ರೂಪೇಶ್ ಶೆಟ್ಟಿ ಚಿತ್ರಕ್ಕೆ ‘ಜೈ’ ಎಂದ ಸುನೀಲ್ ಶೆಟ್ಟಿ!
‘ಜೈ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಬಾಲಿವುಡ್ ನಟ
ತಂಡದ ಜೊತೆ ಭರ್ಜರಿಯಾಗಿ ‘ಜೈ’ ಚಿತ್ರದ ಪ್ರಚಾರ ನಡೆಸಿದ ಸುನೀಲ್ ಶೆಟ್ಟಿ
‘ಜೈ’ ಚಿತ್ರದ ಬಗ್ಗೆ ಸುನೀಲ್ ಶೆಟ್ಟಿ ನಿರೀಕ್ಷೆಯ ಮಾತು…
ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಜೈ’ ಚಿತ್ರ ಇದೇ ನವೆಂಬರ್ 14ರಂದು ತೆರೆಗೆ ಬರುತ್ತಿದೆ. ಸದ್ಯ ಭರದಿಂದ ‘ಜೈ’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇತ್ತೀಚೆಗೆ ಬೆಂಗಳೂರಿನಲ್ಲಿ ಬಹಿರಂಗ ಕಾರ್ಯಕ್ರಮವನ್ನು ನಡೆಸುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕಸರತ್ತು ಮಾಡಿದೆ. ಇನ್ನು ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ನಡೆದ ‘ಜೈ’ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಪ್ರಚಾರ ಕಾರ್ಯಕ್ರಮದಲ್ಲಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಭಾಗವಹಿಸಿ ನೆರೆದಿದ್ದವರ ಗಮನ ಸೆಳೆದರು. 
‘ಜೈ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಮುಂಬೈನಿಂದ ಆಗಮಿಸಿದ ಸುನೀಲ್ ಶೆಟ್ಟಿ ಬೆಂಗಳೂರಿನ ಮಂತ್ರಿಮಾಲ್ ಗೆ ಬಂದು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಗೆ ವೇದಿಕೆ ಏರಿದ ಸುನೀಲ್ ಶೆಟ್ಟಿಗೆ ಚಿತ್ರತಂಡ ಮತ್ತು ಅವರ ಅಭಿಮಾನಿಗಳು ಪುಷ್ಪವೃಷ್ಠಿಯನ್ನು ಸುರಿಸಿ ಸಂಭ್ರಮಿಸಿದರು.
‘ಜೈ’ ಚಿತ್ರಕ್ಕೆ ಶುಭಕೋರಿದ ಸುನೀಲ್ ಶೆಟ್ಟಿ
‘ಜೈ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಮಾತಾಡಿದ ಸುನೀಲ್ ಶೆಟ್ಟಿ, ‘ನನಗೆ ಕನ್ನಡ ಗೊತ್ತು. ಆದರೆ ಅಷ್ಟಾಗಿ ಮಾತಾಡಲು ಬರುವುದಿಲ್ಲ. ತುಂಬ ಒಳ್ಳೆಯ ತಂಡ ಸೇರಿಕೊಂಡು ‘ಜೈ’ ಸಿನೆಮಾ ಮಾಡಿದೆ. ಈ ಸಿನೆಮಾ ದೊಡ್ಡದಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಚಿತ್ರತಂಡದ ಪ್ರಯತ್ನಕ್ಕೆ ಶುಭವಾಗಲಿ’ ಎಂದರು. ಬೆಂಗಳೂರಿನ ತಮ್ಮ ನಂಟಿನ ಬಗ್ಗೆ ಮಾತನಾಡಿದ ಸುನೀಲ್ ಶೆಟ್ಟಿ, ‘ಬೆಂಗಳೂರಿನಲ್ಲಿ ನನ್ನಕ್ಕ ಇದ್ದರು ಈಗ ಅವರಿಲ್ಲ. ಈಗ ನನ್ನ ಭಾವ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ’ ಎಂದರು. ಇನ್ನು ತಮ್ಮ ವಯಸ್ಸಿನ ಬಗ್ಗೆ ನಿರೂಪಕಿಯ ಪ್ರೆಶ್ನೆಗೆ, ‘ನನಗೆ ಜಸ್ಟ್ 65 ವಯಸ್ಸು ಅಷ್ಟೇ. ನನ್ನ ಸೌಂಧರ್ಯಕ್ಕೆ ಕಾರಣ ನನ್ನ ನೆಲ, ನನ್ನೂರಿನ ಮೀನು, ನನ್ನೂರಿನ ಬೊಂಡ (ಎಳನೀರು), ನನ್ನೂರಿನ ಸಂಸ್ಕೃತಿ ಕಾರಣ’ ಎಂದರು. 
ರೂಪೇಶ್ ಶೆಟ್ಟಿಗೆ ಗಾಡ್ ಬ್ರದರ್…
ನಂತರ ಮಾತಾಡಿದ ಚಿತ್ರದ ನಟ ನಿರ್ದೇಶಕ ರೂಪೇಶ್ ಶೆಟ್ಟಿ, ‘ನಮ್ಮ ಅಣ್ಣ ಸುನೀಲ್ ಶೆಟ್ಟಿ ಅವರು ನಾನು ಕಥೆ ಹೇಳಿದ 5 ನಿಮಿಷಗಳಲ್ಲಿ ಅಭಿನಯಿಸಲು ಒಪ್ಪಿಗೆ ಕೊಟ್ಟರು. 5 ದಿನ ಕಾಲ್ ಶೀಟ್ ಕೊಟ್ಟು ಒಂದು ರೂಪಾಯಿ ಕೂಡ ಸಂಭಾವನೆ ತೆಗೆದು ಕೊಳ್ಳದೇ ಅಭಿನಯಿಸಿದ್ದಾರೆ. ನನಗೆ ಯಾರು ಗಾಡ್ ಫಾದರ್ ಇಲ್ಲ. ಆದರೆ ಸುನೀಲ್ ಶೆಟ್ಟಿ ದೇವರು ಕಳಿಸಿಕೊಟ್ಟ ಗಾಡ್ ಬ್ರದರ್’ ಎಂದು ಖುಷಿಯಿಂದ ರೂಪೇಶ್ ಶೆಟ್ಟಿ ಹೇಳಿದರು. ತದ ನಂತರ ಸುನೀಲ್ ಶೆಟ್ಟಿ ಮತ್ತು ನಿರ್ದೇಶಕ ರೂಪೇಶ್ ಶೆಟ್ಟಿ ಜೊತೆಗೂಡಿ ಹುಲಿ ನೃತ್ಯಕ್ಕೆ ಹೆಜ್ಜೆ ಹಾಕಿದರು.
‘ಜೈ’ ಚಿತ್ರದ ನಾಯಕಿ ಅದ್ವಿತಿ ಶೆಟ್ಟಿ ಟೆಡಿಷನಲ್ ಗ್ಲಾಮರ್ ಆಗಿ ಮಿಂಚುತ್ತಿದ್ದರು. ರೂಪೇಶ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿಯವರ ಜೊತೆ ನಿಂತು ಕ್ಯಾಮರಾಗಳಿಗೆ ಫೋಸ್ ಕೊಟ್ಟ ಅದ್ವಿತಿ ಶೆಟ್ಟಿ, ‘ಜೈ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು. ‘ಆರ್. ಎಸ್. ಸಿನೆಮಾಸ್’, ‘ಶೂಲಿನ್ ಫಿಲಂಸ್’, ‘ಮುಗ್ರೋಡಿ ಪ್ರೊಡಕ್ಷನ್’ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ‘ಜೈ’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಅಂದಹಾಗೆ, ಭರದಿಂದ ಪ್ರಚಾರ ನಡೆಸುತ್ತಿರುವ ‘ಜೈ’ ಚಿತ್ರ ಇದೇ ರ ನವೆಂಬರ್‌ರಂದು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ.















