Pop Corner

‘ಕೆವಿಎನ್’ ನಿರ್ಮಾಣದಲ್ಲಿ ಚಿರಂಜೀವಿ 158ನೇ ಚಿತ್ರ

ಚಿರಂಜೀವಿ 158ನೇ ಸಿನೆಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್‌’ ಬಂಡವಾಳ

‘ಮೆಗಾ ಸ್ಟಾರ್’ ಚಿತ್ರಕ್ಕೆ ‌ಕ್ಲ್ಯಾಪ್ ಮಾಡಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ತೆಲುಗಿನ ಮತ್ತೊಂದು ಬಿಗ್‌ ಬಜೆಟ್‌ ಚಿತ್ರಕ್ಕೆ ‘ಕೆವಿಎನ್‌ ಪ್ರೊಡಕ್ಷನ್ಸ್‌’ ರೆಡಿ

ಟಾಲಿವುಡ್‌ನ ‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ 158ನೇ ಸಿನೆಮಾಕ್ಕೆ ಭೂಮಿಕೆ ಸಿದ್ಧವಾಗಿದೆ. ಹೌದು, ಕೆಲ ದಿನಗಳ ಹಿಂದಷ್ಟೇ ‘ಮೆಗಾ ಸ್ಟಾರ್’ ಚಿರಂಜೀವಿ, ಈ ಹೊಸ ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನೆಮಾದ ಆಕ್ಷನ್ ಪಾತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್‌ ವೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ‘ಮೆಗಾ ಸ್ಟಾರ್’ ಚಿರಂಜೀವಿ ಅಭಿಮಾನಿಗಳು ಕೂಡ ಈ ವಿಡಿಯೋ ನೋಡಿ ಸಾಕಷ್ಟು ಖುಷಿಪಟ್ಟುಕೊಂಡಿದ್ದರು. ಇದೀಗ ಈ ಸಿನೆಮಾ ಅಧಿಕೃತವಾಗಿ ಸೆಟ್ಟೇರಿದೆ.

ಅಣ್ಣನ ಸಿನೆಮಾಕ್ಕೆ ತಮ್ಮನ ಹಾರೈಕೆ…

ಅಂದಹಾಗೆ, ‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ 158ನೇ ಸಿನೆಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ನಟ ಚಿರಂಜೀವಿ ಅವರ ಕಿರಿಯ ಸೋದರ, ಪ್ರಸ್ತುತ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ (ಡಿಸಿಎಂ) ಆಗಿರುವ ಪವನ್‌ ಕಲ್ಯಾಣ್‌, ‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ 158ನೇ ಸಿನೆಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ, ಅಣ್ಣನ ಸಿನೆಮಾಕ್ಕೆ ಶುಭ ಕೋರಿದರು.

ಟಾಲಿವುಡ್‌ನತ್ತ ‘ಕೆವಿಎನ್‌’ ಚಿತ್ತ

ಇನ್ನು ಈಗಾಗಲೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ‘ಕೆವಿಎನ್ ಪ್ರೊಡಕ್ಷನ್ಸ್‌’ ಸಂಸ್ಥೆ ಈಗ ಟಾಲಿವುಡ್‌ನಲ್ಲೂ ಅಡಿಯಿಡುತ್ತಿದೆ. ‘ರಾಕಿಂಗ್ ಸ್ಟಾರ್’ ಯಶ್ ಜೊತೆ ‘ಟಾಕ್ಸಿಕ್’, ಧ್ರುವ ಜೊತೆ ‘ಕೆಡಿ’ ಹಾಗೂ ತಮಿಳಿನಲ್ಲಿ ವಿಜಯ್ ಜೊತೆ ‘ಜನನಾಯಗನ್’ ಸಿನೆಮಾ ಮಾಡಿರುವ ಈ ನಿರ್ಮಾಣ ಸಂಸ್ಥೆ ಈಗ ತೆಲುಗಿನ ‘ಮೆಗಾ ಸ್ಟಾರ್’ ಚಿರಂಜೀವಿ ಜೊತೆ ಕೈ ಜೋಡಿಸಿದೆ. ಚಿರಂಜೀವಿ 158ನೇ ಸಿನೆಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್‌’ ಸಂಸ್ಥೆಯ ವೆಂಕಟ್ ಕೆ. ನಾರಾಯಣ್ ಬಂಡವಾಳ ಹೂಡುತ್ತಿದ್ದಾರೆ. ಈ ಮೂಲಕ ‘ಕೆವಿಎನ್ ಪ್ರೊಡಕ್ಷನ್ಸ್‌’ ಸಂಸ್ಥೆ ‘ಮೆಗಾ ಸ್ಟಾರ್’ ಚಿರಂಜೀವಿ ಜೊತೆ ಕೈ ಜೋಡಿಸಿ ತೆಲುಗು ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ ಎನ್ನಬಹುದು.

ಬಹುಭಾಷೆಗಳಲ್ಲಿ ‘ಮೆಗಾಸ್ಟಾರ್’ ಚಿರಂಜೀವಿ ಸಿನೆಮಾ

ತೆಲುಗಿನಲ್ಲಿ ಈ ಹಿಂದೆ ‘ಮೆಗಾಸ್ಟಾರ್’ ಚಿರಂಜೀವಿ ಅಭಿನಯದ ‘ವಾಲ್ತೇರು ವೀರಯ್ಯ’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ಬಾಬಿ ಕೊಲ್ಲಿ ಈ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನೆಮಾ ಇದಾಗಿದೆ. ಈ ಚಿತ್ರದ ಟೈಟಲ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದೆ. ಬಹುಕೋಟೆ ಬಜೆಟ್ ನಲ್ಲಿ ಈ ಸಿನೆಮಾ ನಿರ್ಮಾಣವಾಗುತ್ತಿದ್ದು, ತೆಲುಗಿನ ಜೊತೆಗೆ ತಮಿಳು, ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಈ ಸಿನೆಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಉಳಿದಂತೆ ‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ 158ನೇ ಈ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

Related Posts

error: Content is protected !!