Quick ಸುದ್ದಿಗೆ ಒಂದು click

2020 ಮತ್ತು 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಜ 08, ಬೆಂಗಳೂರು:  ಕನ್ನಡ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ 2020 ಹಾಗೂ 2021ನೇ ಸಾಲಿನ ‘ಜೀವಮಾನದ ಸಾಧನೆ ಪ್ರಶಸ್ತಿ’ಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ‘ಡಾ. ರಾಜಕುಮಾರ್‌ ಪ್ರಶಸ್ತಿ’, ‘ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ’ ಹಾಗೂ ‘ಡಾ. ವಿಷ್ಣುವರ್ಧನ್‌ ಪ್ರಶಸ್ತಿ’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಶಸ್ತಿಗಳನ್ನು ನೀಡುತ್ತ ಬಂದಿದ್ದು, 2020 ಹಾಗೂ 2021ನೇ ಸಾಲಿನ ಈ ಮೂರು ಪ್ರಶಸ್ತಿಗಳನ್ನು ಏಕಕಾಲಕ್ಕೆ ಘೋಷಣೆ ಮಾಡಲಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ನಟಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಶ್ರೀಮತಿ ಡಾ. ಜಯಮಾಲಾ ಅವರಿಗೆ 2020ನೇ ಸಾಲಿನ ‘ಡಾ. ರಾಜ​ಕುಮಾರ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ. ಹಿರಿಯ ನಿರ್ದೇಶಕ ಎಂ. ಎಸ್. ಸತ್ಯು ಅವರು 2020ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ಛಾಯಾಗ್ರಹಕರಾದ ಪ್ರಗತಿ ಅಶ್ವತ್ಥ್​ ನಾರಾಯಣ​ ಅವರಿಗೆ 2020ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ. ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಈ ಮೂವರದ್ದೂ ಜೀವಮಾನ ಸಾಧನೆ ಎಂದು ಪರಿಗಣಿಸಿ 2020ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಿರ್ಮಾಪಕ ಸಾ. ರಾ. ಗೋವಿಂದು ಅವರಿಗೆ 2021ನೇ ಸಾಲಿನ ‘ಡಾ. ರಾಜಕುಮಾರ್ ಪ್ರಶಸ್ತಿ’ ಘೋಷಣೆ ಆಗಿದೆ. ನಿರ್ದೇಶಕ ಶಿವರುದ್ರಯ್ಯ ಅವರು 2021ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ನಟ ಎಂ. ಕೆ. ಸುಂದರ್ ರಾಜ್​ ಅವರಿಗೆ 2021ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಸಾಧಕರಿಗೆ 1993ರಿಂದ ‘ಡಾ. ರಾಜ​ಕುಮಾರ್ ಪ್ರಶಸ್ತಿ’ಯನ್ನು ನೀಡಲಾಗುತ್ತಿದೆ. ಮೊದಲು ಈ ಪ್ರಶಸ್ತಿಯನ್ನು ಹಿರಿಯ ನಟ ಕೆ. ಎಸ್. ಅಶ್ವತ್ಥ್ ಪಡೆದಿದ್ದರು. ‘ಡಾ. ರಾಜ​ಕುಮಾರ್ ಪ್ರಶಸ್ತಿ’ ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. 2019ರಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರು ‘ಡಾ. ರಾಜಕುಮಾರ್ ಪ್ರಶಸ್ತಿ’ ಪಡೆದಿದ್ದರು. ಈಗ ಹಿರಿಯ ನಟಿ ಜಯಮಾಲಾ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. 1974ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜಯಮಾಲಾ ‘ಗಿರಿ ಕನ್ಯೆ’, ‘ಪ್ರೇಮದ ಕಾಣಿಕೆ’, ‘ಶಂಕರ್ ಗುರು’, ‘ದಾರಿ ತಪ್ಪಿದ ಮಗ’ ಸೇರಿದಂತೆ ಡಾ. ರಾಜಕುಮಾರ್‌ ಅಭಿನಯದ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇನ್ನು 2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿರುವ ಹಿರಿಯ ನಿರ್ಮಾಪಕ ಸಾ. ರಾ. ಗೋವಿಂದು ಅವರು ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಿನೆಮಾ ನಿರ್ಮಾಣ ಮಾತ್ರವಲ್ಲದೇ ಕನ್ನಡ ಪರ ಹೋರಾಟದಲ್ಲೂ ಗುರುತಿಸಿಕೊಂಡಿರುವ ಸಾ. ರಾ. ಗೋವಿಂದು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

Related Posts

error: Content is protected !!