‘ZEE 5’ನಲ್ಲಿ ಮಲಯಾಳಂ ‘ದಿ ಪೆಟ್ ಡಿಟೆಕ್ಟಿವ್’ ಸ್ಟ್ರೀಮಿಂಗ್
‘ದಿ ಪೆಟ್ ಡಿಟೆಕ್ಟಿವ್’ ಓಟಿಟಿಗೆ ಎಂಟ್ರಿ
ನವೆಂಬರ್ 28ಕ್ಕೆ ‘ZEE 5’ನಲ್ಲಿ ಮಲಯಾಳಂ ‘ದಿ ಪೆಟ್ ಡಿಟೆಕ್ಟಿವ್’ ಸ್ಟ್ರೀಮಿಂಗ್
ಓಟಿಟಿಗೆ ಮಲಯಾಳಂನ ಸೂಪರ್ ಹಿಟ್ ಸಿನಿಮಾ
ಕೆಲ ದಿನಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾಗಿ ಮಲೆಯಾಳಂ ಸಿನಿಪ್ರಿಯರ ಗಮನ ಸೆಳೆದಿದ್ದ ಸೂಪರ್ ಹಿಟ್ ಸಿನೆಮಾ ‘ದಿ ಪೆಟ್ ಡಿಟೆಕ್ಟಿವ್’ ಈಗ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಹೌದು, ಇದೇ ನವೆಂಬರ್ ತಿಂಗಳ 28ರಿಂದ ‘ZEE 5’ನಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಅಂದಹಾಗೆ, ‘ದಿ ಪೆಟ್ ಡಿಟೆಕ್ಟಿವ್’ ಚಿತ್ರ ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದ್ದು, ಬಹುಭಾಷೆಗಳಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಬಹುದು. 
ಏನಿದು ‘ದಿ ಪೆಟ್ ಡಿಟೆಕ್ಟಿವ್’ ಕಥೆ..?
ಪ್ರಾಣೀಶ್ ವಿಜಯನ್ ನಿರ್ದೇಶನದ ‘ದಿ ಪೆಟ್ ಡಿಟೆಕ್ಟಿವ್’ ಚಿತ್ರದಲ್ಲಿ ಶರಫ್ ಯು ಧೀನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ನಿರ್ಮಾಪಕರಾಗಿ ಇದು ಚೊಚ್ಚಲ ಪ್ರಯತ್ನ ಕೂಡ. ವಿನಾಯಕನ್, ವಿನಯ್ ಫೋರ್ಟ್, ಅನುಪಮಾ ಪರಮೇಶ್ವರನ್, ಶ್ಯಾಮ್ ಮೋಹನ್ ಮತ್ತು ಜೋಮನ್ ಜ್ಯೋತಿರ್ ಸೇರಿದಂತೆ ಪ್ರತಿಭಾನ್ವಿತ ತಾರಾಗಣ ಚಿತ್ರದಲ್ಲಿದೆ.
ಟೈಟಲ್ ಹೇಳುವಂತೆ, ‘ದಿ ಪೆಟ್ ಡಿಟೆಕ್ಟಿವ್’ ಒಂದು ಪತ್ತೆಧಾರಿ ಸಿನೆಮಾ. ಕಾಣೆಯಾದ ಶ್ವಾನ ಹುಡುಕುತ್ತಾ ಹೋಗುವ ನಾಯಕನ ಸುತ್ತಾ ಸಾಗುವ ಕಥೆ ಇದಾಗಿದೆ. ಥಿಯೇಟರಿನಲ್ಲಿ ಈಗಾಗಲೇ ನೋಡುಗರಿಗೆ ಭರ್ಜರಿ ಮನರಂಜನೆ ಕೊಟ್ಟಿರುವ ‘ದಿ ಪೆಟ್ ಡಿಟೆಕ್ಟಿವ್’ ಸಿನೆಮಾ ಓಟಿಟಿಯಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುದು ಚಿತ್ರತಂಡದ ಮಾತು.
‘ದಿ ಪೆಟ್ ಡಿಟೆಕ್ಟಿವ್’ ಓಟಿಟಿ ಆಡಿಯನ್ಸ್‌ಗೂ ಇಷ್ಟವಾಗುತ್ತದೆಯಂತೆ..!
ಇನ್ನು ‘ದಿ ಪೆಟ್ ಡಿಟೆಕ್ಟಿವ್’ ಸಿನೆಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಮಾತನಾಡಿರುವ ನಿರ್ಮಾಪಕ ಮತ್ತು ನಟ ಶರಫ್ ಯು. ಧೀನ್, “ದಿ ಪೆಟ್ ಡಿಟೆಕ್ಟಿವ್’ ನನಗೆ ತುಂಬಾ ವಿಶೇಷ ಸಿನೆಮಾ. ಕೇವಲ ನಟನಾಗಿ ಮಾತ್ರವಲ್ಲ, ನಿರ್ಮಾಪಕನಾಗಿ ನನ್ನ ಚೊಚ್ಚಲ ಪ್ರಯತ್ನ ಇದು. ಪ್ರೇಕ್ಷಕರು ಹೆಚ್ಚು ಯೋಚಿಸದೆ ಸರಳವಾಗಿ ನಗುವಂತಹ ಚಿತ್ರವನ್ನು ನಾವು ಮಾಡಲು ಬಯಸಿದ್ದೇವೆ. ಇದು ವರ್ಣಮಯವಾಗಿದೆ ಮತ್ತು ಹೃದಯ ತುಂಬಿದೆ. ಈಗ ವೀಕ್ಷಕರು ‘ZEE 5’ನಲ್ಲಿ ಇದನ್ನು ಆನಂದಿಸಬಹುದು ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ. ಅಂದಹಾಗೆ, ‘ದಿ ಪೆಟ್ ಡಿಟೆಕ್ಟಿವ್’ ನವೆಂಬರ್ 28 ರಿಂದ ‘ZEE 5’ ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿರುತ್ತದೆ. ಆಸಕ್ತರು ನೋಡಿ ಆನಂದಿಸಬಹುದು.















