Quick ಸುದ್ದಿಗೆ ಒಂದು click

ಹಿರಿಯ ನಟ ಎಂ.ಎಸ್. ಉಮೇಶ್ ನಿಧನ

ಹಿರಿಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ

ಅನಾರೋಗ್ಯದಿಂದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ನಿಧನ

ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದ ಎಂ.ಎಸ್. ಉಮೇಶ್

ಬೆಂಗಳೂರು, ನ. 30; ಕನ್ನಡ ಚಿತ್ರರಂಗದ ಹಿರಿಯ ನಟ ಎಂ. ಎಸ್. ಉಮೇಶ್ ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಂ. ಎಸ್‌. ಉಮೇಶ್‌ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ.

ಫಲಿಸದ ಚಿಕಿತ್ಸೆ… ಬಾರದ ಲೋಕಕ್ಕೆ ಉಮೇಶಣ್ಣ…

ಕನ್ನಡ ಚಿತ್ರರಂಗದ ಹಿರಿಯ ನಟ ಎಂ. ಎಸ್‌. ಉಮೇಶ್‌ ಚಿತ್ರರಂಗದ ಮತ್ತು ಸ್ನೇಹಿತರ ಬಳಗದಲ್ಲಿ ಉಮೇಶಣ್ಣ ಎಂದೇ ಚಿರಪರಿಚಿತರಾಗಿದ್ದವರು. ಕೆಲ ತಿಂಗಳ ಹಿಂದಷ್ಟೇ ಎಂ. ಎಸ್‌. ಉಮೇಶ್ ಅವರು ತಮ್ಮ ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಉಮೇಶ್‌ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದ್ದ ವೈದ್ಯರು ರೋಗವನ್ನು ಖಚಿತಪಡಿಸಿಕೊಂಡು, ಕಿಮೊಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚಿಕಿತ್ಸೆ ಮುಂದುವರೆಸಿದ್ದರು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಿಸದೆ ಈಗ ಉಮೇಶ್ ಬಾರದ ಲೋಕಕ್ಕೆ ತೆರಳಿದ್ದಾರೆ.

ಆರು ದಶಕಗಳ ಬಣ್ಣದ ಲೋಕದ ನಂಟಿಗೆ ವಿದಾಯ…

1960ರ ದಶಕದಲ್ಲಿ ಬಣ್ಣದ ಲೋಕಕ್ಕೆ ಪರಿಚಯವಾದ ಎಂ. ಎಸ್‌. ಉಮೇಶ್ ತಮ್ಮ ಹಾಸ್ಯ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದ ನಟ. 1960ರ ದಶಕದಿಂದ ಇತ್ತೀಚಿನವರೆಗೂ ಎಂ. ಎಸ್‌. ಉಮೇಶ್‌ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಕೆಲ ತಿಂಗಳ ಹಿಂದಷ್ಟೇ ಎಂ. ಎಸ್‌. ಉಮೇಶ್‌ ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು. ನೂರಾರು ಥರದ ಹಾಸ್ಯ ಪಾತ್ರಗಳು ಮತ್ತು ಪೋಷಕ ಪಾತ್ರಗಳು ಎಂ. ಎಸ್‌. ಉಮೇಶ್‌ ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದವು.

350ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಉಮೇಶ್ ಅಭಿನಯ

350ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಉಮೇಶ್ ಅವರು ಅಭಿನಯಿಸಿದ್ದಾರೆ. 1945ರ ಏಪ್ರಿಲ್‌ 24ರಂದು ಮೈಸೂರಿನಲ್ಲಿ ಜನಿಸಿದ ಅವರು 1960ರಲ್ಲಿ ಬಿ. ಆರ್‌. ಪಂತಲು ನಿರ್ದೇಶನದ ‘ಮಕ್ಕಳ ರಾಜ್ಯ’ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಹಲವಾರು ಸಿನೆಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ‘ನಾಗರ ಹೊಳೆ’, ‘ಗುರು ಶಿಷ್ಯರು’, ‘ಅನುಪಮಾ’, ‘ಕಾಮನ ಬಿಲ್ಲು’, ‘ಅಪೂರ್ವ ಸಂಗಮ’, ‘ಶ್ರುತಿ ಸೇರಿದಾಗ’, ‘ಹಾಲು ಸಕ್ಕರೆ’, ‘ಗೋಲ್​ಮಾಲ್ ರಾಧಾಕೃಷ್ಣ’, ‘ಮಲಯ ಮಾರುತ’, ‘ಗಜಪತಿ ಗರ್ಭಭಂಗ’ ಮುಂತಾದವು ಉಮೇಶ್ ನಟನೆಯ ಪ್ರಮುಖ ಸಿನೆಮಾಗಳು.

Related Posts

error: Content is protected !!