‘666 ಆಪರೇಷನ್ ಡ್ರೀಮ್ ಥಿಯೇಟರ್’ಗೆ ಪ್ರಿಯಾಂಕಾ ಮೋಹನ್ ಎಂಟ್ರಿ
‘666 ಆಪರೇಷನ್ ಡ್ರೀಮ್ ಥಿಯೇಟರ್’ ಮೂಲಕ ಮತ್ತೆ ಕನ್ನಡಕ್ಕೆ ಬಂದ ಪ್ರಿಯಾಂಕಾ ಮೋಹನ್
ಶಿವಣ್ಣ-ಧನಂಜಯ್ ‘666 ಆಪರೇಷನ್ ಡ್ರೀಮ್ ಥಿಯೇಟರ್’ಗೆ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್
ಪ್ರಿಯಾಂಕಾ ಆಗಮನ ಸ್ವಾಗತಿಸಿದ ಚಿತ್ರತಂಡ
ಈಗಾಗಲೇ ತಮ್ಮ ಸಹಜ ಅಭಿನಯದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ನಾಯಕ ನಟಿ ಪ್ರಿಯಾಂಕಾ ಮೋಹನ್, ಈಗ ಕನ್ನಡದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನೆಮಾದ ಭಾಗವಾಗುತ್ತಿದ್ದಾರೆ.
ಹೌದು, ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ತಮಿಳಿನಲ್ಲಿ ನಾನಿ, ಧನುಷ್ ಹಾಗೂ ಶಿವ ಕಾರ್ತಿಕೇಯನ್ ಮೊದಲಾದ ನಾಯಕ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಿಯಾಂಕಾ ಮೋಹನ್ ಈಗ ಹೇಮಂತ್ ಎಂ. ರಾವ್ ನಿರ್ದೇಶನದ 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡವನ್ನು ಸೇರ್ಪಡೆಗೊಂಡಿದ್ದಾರೆ.
ಇನ್ನು ಪ್ರಿಯಾಂಕಾ ಮೋಹನ್ ಅವರ ಜನ್ಮದಿನದ ಸಂದರ್ಭದಲ್ಲಿ, ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡ, ಪ್ರಿಯಾಂಕಾ ಮೋಹನ್ ಅವರನ್ನು ಚಿತ್ರಕ್ಕೆ ಸ್ವಾಗತಿಸಿದೆ. ಜೊತೆಗೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅವರ ಕ್ಯಾರೆಕ್ಟರ್ ಪೋಸ್ಟರ್ ಒಂದನ್ನು ಕೂಡ ಬಿಡುಗಡೆ ಮಾಡಿದೆ. ಈಗಾಗಲೇ ಪೋಸ್ಟರ್ ಹಾಗೂ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನೆಮಾ ತನ್ನ ಅದ್ಧೂರಿ ಸೆಟ್, ಶೂಟಿಂಗ್ ವಿಚಾರವಾಗಿಯೂ ಚಿತ್ರ ಪ್ರೇಮಿಗಳಿಗೆ ಒಂದಷ್ಟು ಕುತೂಹಲ ಹೆಚ್ಚಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೀಗ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿ ಕೊಟ್ಟಿರುವುದು ‘666 ಆಪರೇಷನ್ ಡ್ರೀಮ್ ಥಿಯೇಟರ್’ನ ರಂಗನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ. 
ಕನ್ನಡದ ಮೂಲಕ ಚತುರ್ಭಾಷಾ ತಾರೆಯಾಗುವ ಕನಸು!
ಈಗಾಗಲೇ ತೆಲುಗಿನ ‘ಗ್ಯಾಂಗ್‌ಲೀಡರ್’, ‘ಸರಿಪೋದ ಶನಿವಾರಂ’, ತಮಿಳಿನ ‘ಡಾಕ್ಟರ್’, ‘ಟಿಕ್‌ಟಾಕ್’, ‘ಕ್ಯಾಪ್ಟನ್ ಮಿಲ್ಲರ್’, ‘ಬ್ರದರ್’ ಸಿನೆಮಾಗಳಲ್ಲಿ ಅಭಿನಯಿಸಿರುವ ಪ್ರಿಯಾಂಕ ಮೋಹನ್ ಅವರಿಗೆ ಆ ಸಿನೆಮಾಗಳು ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿವೆ. ಈಗಾಗಲೇ ತ್ರಿಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಮೋಹನ್, ಇದೀಗ ಕನ್ನಡದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನೆಮಾದಲ್ಲಿ ಅಭಿನಯಿಸುವ ಮೂಲಕ ಚತುರ್ಭಾಷಾ ನಟಿಯಾಗಿ ಗುರುತಿಸಿಕೊಳ್ಳುವ ಖುಷಿಯಲ್ಲಿದ್ದಾರೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸೇರ್ಪಡೆಗೆ ಪ್ರಿಯಾಂಕಾ ಖುಷಿ..!
ಇನ್ನು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡ ಸೇರ್ಪಡೆ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮೋಹನ್, ‘ನಾನು ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಸಿನೆಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನೆಮಾದ ಭಾಗವಾಗುವುದಕ್ಕೆ ತುಂಬ ಖುಷಿಯಾಗುತ್ತಿದೆ. ಈ ಮೂಲಕ ನನ್ನ ಕನಸು ನನಸಾಗುತ್ತಿದೆ. ಅದ್ಭುತ ಪ್ರತಿಭಾನ್ವಿತ ಧನಂಜಯ ಅವರೊಂದಿಗೆ ಕೆಲಸ ಮಾಡುವುದು ಮತ್ತು ಇಂತಹ ಪಾತ್ರವರ್ಗದ ಭಾಗವಾಗುವುದು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ. ರಾವ್ ಅವರೊಂದಿಗೆ ಕೆಲಸ ಮಾಡಲು ಕೂಡ ಬಯಸಿದ್ದೆ. ಆದರೆ ಅದು ಇಷ್ಟು ಬೇಗ ಆಗುತ್ತದೆ ಎಂದು ಭಾವಿಸಿರಲಿಲ್ಲ’ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಶೀಘ್ರದಲ್ಲಿಯೇ ಮೂರನೇ ಹಂತದಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಶೂಟಿಂಗ್ ಶುರು…
ಡಾ. ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲಂಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಹೇಮಂತ್ ಎಂ. ರಾವ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಎರಡು ಹಂತದಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದಲ್ಲಿ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ. 
ರೆಟ್ರೋ ಸ್ಟೈಲ್‌ನಲ್ಲಿ ಅರಳುತ್ತಿರುವ ಚಿತ್ರ…
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನೆಮಾ ಸಂಪೂರ್ಣವಾಗಿ ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬರುತ್ತಿದೆ. ನಟರಾದ ಶಿವರಾಜಕುಮಾರ್ ಹಾಗೂ ಧನಂಜಯ್ ಅವರ ರೆಟ್ರೋ ಲುಕ್, 1970-80ರ ದಶಕದ ಡಾ. ರಾಜಕುಮಾರ್ ಅವರ ಸ್ಪೈ ಸಿನೆಮಾಗಳನ್ನು ನೆನಪಿಸುವಂತಿವೆ.
ಈ ರೆಟ್ರೋ ಸ್ಪೈ ಜಗತ್ತಿಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಮೇಕಪ್‌ಮನ್ ಎನ್. ಕೆ ಉಮಾ ಮಹೇಶ್ವರ ಹಾಗೂ ಕಾಸ್ಟ್ಯೂಮ್ ಡಿಸೈನರ್ ಇಂಚರಾ ಸುರೇಶ್ ಈ ‘666 ಆಪರೇಷನ್ ಡ್ರೀಮ್ ಥಿಯೇಟರ್’ನ ರೆಟ್ರೋ ಜಗತ್ತನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಅಂತ್ಯಕ್ಕೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ತೆರೆಗೆ ಬರುವ ಸಾಧ್ಯತೆಯಿದೆ.















