ಹೊರಬಂತು ‘ದೊಡ್ಮನ್ಸ’ನ ಡ್ಯುಯೆಟ್ ಸಾಂಗ್
‘ದೊಡ್ಮನ್ಸ’ ಚಿತ್ರದ ಡ್ಯುಯೆಟ್ ಸಾಂಗ್ ರಿಲೀಸ್
ತೆರೆಗೆ ಬರಲು ಶರತ್ ಕೃಷ್ಣ ನಟನೆ, ನಿರ್ದೇಶನದ ‘ದೊಡ್ಮನ್ಸ’ ಚಿತ್ರದ ತಯಾರಿ
‘ದೊಡ್ಮನ್ಸ’ನ ಪ್ರಣಯ ಗೀತೆಗೆ ಶರತ್ ಕೃಷ್ಣ-ರೇಷ್ಮಾ ಹೆಜ್ಜೆ…
ಯುವ ಪ್ರತಿಭೆ ಶರತ್ ಕೃಷ್ಣ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬರುತ್ತಿರುವ ‘ದೊಡ್ಮನ್ಸ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ನಿಧಾನವಾಗಿ ‘ದೊಡ್ಮನ್ಸ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ‘ದೊಡ್ಮನ್ಸ’ ಚಿತ್ರದ ರೊಮ್ಯಾಂಟಿಕ್ ಡ್ಯುಯೆಟ್ ಹಾಡೊಂದನ್ನು ಬಿಡುಗಡೆ ಮಾಡಿದೆ.
ಹೇಗಿದೆ ‘ದೊಡ್ಮನ್ಸ’ನ ಡ್ಯುಯೆಟ್ ಸಾಂಗ್..?
‘ಹಾಜರಿ ಹಾಕು… ಈಗಲೇ ನೀನು ಇನ್ನು ತಡ ಮಾಡದೇ…’ ಎಂಬ ಸಾಲುಗಳಿಂದ ಶುರುವಾಗುವ ಈ ಪ್ರೇಮಗೀತೆಗೆ ನಿಹಾಲ್ ತಾವ್ರೋ ಧ್ವನಿಯಾಗಿದ್ದಾರೆ. ಪೌಲ್ ಅಲೆಕ್ಸ್ ಸಂಗೀತ ಸಂಯೋಜನೆಯ ಈ ಗೀತೆಗೆ ನಾಯಕ ನಟ ಕಂ ನಿರ್ದೇಶಕ ಶರತ್ ಕೃಷ್ಣ ಅವರೇ ಸಾಹಿತ್ಯ ಒದಗಿಸಿದ್ದಾರೆ. ಇನ್ನು ತೆರೆಮೇಲೆ ಈ ಮೆಲೋಡಿ ಗೀತೆಗೆ ನಾಯಕ ನಟ ಶರತ್ ಕೃಷ್ಣ ಮತ್ತು ನಾಯಕಿ ರೇಷ್ಮಾ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಗುಜರಾತಿನ ಕಚ್ ಸುತ್ತಮುತ್ತಲಿನ ಬೀಚ್ ನಂತೆ ಕಾಣುವ ಉಪ್ಪು ನೀರಿನ ಜಾಗ ನಡುವಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ.
‘ದೊಡ್ಮನ್ಸ’ ಚಿತ್ರದ ಡ್ಯುಯೆಟ್ ಹಾಡಿನ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ಜೂನ್‌ನಲ್ಲಿ ದೊಡ್ಡಪರದೆಗೆ ‘ದೊಡ್ಮನ್ಸ’ ಎಂಟ್ರಿ
‘ವೇದಿಕ್ ಕಾಸ್ಮೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ದೊಡ್ಮನ್ಸ’ ಚಿತ್ರದಲ್ಲಿ ನಾಯಕ ನಟ ಶರತ್ ಕೃಷ್ಣ ಅವರಿಗೆ ರೇಷ್ಮಾ ಮತ್ತು ಶಿಲ್ಪಾ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ‘ದೊಡ್ಮನ್ಸ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ 2026ರ ಜೂನ್ ತಿಂಗಳಿನಲ್ಲಿ ‘ದೊಡ್ಮನ್ಸ’ ಚಿತ್ರವನ್ನು ದೊಡ್ಡ ಪರದೆಗೆ ತರುವ ಯೋಜನೆ ಹಾಕಿಕೊಂಡಿದೆ.















