ಉಪೇಂದ್ರ ಹೊಸ ತೆಲುಗು ಚಿತ್ರ ‘ಆಂಧ್ರ ಕಿಂಗ್ ತಾಲೂಕ’ ರಿಲೀಸಿಗೆ ರೆಡಿ
ಬೆಂಗಳೂರಿನಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಪ್ರಚಾರ
‘ಸೂಪರ್ ಸ್ಟಾರ್ ಸೂರ್ಯ ಕುಮಾರ್’ ಪಾತ್ರದಲ್ಲಿ ಮಿಂಚಿದ ರಿಯಲ್ ಸ್ಟಾರ್
ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ
ಕನ್ನಡಚಿತ್ರರಂಗದ ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಮತ್ತೊಂದು ತೆಲುಗು ಚಿತ್ರ ‘ಆಂಧ್ರ ಕಿಂಗ್ ತಾಲೂಕ’ ಸದ್ದಿಲ್ಲದೆ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಪ್ರಚಾರದ ಭಾಗವಾಗಿ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 
ಬೆಂಗಳೂರಿನಲ್ಲಿ ನಡೆದ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ತೆಲುಗು ನಟ ರಾಮ್ ಪೋತಿನೇನಿ, ನಟಿ ಭಾಗ್ಯಶ್ರೀ ಬೋರ್ಸೆ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದರು.
ಅಭಿಮಾನಿಗಳು ಖುಷಿಪಡುವಂಥ ಚಿತ್ರ; ಉಪೇಂದ್ರ
‘ಆಂಧ್ರ ಕಿಂಗ್ ತಾಲೂಕ’ ಚಿತ್ರದಲ್ಲಿ ನಟ ಉಪೇಂದ್ರ ಸೂಪರ್ ಸ್ಟಾರ್ ಸೂರ್ಯ ಕುಮಾರ್ ಎಂಬ ಸೂಪರ್ ಸ್ಟಾರ್ ನಟ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಾಯಕ ನಟ ಉಪೇಂದ್ರ, ‘ಎಲ್ಲಾ ಸಿನೆಮಾ ಮಾಡೋದಕ್ಕೂ ಒಂದೊಂದು ಕಾರಣ ಇರುತ್ತದೆ. ಸಿನೆಮಾದ ಸಬ್ಜೆಕ್ಟ್, ಮೆಸೇಜ್, ಸ್ಕ್ರೀನ್ ಪ್ಲೇ, ನಮಗೆ ಸಿಗುವ ಸ್ಕೋಪ್ ಇದೆಲ್ಲಾ ಕಾರಣವಾಗುತ್ತದೆ. ಆದರೆ ಈ ಸಿನೆಮಾ ಮಾಡಿರುವುದು ಅಭಿಮಾನಿಗಳಿಗೋಸ್ಕರ. ಈ ಚಿತ್ರ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ. ನಾನು ಚಿತ್ರ ನೋಡಿ ಮಾತನಾಡುತ್ತೇನೆ’ ಎಂದರು.
ಸೂಪರ್ ಸ್ಟಾರ್ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ…
‘ಆಂಧ್ರ ಕಿಂಗ್ ತಾಲೂಕ’ ಸಿನೆಮಾದಲ್ಲಿ ನಟ ರಾಮ್ ಪೋತಿನೇನಿ ಸೂಪರ್ ಸ್ಟಾರ್ ನಟನೊಬ್ಬನ ಅಭಿಮಾನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟ ರಾಮ್ ಪೋತಿನೇನಿ,
”ಆಂಧ್ರ ಕಿಂಗ್ ತಾಲೂಕು’ ಸಿನೆಮಾದಲ್ಲಿ ನಾನು ಹೃದಯದಿಂದ ಅಭಿನಯಿಸಿದ್ದೇನೆ. ಅಭಿಮಾನಿ ಹಾಗೂ ನಟ ನಡುವಿನ ಪ್ರೀತಿ ಮಾತ್ರವಲ್ಲದೆ ಈ ಚಿತ್ರದಲ್ಲಿ ಎಮೋಷನ್ ಇದೆ. ಅದು ನಿಮ್ಮನ್ನು ಟಚ್ ಮಾಡುತ್ತದೆ ಎಂದುಕೊಂಡಿದ್ದೇನೆ. ಉಪ್ಪಿ ಸರ್ ಜೊತೆ ನಟಿಸಿರುವುದು ಖುಷಿ ಇದೆ. ಪ್ರತಿಯೊಬ್ಬ ಅಭಿಮಾನಿಯ ಮನಮುಟ್ಟುವಂಥ ಸಿನೆಮಾ ಇದಾಗಲಿದೆ’ ಎಂದರು.
ಅಭಿಮಾನಿಗಳಿಗೆ ಕನೆಕ್ಟ್ ಆಗುವಂಥ ಸಿನೆಮಾ…
‘ಆಂಧ್ರ ಕಿಂಗ್ ತಾಲೂಕು’ ಚಿತ್ರದ ನಿರ್ದೇಶಕ ಮಹೇಶ್ ಬಾಬು ಮಾತನಾಡಿ, ”ಆಂಧ್ರ ಕಿಂಗ್ ತಾಲೂಕು’ ಸಿನೆಮಾ ನಟರಿಗಿಂತ ಇದು ಅಭಿಮಾನಿಗಳಿಗೆ ಕನೆಕ್ಟ್ ಆಗುವ ಸಿನಿಮಾ. ಇದು ಅಭಿಮಾನಿ ಹಾಗೂ ಸ್ಟಾರ್ ನಡುವಿನ ಚಿತ್ರ ಎನ್ನುವುದಕ್ಕಿಂತ ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ನನಗೆ ಅವಕಾಶ ಕೊಟ್ಟ ಇಡೀ ಚಿತ್ರತಂಡಕ್ಕೆ ಧನ್ಯವಾದ. ನಿರ್ದೇಶಕನಾಗಿ ನನಗೆ ಇದು ಎರಡನೇ ಚಿತ್ರ’ ಎಂದರು.
ನವೆಂಬರ್ 27ಕ್ಕೆ ‘ಆಂಧ್ರ ಕಿಂಗ್ ತಾಲೂಕು’ ರಿಲೀಸ್
‘ಆಂಧ್ರ ಕಿಂಗ್ ತಾಲೂಕು’ ಸಿನೆಮಾ ಇದೇ 2025ರ ನವೆಂಬರ್ 27ಕ್ಕೆ ಬಿಡುಗಡೆಯಾಗುತ್ತದೆ. ಚಿತ್ರದಲ್ಲಿ ನಟ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ.
ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕಥೆ. ಈ ಚಿತ್ರವನ್ನ ಮಹೇಶ್ ಬಾಬು ಪಿ. ಡೈರೆಕ್ಷನ್ ಮಾಡಿದ್ದಾರೆ. ಇವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಕೂಡ ಇವರದ್ದೆ ಆಗಿದೆ. ಉಪೇಂದ್ರ, ರಾಮ್ ಪೋತಿನೇನಿ, ಭಾಗ್ಯಶ್ರೀ ಜೊತೆಗೆ ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ತಾರಾಬಳಗದಲ್ಲಿದ್ದಾರೆ. ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಸಂಗೀತ ಸಂಯೋಜಿಸಿದ್ದಾರೆ. ‘ಮೈತ್ರಿ ಮೂವಿ ಮೇಕರ್ಸ್’ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಉಪ್ಪಿ ಹೊಸ ತೆಲುಗು ಸಿನೆಮಾ ಹೇಗಿದೆ ಎಂಬುದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.















