ಮೋಹನ ಲಾಲ್ ‘ವೃಷಭ’ ಸಿನೆಮಾದ ರಿಲೀಸ್ ಫಿಕ್ಸ್
ಮೋಹನ ಲಾಲ್ ಅಭಿನಯದ ‘ವೃಷಭ’ ಚಿತ್ರ ನ. 6ಕ್ಕೆ ತೆರೆಗೆ
ಮೋಹನ ಲಾಲ್ – ನಂದಕಿಶೋರ್ ಜೋಡಿಯ ‘ವೃಷಭ’ ಚಿತ್ರದ ಬಿಡುಗಡೆಗೆ ದಿನ ನಿಗದಿ
ಏಕಕಾಲಕ್ಕೆ ಬಹು ಭಾಷೆಗಳಲ್ಲಿ ‘ವೃಷಭ’ ತೆರೆಗೆ
ಮಲಯಾಳಂ ಸೂಪರ್ ಸ್ಟಾರ್ ಮೋಹನ ಲಾಲ್ ಅಭಿನಯದ ಬಹುನಿರೀಕ್ಷಿತ ‘ವೃಷಭ’ ಸಿನೆಮಾದ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೇ 2025ರ ನವೆಂಬರ್ 6ಕ್ಕೆ ವಿಶ್ವಾದ್ಯಂತ ‘ವೃಷಭ’ ಚಿತ್ರ ತೆರೆಗೆ ಬರ್ತಿದೆ. ಇನ್ನು ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ‘ವೃಷಭ’ ಸಿನೆಮಾ ನಿರ್ಮಾಣವಾಗಿದ್ದು, ಇನ್ನುಳಿದಂತೆ ಕನ್ನಡ, ಮಲೆಯಾಳಂ, ಹಿಂದಿ ಭಾಷೆಗಳಿಗೆ ಡಬ್ ಮಾಡಿ ‘ವೃಷಭ’ ಸಿನೆಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.
ನಂದ ಕಿಶೋರ್ ನಿರ್ದೇಶನದಲ್ಲಿ ‘ವೃಷಭ’ ಸಿನೆಮಾ ಮೂಡಿ ಬಂದಿದೆ. ಇನ್ನು ‘ವೃಷಭ’ ಸಿನೆಮಾದ ಬಿಡುಗಡೆಯ ಬಗ್ಗೆ ಮಾತನಾಡಿರುವ ನಿರ್ಮಾಪಕಿ ಏಕ್ತಾ ಆರ್. ಕಪೂರ್ , ‘ನಮ್ಮ ‘ವೃಷಭ’ ಸಿನೆಮಾ ಇದೇ ನವೆಂಬರ್ 6 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ, ಶಕ್ತಿಯುತ ಭಾವನೆಗಳಿಂದ ತುಂಬಿದೆ. ‘ವೃಷಭ’ ಸಿನೆಮಾವನ್ನು ವಿಶ್ವಾದ್ಯಂತ ಪ್ರೇಕ್ಷಕರಿಗೆ ತರಲು ನಾವು ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ವೃಷಭ’ ಸಿನೆಮಾ ತ್ಯಾಗ ಮತ್ತು ಸಾಹಸಗಳ ಕಥಾನಕ…
‘ವೃಷಭ’ ಸಿನೆಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ನಂದ ಕಿಶೋರ್ ಮಾತನಾಡಿ, ”ವೃಷಭ’ ಸಿನೆಮಾ ಸಂಬಂಧಗಳು, ತ್ಯಾಗ ಮತ್ತು ಸಾಹಸಗಳ ಘರ್ಷಣೆಯನ್ನು ಹೇಳುತ್ತದೆ. ನವೆಂಬರ್ 6 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾಯುತ್ತಿದ್ದೇನೆ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ವೃಷಭ’ ಸಿನೆಮಾದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಕೂಡ ಬಣ್ಣ ಹಚ್ಚಿದ್ದಾರೆ. ಮೋಹನ ಲಾಲ್ ಹಾಗೂ ಸಮರ್ಜಿತ್ ತಂದೆ, ಮಗನಾಗಿ ‘ವೃಷಭ’ ಸಿನೆಮಾದಲ್ಲಿ ನಟಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಮತ್ತು ನಯನ್ ಸಾರಿಕಾ ‘ವೃಷಭ’ ಸಿನೆಮಾದ ಇತರ ತಾರಾ ಬಳಗದಲ್ಲಿದ್ದಾರೆ. ‘ವೃಷಭ’ ಸಿನೆಮಾಕ್ಕೆ ಸ್ಯಾಮ್ ಸಿ. ಎಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೆಸೂಲ್ ಪೂಕುಟ್ಟಿ ಸೌಂಡ್ ಡಿಸೈನ್ , ಎಸ್‌ಆರ್‌ಕೆ, ಜನಾರ್ಧನ್ ಮಹರ್ಷಿ ಮತ್ತು ಕಾರ್ತಿಕ್ ಅವರ ಸಂಭಾಷಣೆ ಮತ್ತು ಪೀಟರ್ ಹೈನ್, ಸ್ಟಂಟ್ ಸಿಲ್ವಾ ಮತ್ತು ನಿಖಿಲ್ ಅವರ ಹೈ-ಆಕ್ಟೇನ್ ಸೀಕ್ವೆನ್ಸ್ ‘ವೃಷಭ’ ಸಿನೆಮಾಗಿದೆ. 
ನವೆಂಬರ್ ಮೊದಲವಾರ ‘ವೃಷಭ’ ಭವಿಷ್ಯ ನಿರ್ಧಾರ…
‘ಕನೆಕ್ಟ್ ಮೀಡಿಯಾ’ ಮತ್ತು ‘ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್’, ‘ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್’ ಸಹಯೋಗದಲ್ಲಿ ಪ್ರಸ್ತುತಪಡಿಸಿದ್ದು, ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಸಿ.ಕೆ. ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಚಿತ್ರ ನಿರ್ಮಿಸಿದ್ದಾರೆ. ಒಟ್ಟಾರೆ ಬಿಡುಗಡೆಗೂ ಮೊದಲೇ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ವೃಷಭ’ ಸಿನೆಮಾ ತೆರೆಮೇಲೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.















