ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು
ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು
ಅನಾರೋಗ್ಯದಿಂದ ಮುಂಬೈನಲ್ಲಿ ಆಸ್ಪತ್ರೆಗೆ ಬಾಲಿವುಡ್‌ನ ‘ಹೀ ಮ್ಯಾನ್’ ಧರ್ಮೇಂದ್ರ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಧರ್ಮೇಂದ್ರ ನಿಧನದ ಸುದ್ದಿ
ಮುಂಬೈ, ನ. 11; ಭಾರತೀಯ ಚಿತ್ರರಂಗದ ಹಿರಿಯ ನಟ, ಬಾಲಿವುಡ್‌ನ ‘ಹೀ ಮ್ಯಾನ್’, ‘ಎವರ್‌ಗ್ರೀನ್ ಸ್ಟಾರ್’, ‘ಆಕ್ಷನ್ ಕಿಂಗ್’ ಅಂತಲೇ ಜನಪ್ರಿಯರಾಗಿದ್ದ ನಟ ಧರ್ಮೇಂದ್ರ, ಮುಂಬೈನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಧರ್ಮೇಂದ್ರ ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ನ. 10 ಬೆಳಿಗ್ಗೆ ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿ ಬಳಲುತ್ತಿದ್ದ ಹಿರಿಯ ನಟ ಧರ್ಮೇಂದ್ರ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆರು ದಶಕಗಳ ಚಿತ್ರರಂಗದ ನಂಟಿರುವ ನಟ…
ಆರು ದಶಕಗಳ ವೃತ್ತಿಜೀವನದಲ್ಲಿ ಧರ್ಮೇಂದ್ರ, ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಟ. 1960ರಲ್ಲಿ ‘ದಿಲ್ ಭೀ ತೇರಾ ಹಮ್ ಭೀ ತೇರೆ’ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಧರ್ಮೇಂದ್ರ, ಅಲ್ಲಿಂದ ‘ಬಂದಿನಿ’, ‘ಅನುಪಮಾ’, ‘ಶೋಲೆ’, ‘ಚುಪ್ಕೆ ಚುಪ್ಕೆ’, ‘ಮೇರಾ ಗಾಂವ್ ಮೇರಾ ದೇಶ್’, ‘ಡ್ರೀಮ್ ಗರ್ಲ್’ ಸೇರಿದಂತೆ ಹಲವುಗಳಲ್ಲಿ ಸಿನೆಮಾಗಳಲ್ಲಿ ನಟಿಸಿ, ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.
ಬಾಲಿವುಡ್‌ನ ‘ಹೀ ಮ್ಯಾನ್’, ‘ಎವರ್‌ಗ್ರೀನ್ ಸ್ಟಾರ್’, ‘ಆಕ್ಷನ್ ಕಿಂಗ್’ ಅಂತಲೇ ನಟ ಧರ್ಮೇಂದ್ರ ಜನಪ್ರಿಯರಾಗಿದ್ದರು. 2025ರ ಆರಂಭದಲ್ಲಿ ಧರ್ಮೇಂದ್ರ ಅವರು ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟನೆಯ ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಸಿನೆಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇನ್ನೂ ಧರ್ಮೇಂದ್ರ ಹಿಂದಿಯ ‘ಇಕ್ಕಿಸ್’ ಸಿನೆಮಾದಲ್ಲಿ ಕೂಡ ಕಾಣಿಸಿಕೊಂಡಿದ್ದು, ಆ ಸಿನೆಮಾ ಇದೇ ವರ್ಷ ಡಿಸೆಂಬರ್ 25ರಂದು ತೆರೆಗೆ ಬರಬೇಕಿದೆ.
ಇದೇ ಏಪ್ರಿಲ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದ ಧರ್ಮೇಂದ್ರ, ಕಳೆದ ಕೆಲ ವಾರಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಡಿಸೆಂಬರ್ 8ರಂದು ನಟ ಧರ್ಮೇಂದ್ರ 90ನೇ ವಸಂತಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಧರ್ಮೇಂದ್ರ ಅವರ ಅನಾರೋಗ್ಯದ ಸುದ್ದಿ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿದೆ.
ಧರ್ಮೇಂದ್ರ ನಿಧನದ ಸುದ್ದಿಗೆ ಹರಿಹಾಯ್ದ ಕುಟುಂಬ!
ಬಾಲಿವುಡ್ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ನಟ ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿ, ಧರ್ಮೇಂದ್ರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಧರ್ಮೇಂದ್ರ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಧರ್ಮೇಂದ್ರ ನಿಧನದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕೂಡ ಹೇಮಾ ಮಾಲಿನಿ ಹರಿಹಾಯ್ದಿದ್ದಾರೆ.















