್ತಕವು ಮಕ್ಕಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಕ್ಕಳು ಮುಕ್ತವಾಗಿ, ಸುರಕ್ಷಿತವಾಗಿ ಮತ್ತು ಸಂತೋಷದಿಂದ ಬದುಕಬಹುದಾದ ಪ್ರಪಂಚದ ಭರವಸೆಯನ್ನು ಪ್ರೇರೇಪಿಸಲು ನನ್ನ ಹೃತ್ಪೂರ್ವಕ ಪ್ರಯತ್ನವಾಗಿದೆ. ಪ್ರತಿಯೊಂದು ಮಗುವೂ ಮಗುವಾಗಲು ಮುಕ್ತರಾಗಲಿ ಎಂಬ ಹಂಬಲ ಈ ಕಾದಂಬರಿ ಮೂಡಿಬರಲು ಕಾರಣ. ಮುಂದಿನ ದಿನಗಳಲ್ಲಿ ಈ ಕಾದಂಬರಿ ಸಿನೆಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಈ ಕೃತಿಯನ್ನು ಸಿನಿಮಾ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ’ ಎಂದಿದ್ದಾರೆ.

ಶೀಘ್ರದಲ್ಲಿಯೇ ‘ಕೆಂದಾವರೆ’ ಚಿತ್ರವಾಗಿ ತೆರೆಗೆ…

ಇನ್ನು ‘ಕೆಂದಾವರೆ’ ಕಾದಂಬರಿಗೆ ಸಿನೆಮಾ ರೂಪ ಕೊಡುವ ಕೆಲಸಗಳು ಭರದಿಂದ ನಡೆಯುತ್ತಿದೆ. ತೆರೆಮರೆಯಲ್ಲಿ ಕಲಾವಿದರ, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಮಲೆನಾಡಿನ ಸುಂದರ ತಾಣಗಳಲ್ಲಿ ‘ಕೆಂದಾವರೆ’ ಚಿತ್ರದ ಚಿತ್ರೀಕರಣ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯದೊಳಗೆ ‘ಕೆಂದಾವರೆ’ ಕಾದಂಬರಿ ಚಿತ್ರರೂಪ ಪಡೆದುಕೊಂಡು ಥಿಯೇಟರಿಗೆ ಬರುವ ಸಾಧ್ಯತೆಯಿದೆ.

Related Posts

error: Content is protected !!