Street Beat

ಗವಿ ಗಂಗಾಧರನ ಮುಂದೆ ‘ದಿ ರೈಸ್ ಆಫ್ ಅಶೋಕ’ನ ಗೀತೆ

ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ‘ದಿ ರೈಸ್ ಆಫ್ ಅಶೋಕ’ ಚಿತ್ರಗೀತೆ ಬಿಡುಗಡೆ

ಸತೀಶ್‌ ನೀನಾಸಂ ಬರೆದ ‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಪರಶಿವನ ಪರಾಕಾಷ್ಠೆ

ಮಾದೇವನ ಸ್ಮರಣೆಯಲ್ಲಿ ‘ದಿ ರೈಸ್ ಆಫ್ ಅಶೋಕ’ನ ಮೊದಲ ಗೀತೆ

ನಟ ಸತೀಶ್ ನೀನಾಸಂ ಅಭಿನಯದ ಮುಂಬರಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ. ಈಗಾಗಲೇ ‘ದಿ ರೈಸ್ ಆಫ್ ಅಶೋಕ’ ಟೈಟಲ್ ಹಾಗೂ ಕಥಾಹಂದರದ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ, ಈ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ಬೆಂಗಳೂರಿನ ಪೌರಾಣಿಕ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಯಿತು.

ಗವಿಗಂಗಾಧರನ ಸನ್ನಿಧಿಯಲ್ಲಿ ಮಾದೇವನ ಧ್ಯಾನ!

ಇನ್ನು ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಗೀತೆಗೆ ಚಿತ್ರದ ನಾಯಕ ನಟ ನೀನಾಸಂ ಸತೀಶ್‌ ಅವರೇ ಸಾಹಿತ್ಯವನ್ನು ಬರೆದಿರುವುದು ವಿಶೇಷ. ‘ಏಳೋ ಏಳೋ ಮಹಾದೇವ…’ ಎಂಬ ಸಾಲಿನಿಂದ ಶುರುವಾಗುವ ಈ ಗೀತೆಗೆ ಖ್ಯಾತ ಗಾಯಕ ಕೈಲಾಶ್‌ ಖೇರ್‌, ಸಾಧ್ವಿನಿ ಕೊಪ್ಪ ಹಾಗೂ ಸಿದ್ಧು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ಮಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂತೆ ಭಕ್ತಿಯ ರಸಭಾವವನ್ನು ಹೊತ್ತು ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಗೀತೆ ಹೊರಬಂದಿದೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನ್ನು ವರ್ಣಿಸಿರುವ ಸತೀಶ್ ನೀನಾಸಂ, ಶಿವನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದ್ದಾರೆ.

‘ದಿ ರೈಸ್ ಆಫ್ ಅಶೋಕ’ನ ಹಾಡಿನ ಮೇಲೆ ಸತೀಶ್‌ ನಿರೀಕ್ಷೆ…

‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ ಬಳಿಕ ಭಾವುಕರಾಗಿಯೇ ಮಾತನಾಡಿದ ಸತೀಶ್‌ ನೀನಾಸಂ, ”ಅಯೋಗ್ಯ’ ಸಿನೆಮಾ ನನಗೆ ಲೆಕ್ಕ ಅಲ್ಲಾ, ಮನೇಲಿ ಮಲಗಿದ್ದರು ಜನ ಆ ಸಿನೆಮಾ ನೋಡ್ತಾರೆ. ‘ಅಯೋಗ್ಯ’ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡೋ ಹುಚ್ಚ ಅಂತಾರೆ? ಒಂದು ‘ಕೆಜಿಎಫ್’, ಒಂದು ‘ಕಾಂತಾರ’ ಮಾಡಬೇಕು ಅನ್ನೋ ಆಸೆ ನನಗಿದೆ. ಒಂದು ರೂಪಾಯಿ ನಾನು ಸೈನಿಂಗ್ ದುಡ್ಡು ತಗೊಂಡಿಲ್ಲ. ನಾಳೆ ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮಹತ್ಯೆ ಮಾಡ್ಕೊಂಡಿದ್ರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು. ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣಗೆ ಆಕ್ಸಿಡೆಂಟ್ ಆಗುತ್ತೆ. ಮೂರು ವರ್ಷ ರಾತ್ರಿ ಕಣ್ಣೀರು ಹಾಕಿ ಸಿನೆಮಾ ಕಂಪ್ಲೀಟ್ ಮಾಡಿದ್ದೇವೆ. ನನ್ನ ಶತ್ರುಗಳು ಈ ಸಿನೆಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನೆಮಾಗೆ 50 ಲಕ್ಷ ರೂ. ತಗೊಂಡು 6 ಸಿನೆಮಾ ಮಾಡಬಹುದಿತ್ತು. ಮೂರು ವರ್ಷದಲ್ಲಿ, ಆದ್ರೆ ಮಾಡ್ಲಿಲ್ಲ ಸರ್ವಸ್ವವು ನಮಗೆ ‘ರೈಸ್ ಆಫ್ ಅಶೋಕ’ ಆಗಿತ್ತು’ ಎಂದಿದ್ದಾರೆ.

‘ದಿ ರೈಸ್ ಆಫ್ ಅಶೋಕ’ನ ಜೊತೆ ಕೆಲಸ ಖುಷಿತಂದಿದೆ; ಸಪ್ತಮಿ ಗೌಡ

‘ದಿ ರೈಸ್ ಆಫ್ ಅಶೋಕ’ ಚಿತ್ರದ ಹಾಡು ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ನಟಿ ಸಪ್ತಮಿ ಗೌಡ, ‘ನನಗೆ ಬಹಳ ಖುಷಿಯಾಗ್ತಿದೆ. ನಾನು ಸಿನಿಮಾ ತಂಡಕ್ಕೆ ಲಾಸ್ಟ್ ಆರ್ಟಿಸ್ಟ್ ಆಗಿ ಸೇರ್ಪಡೆಯಾಗಿದ್ದು. ನಾನು ಈ ಚಿತ್ರ ಭಾಗವಾಗಿದ್ದೇನೋ ಅಂದಿನಿಂದ‌ ಇಂದಿನವರೆಗೂ ಯಾವುದೇ ಸಾಂಗ್, ಡೈಲಾಗ್ , ಸೀನ್, ಕಾಸ್ಟ್ಯೂಮ್ ಎಲ್ಲರ ಬಗ್ಗೆಯೂ ಚರ್ಚೆ ನಡೆಸುತ್ತಾರೆ. ನಮ್ಮ ಅಭಿಪ್ರಾಯ ಕೇಳುತ್ತಾರೆ. ಸತೀಶ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ. ಇಡೀ ತಂಡಕ್ಕೆ ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಎಲ್ಲರೂ ಅವರ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ಸಿನೆಮಾ ಎಲ್ಲಾ ಥರದ ಆಡಿಯನ್ಸ್‌ಗೂ ಇಷ್ಟವಾಗುತ್ತದೆ ಎಂಬ ಭರವಸೆಯಿದೆ. ಆದಷ್ಟು ಬೇಗ ಈ ಸಿನೆಮಾವನ್ನು ನಿಮ್ಮ ಮುಂದೆ ತರಲು ಇಡೀ ಚಿತ್ರತಂಡ ಪರಿಶ್ರಮ ಹಾಕುತ್ತಿದೆ’ ಎಂದರು. ಇನ್ನು ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದು, ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.

70ರ ದಶಕದ ‘ಅಶೋಕ’ನ ಜೊತೆ ಬಹು ಕಲಾವಿದರ ದಂಡು

‘ದಿ ರೈಸ್ ಆಫ್ ಅಶೋಕ’ 70ರ ದಶಕದಲ್ಲಿ ನಡೆಯುವ ಕಥಾಹಂದರವನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ನಾಯಕ ನಟ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯನ್ನು ‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ತೆರೆದಿಡಲಾಗಿದೆ. ಚಿತ್ರದಲ್ಲಿ ಸತೀಶ್​ಗೆ ಜೋಡಿಯಾಗಿ ‘ಕಾಂತಾರ’ ಚಿತ್ರದ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಉಳಿದಂತೆ ಬಿ. ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ಹರೀಶ್ ಪೆರಾಡಿ, ಜಗಪ್ಪ ಮೊದಲಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ ‘ದಿ ರೈಸ್‌ ಆಫ್‌ ಅಶೋಕ’

ಇನ್ನು ‘ದಿ ರೈಸ್‌ ಆಫ್‌ ಅಶೋಕ’ ಚಿತ್ರ ನಾಯಕ ನಟ ನೀನಾಸಂ ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್​ ಬಜೆಟ್ ಚಿತ್ರ ಎನ್ನಲಾಗುತ್ತಿದೆ. ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ. ‘ವೃದ್ಧಿ ಕ್ರಿಯೇಷನ್’ ಹಾಗೂ ‘ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್’ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ದಿ ರೈಸ್ ಆಫ್ ಆಫ್ ಅಶೋಕ’ನಿಗೆ ದಯಾನಂದ್ ಟಿ. ಕೆ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ ಮತ್ತು  ಮನು ಶೇಡ್ಗಾರ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ರವಿವರ್ಮಾ ಹಾಗೂ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ ಸಂತೋಷ್ ಶೇಖರ್ ನೃತ್ಯ ನಿರ್ದೇಶನವಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!