ಧೀರೆನ್ ರಾಮಕುಮಾರ್, ಸತ್ಯ ಪ್ರಕಾಶ್ ಹೊಸ ಜೊತೆಯಾಟ..!
ಧೀರೆನ್ ರಾಮಕುಮಾರ್, ಡಿ. ಸತ್ಯ ಪ್ರಕಾಶ್ ಜೋಡಿಯ ಹೊಸಚಿತ್ರ
ಪ್ರೀ-ಪ್ರೊಡಕ್ಷನ್ ಕೆಲಸ ಕಂಪ್ಲೀಟ್.., ಶೀಘ್ರದಲ್ಲೇ ಚಿತ್ರದ ಟೈಟಲ್ ಅನೌನ್ಸ್..!
ಧೀರೆನ್ ರಾಮಕುಮಾರ್, ಸತ್ಯ ಜೋಡಿಗೆ ಶಿವಣ್ಣ ದಂಪತಿ ಹಾರೈಕೆ
ಕನ್ನಡ ಚಿತ್ರರಂಗದಲ್ಲಿ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರೆಡಲ್ಲಾ..’, ‘ಮ್ಯಾನ್ ಆಫ್ ದ ಮ್ಯಾಚ್’, ‘ಎಕ್ಸ್ ಅಂಡ್ ವೈ’ ಸಿನೆಮಾಗಳ ಮೂಲಕ ಸದಭಿರುಚಿ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಟ ಕಂ ನಿರ್ದೇಶಕ ಡಿ. ಸತ್ಯ ಪ್ರಕಾಶ್, ಶೀಘ್ರದಲ್ಲಿಯೇ ‘ದೊಡ್ಮನೆ ಹುಡ್ಗ’ ಧೀರೆನ್ ರಾಮಕುಮಾರ್ ಅವರಿಗೆ ಆಕ್ಷನ್-ಕಟ್ ಹೇಳುವ ತಯಾರಿ ಮಾಡಿಕೊಂಡಿದ್ದಾರೆ. 
ಹೌದು, ಡಿ. ಸತ್ಯ ಪ್ರಕಾಶ್ ಅಣ್ಣಾವ್ರ ಮೊಮ್ಮಗ, ಹಿರಿಯ ನಟ ರಾಮಕುಮಾರ್ – ಪೂರ್ಣಿಮಾ ದಂಪತಿ ಪುತ್ರ ಧೀರೆನ್ ರಾಮಕುಮಾರ್ ಅವರ ಮುಂದಿನ ಸಿನೆಮಾದ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಸಿನೆಮಾದ ಕಥೆ ಅಂತಿಮವಾಗಿದ್ದು, ಚಿತ್ರದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳೂ ಅಂತಿಮ ಹಂತದಲ್ಲಿದೆ. ಇನ್ನು ಈ ಸಿನೆಮಾದ ಕಥೆಯನ್ನು ಕೇಳಿ ಇಷ್ಟಪಟ್ಟಿರುವ ನಟ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ದಂಪತಿ ಕೂಡ ಧೀರೆನ್ ರಾಮಕುಮಾರ್, ಡಿ, ಸತ್ಯ ಪ್ರಕಾಶ್ ಜೋಡಿಯ ಹೊಸ ಸಿನೆಮಾಕ್ಕೆ ಶುಭ ಹಾರೈಸಿ, ಬೆನ್ನು ತಟ್ಟಿದ್ದಾರೆ. ಚಿತ್ರತಂಡದ ಮೂಲಗಳ ಪ್ರಕಾರ, ಈ ಸಿನೆಮಾದ ಟೈಟಲ್ ಇನ್ನೂ ಅಂತಿಮವಾಗಿಲ್ಲ. ಸದ್ಯ ಈ ಸಿನೆಮಾದ ಕಲಾವಿದರು, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಡಿಸೆಂಬರ್ ಅಂತ್ಯದೊಳಗೆ ಈ ಸಿನೆಮಾ ಸೆಟ್ಟೇರುವ ಸಾಧ್ಯತೆಯಿದೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. 
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಸಿನೆಮಾ ಅನೌನ್ಸ್
ಇನ್ನು ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿಯೇ ಧೀರೆನ್ ರಾಮಕುಮಾರ್ ಮತ್ತು ಡಿ. ಸತ್ಯ ಪ್ರಕಾಶ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಹೊಸ ಸಿನೆಮಾ ಅಧಿಕೃತವಾಗಿ ಅನೌನ್ಸ್ ಆಗಿದೆ. ಧೀರೆನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಸಿನೆಮಾವನ್ನು ಮಂಗಳೂರು ಮೂಲದ ‘ಆರ್. ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.
ಈ ಸಿನೆಮಾಕ್ಕೆ ನಿರ್ದೇಶಕ ಸತ್ಯ ಪ್ರಕಾಶ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆಯುತ್ತಿದ್ದಾರೆ. ಉಳಿದಂತೆ ಇದು ಯಾವ ಶೈಲಿಯ ಸಿನೆಮಾ. ಇದರ ವಿಶೇಷತೆಗಳೇನು..? ಈ ಸಿನೆಮಾದ ಹೆಸರು, ಕಲಾವಿದರ, ತಂತ್ರಜ್ಞರ ಮಾಹಿತಿಗಳನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ನಿರ್ದೇಶಕ ಡಿ. ಸತ್ಯ ಪ್ರಕಾಶ್.















