Street Beat

ಹೋರಾಟದ ಕಥೆ ‘ಕೊತ್ತಲವಾಡಿ’ ಮೇಲೆ ಭರಪೂರ ನಿರೀಕ್ಷೆ

ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದ ‘ಕೊತ್ತಲವಾಡಿ’ ಟ್ರೇಲರ್‌

ರಾಕಿಂಗ್‌ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ರಿಲೀಸ್‌ಗೆ ರೆಡಿ…

ಹೋರಾಟದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ!

‘ಕೊತ್ತಲವಾಡಿ’ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಬಹುತೇಕರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ 2025ರ ಆಗಸ್ಟ್‌ 1ರಂದು ‘ಕೊತ್ತಲವಾಡಿ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ‘ಕೊತ್ತಲವಾಡಿ’ ಚಿತ್ರದ ಬಿಡುಗಡೆಗೂ ಕೆಲ ದಿನಗಳ ಮೊದಲು ಟ್ರೇಲರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ‘ಕೊತ್ತಲವಾಡಿ’ ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದೆ.

ಭಯ-ಭಕ್ತಿಯಿಂದ ಸಿನೆಮಾ ಮಾಡಿದ್ದೇವೆ… 

‘ಕೊತ್ತಲವಾಡಿ’ ಸಿನೆಮಾದ ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ತಾಯಿ ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣಕುಮಾರ್‌, ‘ಆಗಸ್ಟ್‌ 1ಕ್ಕೆ ‘ಕೊತ್ತಲವಾಡಿ’ ಸಿನೆಮಾ ಥಿಯೇಟರಿಗೆ ಬರ್ತಿದೆ. ಜನ ಈ ಚಿತ್ರ ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಬಲವಾಗಿ ಇದೆ. ಸೆಲೆಬ್ರಿಟಿ ಮನೆಯವರಾಗಿ ಭಯ ಭಕ್ತಿಯಿಂದ ಸಿನೆಮಾ ಮಾಡಿದ್ದೇವೆ. ಯಶ್‌ಗೆ ಏನೋ ಹೇಳದೇ ಮಾಡಿಲ್ಲ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ. ಬೇರೆ ದೊಡ್ಡಸ್ತಿಕೆ ಇದರಲ್ಲಿ ಇಲ್ಲ. ಇವೆಲ್ಲಾ ಅಂದುಕೊಳ್ಳಬೇಡಿ. ಮನೆಯಲ್ಲಿರುವ ಬಾಸ್‌ ನೋಡಿ ನಮಗೆ ಸ್ಫೂರ್ತಿ ಪಡೆದು ಸಿನೆಮಾ ಮಾಡಿದ್ದೇವೆ’ ಎಂದರು.

‘ಕೊತ್ತಲವಾಡಿ’ಯಲ್ಲಿ ಕಂಟೆಂಟ್‌, ಕ್ವಾಲಿಟಿ ಹೈಲೈಟ್‌!

‘ಕೊತ್ತಲವಾಡಿ’ ಚಿತ್ರದ ನಿರ್ದೇಶಕ ಶ್ರೀರಾಜ್‌ ಮಾತನಾಡಿ, ‘ಖುಷಿ ಅನ್ನೋವುದಕ್ಕಿಂತ ಇದು ಜವಾಬ್ದಾರಿ. ಆಡಿಯನ್ಸ್‌ ನೋಡಿ ಚಿತ್ರಕ್ಕೆ ಪ್ರತಿಕ್ರಿಯೆ ಕೊಡಬೇಕು. ಈಗ ‘ಕೊತ್ತಲವಾಡಿ’ ಸಿನೆಮಾದ ಟ್ರೇಲರ್‌ ಬಿಟ್ಟಿದ್ದೇವೆ. ಈ ಕಥೆ ಶುರುವಾದಾಗ ಪುಷ್ಪ ಅಮ್ಮನ ಚರ್ಚೆ ಮಾಡಿದೆ. ಒಬ್ಬರೇ ಚಿತ್ರತಂಡ ಸೇರಿಕೊಂಡರು. ಯಾವುದಕ್ಕೂ ಕಾಂಪ್ರಮೈಸ್‌ ಆಗಬೇಡ. ನಿನಗೆ ಏನೂ ಬೇಕೋ ಅದು ತೆಗೆದುಕೊಳ್ಳು ಎನ್ನುತ್ತಿದ್ದರು. ಇವತ್ತು ನೀವು ನೋಡುತ್ತಿರುವ ಕ್ವಾಲಿಟಿ, ಕಂಟೆಂಟ್‌ ಕಾರಣ ಪುಷ್ಪ ಅಮ್ಮ. ಈ ರೀತಿ ನಿರ್ಮಾಪಕರು ಕನ್ನಡ ಇಂಡಸ್ಟ್ರೀಗೆ ಬೇಕು. ಆಡಿಯನ್ಸ್‌ಗೆ ಇಷ್ಟವಾಗುವಂತೆ ಸಿನೆಮಾ ಮಾಡಿದ್ದೇವೆ ಎಂಬ ನಂಬಿಕೆಯಿದೆ. ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ’ ಎಂದು ಹೇಳಿದರು.

ಆಗಸ್ಟ್‌ ಮೊದಲ ವಾರ ‘ಕೊತ್ತಲವಾಡಿ’ ಭವಿಷ್ಯ ನಿರ್ಧಾರ

‘ಕೊತ್ತಲವಾಡಿ’ ಸಿನೆಮಾಕ್ಕೆ ಯುವ ಪ್ರತಿಭೆ ಶ್ರೀರಾಜ್ ಆಕ್ಷನ್-ಕಟ್ ಹೇಳಿದ್ದಾರೆ. ಸಿನೆಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡಿಗೆ ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಚಿತ್ರದ ಹಾಡುಗಳಿಗೆ ಸಾಲುಗಳನ್ನು ಬರೆದಿದ್ದಾರೆ. ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

‘ಕೊತ್ತಲವಾಡಿ’ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ರಾಜಕೀಯ ದಂಗಲ್‌, ಪೊಲೀಸ್‌ ವ್ಯವಸ್ಥೆ, ಅವಕಾಶವಾದಿತನ, ನಾಯಕನ ಹೋರಾಟ, ಛಲ ಸುತ್ತ ಸಿನೆಮಾ ಸಾಗುತ್ತದೆ. ಹಳ್ಳಿ ಹೈದನಾಗಿ ಪೃಥ್ವಿ ಅಂಬರ್‌ ರಗಡ್‌ ಅವತಾರ ತಾಳಿದ್ದು, ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ ಮತ್ತಿತರರು ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕೆ.ಆರ್‌.ಜಿ ಸ್ಟುಡಿಯೋಸ್‌’ ಸಂಸ್ಥೆ ‘ಕೊತ್ತಲವಾಡಿ’ ಸಿನೆಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

Related Posts

error: Content is protected !!