ಬಾಲಯ್ಯ ‘ಅಖಂಡ 2’ ಸಿನೆಮಾ ರಿಲೀಸ್‌ಗೆ ಬ್ರೇಕ್!
‘ಅಖಂಡ 2’ ಚಿತ್ರ ನಿಗದಿತ ದಿನಕ್ಕೆ ಬಿಡುಗಡೆಯಾಗಲಿಲ್ಲ!
ನಂದಮೂರಿ ಬಾಲಕೃಷ್ಣ ನಟಿಸಿದ್ದ ‘ಅಖಂಡ 2’ ಚಿತ್ರ ತೆರೆ ಕಂಡಿಲ್ಲ…
‘ಅನಿವಾರ್ಯ ಕಾರಣ’ ನೀಡಿ ಬಿಡುಗಡೆ ಮುಂದೂಡಿದ ಚಿತ್ರತಂಡ
ಬೆಂಗಳೂರು, ಡಿ. 05; ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಖಂಡ 2′ ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ’ಅಖಂಡ 2’ ಚಿತ್ರದ ಬಿಡುಗಡೆ ರದ್ದಾಗಿದೆ. ಅನಿರೀಕ್ಷಿತವಾಗಿ ‘ಅಖಂಡ 2’ ಸಿನೆಮಾದ ಬಿಡುಗಡೆ ರದ್ದಾಗಿದ್ದರಿಂದ, ಮುಂಚಿತವಾಗಿಯೇ ‘ಅಖಂಡ 2’ ಸಿನೆಮಾ ನೋಡಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ‘ಅಖಂಡ 2’ ಚಿತ್ರದ ಪ್ರದರ್ಶನ ಹಠಾತ್ತಾಗಿ ರದ್ದಾಗಿದ್ದರಿಂದ, ನಂದಮುರಿ ಬಾಲಕೃಷ್ಣ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರತಂಡ, ವಿತರಕರು ಮತ್ತು ಪ್ರದರ್ಶಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಅಖಂಡ 2’ ಬಿಡುಗಡೆಯಾಗದಿರುವ ಬಗ್ಗೆ ನಿರ್ಮಾಪಕರು ಏನಂತಾರೆ..?
ಇನ್ನು ‘ಅಖಂಡ 2’ ಸಿನೆಮಾದ ಬಿಡುಗಡೆ ಕೊನೆಯ ಕ್ಷಣದಲ್ಲಿ ರದ್ದಾಗಲು ಕಾರಣ ಏನೆಂಬುದು ಇನ್ನೂ ಅಧಿಕೃತವಾಗಿ ಗೊತ್ತಾಗಿಲ್ಲ. ಆದರೆ ‘ಅಖಂಡ 2’ ಸಿನೆಮಾವನ್ನು ನಿರ್ಮಿಸಿದ್ದ ‘ ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ಮಾತ್ರ, ”ಅನಿವಾರ್ಯ’ ಕಾರಣದಿಂದ ‘ಅಖಂಡ 2′ ಸಿನೆಮಾದ ಬಿಡುಗಡೆ ರದ್ದಾಗಿದೆ’ ಎಂದಷ್ಟೇ ತಿಳಿಸಿದೆಯೇ ಹೊರತು, ಸಿನೆಮಾ ಬಿಡುಗಡೆ ರದ್ದಾದ ಬಗ್ಗೆ ನಿಖರ ಕಾರಣವನ್ನು ಮಾತ್ರ ತಿಳಿಸಿಲ್ಲ.
‘ಅಖಂಡ 2’ ಪ್ರದರ್ಶನ ಹಠಾತ್ ರದ್ದಾಗಲು ನಿಖರ ಕಾರಣವೇನು..?
‘ಅಖಂಡ 2’ ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಬಿಗ್ ಬಜೆಟ್ ಚಿತ್ರ. ನಟ ಬಾಲಕೃಷ್ಣ ಮಾತ್ರವಲ್ಲದೆ, ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳು ಕೂಡ ‘ಅಖಂಡ 2’ ಸಿನೆಮಾದ ಬಿಡುಗಡೆಯನ್ನು ಕಾತುರದಿಂದ ಎದುರು ನೋಡುತ್ತಿದ್ದರು.
ಇನ್ನು ತಮ್ಮ ನೆಚ್ಚಿನ ನಟನ ಸಿನೆಮಾವನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಮುಂಚಿತವಾಗಿಯೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಮಾಡಿಕೊಂಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ‘ಅಖಂಡ 2’ ಬಿಡುಗಡೆ ಆಗದಿರುವುದು ಸಹಜವಾಗಿಯೇ ತೆಲುಗು ಚಿತ್ರರಂಗದಲ್ಲಿ ತಲ್ಲಣಕ್ಕೆ ಕಾರಣವಾಗಿದೆ.
ಬಾಲಕೃಷ್ಣ ಅವರಂತಹ ಸೂಪರ್ ಸ್ಟಾರ್ ನಟರೊಬ್ಬರ ಸಿನೆಮಾಕ್ಕೆ ಇಂಥ ಪರಿಸ್ಥಿತಿ ಬಂದಿದ್ದು, ಅವರ ವೈಯಕ್ತಿಕ ವರ್ಚಸ್ಸಿಗೆ ಪೆಟ್ಟು ಬಿದ್ದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ‘ಅಖಂಡ 2’ ಚಿತ್ರದ ಬಿಡುಗಡೆಯಾಗದಿರುವುದಕ್ಕೆ ನಿರ್ಮಾಣ ಸಂಸ್ಥೆ ಮತ್ತು ವಿತರಕರೇ ನೇರ ಕಾರಣ ಎಂದು ಟಾಲಿವುಡ್‌ನ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ‘ಅಖಂಡ 2’ ಬಿಡುಗಡೆಯಾಗದಿರುವುದಕ್ಕೆ ಬೇರೆಯದ್ದೇ ಕಾರಣವಿದೆ ಎಂದೂ ಹೇಳಲಾಗುತ್ತಿದೆ.
‘ಅನಿವಾರ್ಯ’ ಕಾರಣದ ಹಿಂದಿನ ನಿಜವಾದ ಕಾರಣ… ಬೇರೆಯದ್ದೇ ಇದೆ!
‘ಅಖಂಡ 2′ ಸಿನೆಮಾವನ್ನು ತೆಲುಗಿನ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಹೆಸರಿನ ಸಂಸ್ಥೆ ನಿರ್ಮಾಣ ಮಾಡಿತ್ತು. ಕನ್ನಡದಲ್ಲಿ ಕೆಲ ವರ್ಷಗಳ ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿದ್ದ ‘ಪವರ್’ ಚಿತ್ರವನ್ನೂ ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು. ತೆಲುಗಿನಲ್ಲಿ ಹಲವು ಹಿಟ್ ಮತ್ತು ಫ್ಲಾಪ್ ಸಿನೆಮಾಗಳನ್ನು ಕೊಟ್ಟಿರುವ ಈ ಸಂಸ್ಥೆ, ಟಾಲಿವುಡ್ ಸಕ್ರಿಯ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಒಪ್ಪಂದ ಉಲ್ಲಂಘನೆಯ ಗಧಾಪ್ರಹಾರ?
ಇನ್ನು ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ 10 ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿದ್ದರ ಪ್ರಭಾವ ಈಗ ‘ಅಖಂಡ 2’ ಮೇಲೆ ಆಗಿದೆ ಎನ್ನಲಾಗುತ್ತಿದೆ. 2014 ರಲ್ಲಿ ತೆಲುಗಿನಲ್ಲಿ ಬಿಡುಗಡೆ ಆಗಿದ್ದ ಮಹೇಶ್ ಬಾಬು ನಟನೆಯ ‘ನೇನೊಕ್ಕಡಿನೆ’ ಮತ್ತು ‘ಆಗಡು’ ಸಿನೆಮಾಗಳನ್ನು ಇದೇ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ನಿರ್ಮಾಣ ಮಾಡಿತ್ತು.
ಆ ಎರಡೂ ಸಿನೆಮಾಗಳನ್ನೂ ‘ಎರೋಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ವಿತರಣೆ ಮಾಡಿತ್ತು. ಸಿನೆಮಾ ವಿತರಣೆ ಸಂಬಂಧ ಎರಡೂ ಸಂಸ್ಥೆಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಈ ಎರಡೂ ಸಿನೆಮಾಗಳು ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿದ್ದವು. ಎರಡು ಸಿನೆಮಾಗಳು ಫ್ಲಾಫ್ ಆಗುತ್ತಿದ್ದಂತೆ, ‘ಎರೋಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ’14 ರೀಲ್ ಪ್ಲಸ್ ಎಂಟರ್‌ಟೈನ್ಮೆಂಟ್’ ಮುರಿದುಕೊಂಡಿತ್ತು.
ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ
ಬಳಿಕ ಈ ವಿಷಯದ ಬಗ್ಗೆ ತಕರಾರು ತೆಗೆದಿದ್ದ ‘ಎರೋಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. 2019ರಲ್ಲಿ ಈ ಪ್ರಕರಣದ ಕುರಿತು ತೀರ್ಪು ಕೂಡ ಹೊರಬಿದ್ದಿದ್ದು, ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ಬಡ್ಡಿ ಸಮೇತ 11 ಕೋಟಿ ರೂಪಾಯಿ ಹಣವನ್ನು ‘ಎರೋಸ್ ಎಂಟರ್ಟೈನ್ಮೆಂಟ್’ ಸಂಸ್ಥೆಗೆ ನೀಡಬೇಕು ಹಾಗೂ ‘ನೇನೊಕ್ಕಿಡಿನೆ’ ಮತ್ತು ‘ಆಗಡು’ ಸಿನೆಮಾದ ಎಲ್ಲ ಹಕ್ಕುಗಳನ್ನು ‘ಎರೋಸ್ ಎಂಟರ್ಟೈನ್ಮೆಂಟ್’ ಸಂಸ್ಥೆಗೆ ನೀಡಬೇಕು ಎಂಬ ಆದೇಶ ನ್ಯಾಯಾಲಯ ನೀಡಿತ್ತು. ಬಳಿಕ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ಈ ಆದೇಶದ ವಿರುದ್ದ ಮದ್ರಾಸ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತಾದರೂ, ಮದ್ರಾಸ್ ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ಇದೇ ಆದೇಶವನ್ನು ಎತ್ತಿ ಹಿಡಿದಿತ್ತು. ಅದಾದ ನಂತರ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ 2021 ರಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತಾದರೂ, ಅಲ್ಲೂ ಕೂಡ ಇದೇ ತೀರ್ಪು ಹೊರಬಿದ್ದಿತ್ತು. ಹೀಗಾಗಿ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ಅನಿವಾರ್ಯವಾಗಿ ಬಾಕಿ ಮೊತ್ತ ತೀರಿಸಬೇಕಾದ ಪರಿಸ್ಥಿತಿ ಬಂದಿತ್ತಲ್ಲದೆ, ಬಾಕಿ ಮೊತ್ತ ತೀರುವ ವರೆಗೆ ಹೊಸ ಸಿನೆಮಾ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎಂಬ ನ್ಯಾಯಾಲಯದ ನಿರ್ದೇಶನವನ್ನೂ ಪಾಲಿಸಬೇಕಾಗಿತ್ತು.
ಬೇರೆ ಹೆಸರಿನಲ್ಲಿ ‘ಅಖಂಡ 2′ ಬಿಡುಗಡೆಗೆ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಪ್ಲಾನ್!?
ಇಷ್ಟೆಲ್ಲ ನಡೆದಿದ್ದರೂ, ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ಮಾತ್ರ ಬಾಕಿ ತೀರಿಸುವ ಗೋಜಿಗೆ ಹೋಗಿರಲಿಲ್ಲ. ಸದ್ಯ ಬಡ್ಡಿ ಮೊತ್ತವೆಲ್ಲ ಸೇರಿಸಿ, ಬರೋಬ್ಬರಿ 28 ಕೋಟಿ ರೂಪಾಯಿಗಳನ್ನು ‘ಎರೋಸ್ ಎಂಟರ್ಟೈನ್ಮೆಂಟ್’ ಸಂಸ್ಥೆಗೆ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ಪಾವತಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ’14 ರೀಲ್ಸ್ ಪಿಪಿಎಲ್’ ಹೆಸರಿನ ಮತ್ತೊಂದು ಸಂಸ್ಥೆಯ ಅಡಿಯಲ್ಲಿ ‘ಅಖಂಡ 2′ ಸಿನೆಮಾವನ್ನು ನಿರ್ಮಿಸಿದ್ದ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆ, ಬೇರೊಂದು ಹೆಸರಿನಲ್ಲಿ ಸಿನೆಮಾ ಬಿಡುಗಡೆಗೆ ತಯಾರಾಗಿತ್ತು. ಇದನ್ನು ಮನಗಂಡ ‘ಎರೋಸ್ ಎಂಟರ್‌ಟೈನ್ಮೆಂಟ್’, ಇದೇ ಆಗಸ್ಟ್ ತಿಂಗಳಲ್ಲಿಯೇ ’14 ರೀಲ್ ಪ್ಲಸ್ ಎಂಟರ್ಟೈನ್ಮೆಂಟ್’ ಸಂಸ್ಥೆಗೆ ನೋಟೀಸ್ ನೀಡಿತ್ತು. ಬಾಕಿ ಮೊತ್ತ ಪಾವತಿ ಬಗ್ಗೆ ಮದ್ರಾಸ್ ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ‘ಅಖಂಡ 2’ ಸಿನೆಮಾದ ಬಿಡುಗಡೆಗೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ ಡಿವಿಷನ್ ಬೆಂಚ್, ಭಿನ್ನ ನಿಲುವು ತಳೆದು, ಈ ಪ್ರಕರಣವನ್ನು ಮತ್ತೆ ಪರಿಪೂರ್ಣವಾಗಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದಲ್ಲದೆ, ಆ ವರೆಗೆ ‘ಅಖಂಡ 2’ ಸಿನೆಮಾವನ್ನು ಬಿಡುಗಡೆ ಮಾಡದಂತೆ ತಡೆಯುವಂತೆ ಆದೇಶ ನೀಡಿತು. ಅದೇ ಕಾರಣಕ್ಕೆ ಈಗ ‘ಅಖಂಡ 2’ ಸಿನೆಮಾ ಬಿಡುಗಡೆ ಕೊನೆಕ್ಷಣದಲ್ಲಿ ರದ್ದಾಗಿದೆ ಎಂಬುದು ಚಿತ್ರರಂಗದ ಮೂಲಗಳ ಮಾಹಿತಿ.
ಸದ್ಯಕ್ಕೆ ‘ಅಖಂಡ 2’ ಬಿಡುಗಡೆ ಅನುಮಾನ!
ಸದ್ಯದ ಪರಿಸ್ಥಿತಿ ಗಮನಿಸಿದರೆ, ‘ಎರೋಸ್’ ಮತ್ತು ’14 ರೀಲ್ಸ್’ ನಡುವಿನ ಹಣಕಾಸು ವಿವಾದ ಸಂಪೂರ್ಣವಾಗಿ ವಿಚಾರಣೆಗೆ ಒಳಪಡದ ಹೊರತು, ‘ಅಖಂಡ 2’ ಸಿನೆಮಾದ ಬಿಡುಗಡೆ ಆಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಹಾಗಾಗಿ 2025ರಲ್ಲಿ ನಂದಮುರಿ ಬಾಲಕೃಷ್ಣ ಅಭಿನಯಿಸಿರುವ ‘ಅಖಂಡ 2′ ಸಿನೆಮಾಕ್ಕೆ ಬಿಡುಗಡೆ ಭಾಗ್ಯವಿಲ್ಲ. ಒಂದೊಮ್ಮೆ ’14 ರೀಲ್ಸ್’ ಸಂಸ್ಥೆ ಹಳೆಯ ಬಾಕಿಯನ್ನು ಚುಕ್ತಾ ಮಾಡಿದ್ದರೂ ಕೂಡ, ಸದ್ಯದ ಪರಿಸ್ಥಿತಿ ನೋಡಿದರೆ ಮುಂದಿನ ವರ್ಷ 2026ರ ಏಪ್ರಿಲ್ ನಂತರವಷ್ಟೇ ‘ಅಖಂಡ 2’ ತೆರೆಗೆ ಬರೋದು ಎನ್ನಲಾಗುತ್ತಿದೆ.















