‘ಗತವೈಭವ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್
‘ಗತವೈಭವ’ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್
ಸಿಂಪಲ್ ಸುನಿ, ದುಷ್ಯಂತ್, ಆಶಿಕಾ ಜೋಡಿಯ ‘ಗತವೈಭವ’ಕ್ಕೆ ಕಿಚ್ಚ ಸುದೀಪ್ ಬೆಂಬಲ…
ಇದೇ ನ. 14ಕ್ಕೆ ‘ಗತವೈಭವ’ ಪ್ರೇಕ್ಷಕರ ಮುಂದೆ…
ನಿರ್ದೇಶಕ ಸಿಂಪಲ್ ಸುನಿ ಅವರ ಮುಂಬರುವ ಸಿನೆಮಾ ‘ಗತವೈಭವ’ ಈಗಾಗಲೇ ತನ್ನ ಕಂಟೆಂಟ್ ಮೂಲಕ ಒಂದಷ್ಟು ನಿರೀಕ್ಷೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ‘ಗತವೈಭವ’ ಸಿನೆಮಾದ ಟೀಸರ್ ಮತ್ತು ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,ಇದೀಗ ‘ಗತವೈಭವ’ ಸಿನೆಮಾಕ್ಕೆ ಕಿಚ್ಚ ಸುದೀಪ್ ಬೆಂಬಲ ಕೂಡ ಸಿಕ್ಕಿದೆ.
ಇತ್ತೀಚೆಗೆ ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ‘ಗತವೈಭವ’ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.
ಸುನಿ ಕೆಲಸಕ್ಕೆ ಕಿಚ್ಚನ ಮೆಚ್ಚುಗೆ…
‘ಗತವೈಭವ’ ಸಿನೆಮಾದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ನಟ ಕಿಚ್ಚ ಸುದೀಪ್, ‘ಕನ್ನಡ ಚಿತ್ರರಂಗದ ಬೆಸ್ಟ್ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ನನಗಿನ್ನೂ ಸಿಕ್ಕಿಲ್ಲ. ಒಂದಲ್ಲಾ ಒಂದು ದಿನ ಅವರ ಜೊತ ಕೆಲಸ ಮಾಡಬಹುದು. ಪ್ರತಿಯೊಂದು ಫ್ರೇಮ್ ಅನ್ನು ಕೆತ್ತಿ ಕೆತ್ತಿ ತೆಗೆಯುತ್ತೀರಿ ತಾವು. ನಾನು ‘ಗತವೈಭವ’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಚಿತ್ರದ ಹೀರೋ ದುಷ್ಯಂತ್, ನಾಯಕಿ ಆಶಿಕಾ ರಂಗನಾಥ್ ಎಲ್ಲರೂ ಚೆನ್ನಾಗಿ ಕಾಣುತ್ತಿದ್ದೀರಿ. ಈ ಚಿತ್ರದ ಹೀರೋ ದುಷ್ಯಂತ್ ಅವರಿಗೆ ನಾನು ಟಿಪ್ಸ್ ಕೊಡುವುದು ಏನಿಲ್ಲ. ಅವರು ತುಂಬಾ ಚೆನ್ನಾಗಿ ಮಾತನಾಡಿದ್ದು ನೋಡಿದೆ. ಅಸಲಿಗೆ, ನಾನು ಅವರಿಂದ ಕಲಿಯಬೇಕು. ಇವರು ಹೇಗೆ 10 ನಿಮಿಷಗಳ ಕಾಲ ಅಷ್ಟೊಂದು ಅಚ್ಚುಕಟ್ಟಾಗಿ ಎಲ್ಲರನ್ನ ತಮ್ಮ ಮಾತಿನಿಂದ ಹಿಡಿದಿಟ್ಟುಕೊಂಡರು ಅಂತ ಯೋಚಿಸ್ತಿದೆ. ಆಮೇಲೆ ಗೊತ್ತಾಯ್ತು ದುಷ್ಯಂತ್ ಅವರು ರಾಜಕಾರಣಿ ಮಗ ಅಂತ’ ಎಂದು ಹೇಳಿದರು.
‘ಗತವೈಭವ’ ಬೇರೆ ರೀತಿ ಸಿನೆಮಾ…
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ‘ಸುದೀಪ್ ಸರ್ ಟ್ರೇಲರ್ ಲಾಂಚ್ ಗೆ ಬಂದಿರುವುದು ಖುಷಿ ಕೊಟ್ಟಿದೆ. ಇದು ಬೇರೆ ರೀತಿ ಸಿನೆಮಾ. ಈ ಚಿತ್ರ ರಿಲೀಸ್ ಆದ್ಮೇಲೆ ಮೌತ್ ಪಬ್ಲಿಸಿಟಿ ತೆಗೆದುಕೊಂಡ ಚೆನ್ನಾಗಿ ಹೋಗುತ್ತದೆ ಎಂಬ ನಂಬಿಕೆ ಇದೆ.
ಚಿತ್ರಕ್ಕೆ ಹಾಕಿರುವ ಎಫರ್ಟ್ ದೊಡ್ಡದಿದೆ. ಆದರೆ ಸ್ಟಾರ್ ವ್ಯಾಲ್ಯೂ ಕಮ್ಮಿ ಇತ್ತು. ಅದನ್ನು ನಮ್ಮ ಚಿತ್ರರಂಗದ ಗಣ್ಯರಾದ ಶಿವಣ್ಣ, ಸುದೀಪ್ ಸರ್ ಬೆಂಬಲ ಸಿಕ್ಕಿರುವುದು ‘ಗತವೈಭವ’ ಸಿನೆಮಾಗೆ ಒಳ್ಳೆ ಓಪನಿಂಗ್ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದರು.
ಒಂದೇ ಸಿನೆಮಾ ನಾಲ್ಕು ಅನುಭವ… ಆಶಿಕಾ ನುಡಿ
ನಟಿ ಆಶಿಕಾ ರಂಗನಾಥ್ ಮಾತನಾಡಿ, ‘ಈ ‘ಗತವೈಭವ’ ಚಿತ್ರದ ಟ್ರೇಲರ್ ಲಾಂಚ್ ಗೆ ಸುದೀಪ್ ಸರ್ ಮೆರುಗು ನೀಡಿದ್ದಾರೆ. ‘ಗತವೈಭವ’ ಸಾಕಷ್ಟು ರೀತಿಯಲ್ಲಿ ಸ್ಪೆಷಲ್ ಚಿತ್ರ. ಅತಿ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ ಸಿನೆಮಾ. ಒಂದು ‘ಗತವೈಭವ’ ಸಿನೆಮಾ ನಾಲ್ಕು ಸಿನೆಮಾ ನೋಡುವ ಅನುಭವ ನೀಡುತ್ತದೆ. ನಾಲ್ಕು ಕಥೆ, ನಾಲ್ಕು ಪಾತ್ರಗಳು. ಇದು ಹೊಸ ರೀತಿ ಸ್ಕ್ರೀಪ್ಟ್. ನವೆಂಬರ್ 14 ಕ್ಕೆ ಚಿತ್ರ ತೆರೆಗೆ ಬರಲಿದೆ. ನಿಮ್ಮ ಸಪೋರ್ಟ್ ಇರಲಿ’ ಎಂದರು.
ದುಷ್ಯಂತ್ ಎಂಟು ವರ್ಷಗಳ ಪ್ರಯತ್ನಕ್ಕೆ ಫಲ ಸಿಗುವ ಹೊತ್ತು…
‘ಗತವೈಭವ’ ಚಿತ್ರದ ನಾಯಕ ನಟ ದುಷ್ಯಂತ್ ಮಾತನಾಡಿ, ‘ಸುಮಾರು ಎಂಟು ವರ್ಷಗಳ ಪ್ರಯತ್ನದ ಬಳಿಕ ನಾನು ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಇದೇ ತಿಂಗಳ 14ರಂದು ನಮ್ಮ ಚಿತ್ರ ತೆರೆಗೆ ಬರ್ತಿದೆ. ತ್ರಿಭಾಷಾ ನಟಿ ಆಶಿಕಾ ಅವರ ಜೊತೆ ನಟಿಸಿರುವುದು ಸಂತಸ ತಂದಿದೆ.
ಹತ್ತು ಯಶಸ್ವಿ ಚಿತ್ರಗಳ ನಿರ್ದೇಶಕ ಸಿಂಪಲ್ ಸುನಿ ಅವರ ಕನಸಿನ ಕೂಸು ಮಕ್ಕಳ ದಿನದಂದು ನಿಮ್ಮ ಮುಂದೆ ಬರ್ತಿದೆ. ನಿಮ್ಮ ಬೆಂಬಲ ಇರಲಿ’ ಎಂದರು.
‘ಗತವೈಭವ’ ತೆರೆಗೆ ಬರಲು ಕೌಂಡ್‌ಡೌನ್..!
ಅಂದಹಾಗೆ, ಇದೇ 2025ರ ನವೆಂಬರ್ 14ರಂದು ತೆರೆಗೆ ಬರಲಿರುವ ‘ಗತವೈಭವ’ ಚಿತ್ರದಲ್ಲಿ ಹೊಸ ಹೀರೋ ದುಷ್ಯಂತ್ ಜೊತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ವಿಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ‘ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್’ ಮತ್ತು ‘ಸುನಿ ಸಿನಿಮಾಸ್’ ಸಂಸ್ಥೆಯಡಿ ದೀಪಕ್ ಹಾಗೂ ಸಿಂಪಲ್ ಸುನಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.















