‘ದಿ ರೈಸ್ ಆಫ್ ಅಶೋಕ’ ಚಿತ್ರದ ‘ಏಳೋ ಏಳೋ ಮಾದೇವ…’ ಸಾಂಗ್ ರಿಲೀಸ್
‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಗೀತೆ ಬಿಡುಗಡೆ
‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಶಿವನ ಪರಾಕಷ್ಠೆಯಲ್ಲಿ ಮಿಂದೆದ್ದ ಸತೀಶ್ ನೀನಾಸಂ
ನೀನಾಸಂ ಬರೆದ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಗೀತೆ
ಕನ್ನಡ ಚಿತ್ರಂಗದ ‘ಅಭಿನಯ ಚತುರ’ ಖ್ಯಾತಿಯ ಸತೀಶ್ ನೀನಾಸಂ ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ನೀನಾಸಂ ಸತೀಶ್ ಅಭಿನಯದ ಹೊಸಚಿತ್ರಕ್ಕೆ ‘ದಿ ರೈಸ್ ಆಫ್ ಅಶೋಕ’ ಎಂದು ಹೆಸರಿಡಲಾಗಿದ್ದು, ಈಗಾಗಲೇ ಈ ಚಿತ್ರದ ಟೈಟಲ್ ಹಾಗೂ ಕಂಟೆಂಟ್ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದೆ. ಇದೀಗ ಈ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ಮಾದೇವನ ಕುರಿತಾಗಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಈ ಮೊದಲ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಹೇಗಿದೆ ‘ದಿ ರೈಸ್ ಆಫ್ ಅಶೋಕ’ನ ಮೊದಲ ಗೀತೆ..?
‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಗೀತೆಗೆ ಸ್ವತಃ ಚಿತ್ರದ ನಾಯಕ ನಟ ನೀನಾಸಂ ಸತೀಶ್ ಅವರೇ ಸಾಹಿತ್ಯ ರಚಿಸಿದ್ದಾರೆ. ‘ಏಳೋ ಏಳೋ ಮಹಾದೇವ…’ ಎಂಬ ಸಾಲಿನಿಂದ ಶುರುವಾಗುವ ಈ ಗೀತೆಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಖೇರ್, ಸಾಧ್ವಿನಿ ಕೊಪ್ಪ ಹಾಗೂ ಸಿದ್ದು ಧ್ವನಿಯಾಗಿದ್ದಾರೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನ್ನು ವರ್ಣಿಸಿರುವ ಸತೀಶ್ ನೀನಾಸಂ, ಶಿವನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದ್ದಾರೆ.
‘ದಿ ರೈಸ್ ಆಫ್ ಅಶೋಕ’ ಚಿತ್ರದ ‘ಏಳೋ ಏಳೋ ಮಹಾದೇವ…’ ಗೀತೆಯ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
70ರ ದಶಕದಲ್ಲಿ ನಡೆಯುವ ‘ಅಶೋಕ’ನ ಕಥಾನಕ
‘ದಿ ರೈಸ್ ಆಫ್ ಅಶೋಕ’ 70ರ ದಶಕದಲ್ಲಿ ನಡೆಯುವ ಕಥಾಹಂದರವನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ನಾಯಕ ನಟ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯನ್ನು ‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ತೆರೆದಿಡಲಾಗಿದೆ. ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ ‘ಕಾಂತಾರ’ ಚಿತ್ರದ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಉಳಿದಂತೆ ಬಿ. ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ಹರೀಶ್ ಪೆರಾಡಿ, ಜಗಪ್ಪ ಮೊದಲಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.















