‘ಜೆರಾಕ್ಸ್’ ವೆಬ್ ಸರಣಿ ಮೇಲೆ ಡಾಲಿ ಧನಂಜಯ್ ನಿರೀಕ್ಷೆ
ಡಾಲಿ ಚೊಚ್ಚಲ ನಿರ್ಮಾಣದ ‘ಜೆರಾಕ್ಸ್’ ವೆಬ್ ಸಿರೀಸ್
ಇದೇ 2026ರ ಏಪ್ರಿಲ್ 24ಕ್ಕೆ ‘ಜೆರಾಕ್ಸ್’ ವೆಬ್ ಸರಣಿಯ ಸ್ಟ್ರೀಮಿಂಗ್
‘ಜೆರಾಕ್ಸ್’ ವೆಬ್ ಸರಣಿ ರಿಲೀಸಿಗೂ ಮುನ್ನ ಡಾಲಿ ಮಾತು
ನಟ ಕಂ ನಿರ್ಮಾಪಕ ಡಾಲಿ ಧನಂಜಯ್ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ನಡಿ ನಿರ್ಮಿಸಿರುವ ‘ಜೆರಾಕ್ಸ್’ ವೆಬ್ ಸರಣಿ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ 2026ರ ಏಪ್ರಿಲ್ 24ರಿಂದ Zee5 ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ‘ಜೆರಾಕ್ಸ್’ ವೆಬ್ ಸರಣಿ ಸ್ಟ್ರೀಮಿಂಗ್ ಆಗುತ್ತಿದೆ. 
ಇನ್ನು ‘ಜೆರಾಕ್ಸ್’ ವೆಬ್ ಸರಣಿಯ ಬಿಡುಗಡೆಗೂ ಮುನ್ನ ಮಾತನಾಡಿರುವ ‘ಜೆರಾಕ್ಸ್’ ವೆಬ್ ಸರಣಿಯ ನಿರ್ಮಾಪಕ ಡಾಲಿ ಧನಂಜಯ, ‘ನಿಜವಾಗಿಯೂ ಈ ‘ಜೆರಾಕ್ಸ್’ ವೆಬ್ ಸಿರೀಸ್ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಈ ಸಿರೀಸ್ ನಲ್ಲಿ ಒಳ್ಳೊಳ್ಳೆ ಕಲಾವಿದರ ದಂಡು ಕೆಲಸ ಮಾಡಿದೆ. ಹೊಸ ಪ್ರತಿಭೆಗಳಿಂದ ಹಿಡಿದು ಅನುಭವಿ ಪ್ರತಿಭೆಗಳು ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಿರೀಸ್ ಮೊದಲು ನೋಡಿದಾಗ ಬಹಳ ಖುಷಿಯಾಯ್ತು. ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ. ಬಹಳ ಖುಷಿಯಿಂದ ಈ ‘ಜೆರಾಕ್ಸ್’ ವೆಬ್ ಸರಣಿಯನ್ನು ವೀಕ್ಷಕರ ಮುಂದೆ ಪ್ರೆಸೆಂಟ್ ಮಾಡುತ್ತಿದ್ದೇವೆ. ‘Zee5’ನಿಂದ ಒಳ್ಳೊಳ್ಳೆ ಪ್ರತಿಭೆಗಳಿಗೆ ಫ್ಲಾಟ್ ಫಾರ್ಮ್ ಸಿಗ್ತಿದೆ. ಇದು ಮತ್ತಷ್ಟು ದೊಡ್ಡದಾಗಲಿ’ ಎಂದಿದ್ದಾರೆ.
ಮತ್ತೆ ವೆಬ್ ಸರಣಿಯಲ್ಲಿ ನಟಿಸಿದ ಖುಷಿಯಲ್ಲಿ ನಾಗಭೂಷಣ್…
‘ಜೆರಾಕ್ಸ್’ ವೆಬ್ ಸರಣಿಯ ಬಗ್ಗೆ ಮಾತನಾಡಿದ ನಟ ನಾಗಭೂಷಣ್, ‘ವೆಬ್ ಸಿರೀಸ್ ಫ್ಲಾಟ್ ಫಾರ್ಮ್ ನನಗೆ ಹೊಸದೇನು ಅಲ್ಲ. ‘ಹನಿಮೂನ್’ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದೆ. ಅದರ ನಿರ್ಮಾತೃ ಆರ್. ಜೆ. ಪ್ರದೀಪ್. ಇಷ್ಟು ವರ್ಷ ಆದ್ಮೇಲೆ ಮತ್ತೆ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದೇನೆ.
ಕನ್ನಡದಲ್ಲಿ ಸಿನೆಮಾಗಳನ್ನು ತೆಗೆದುಕೊಳ್ಳಲು ಬಹಳಷ್ಟು ಓಟಿಟಿಗಳು ಹಿಂದೇಟು ಹಾಕುತ್ತಿದ್ದಾರೆ. ಅವ್ರು ಅದಕ್ಕೆ ಕೊಡುವ ಉತ್ತರ ಕನ್ನಡದಲ್ಲಿ ವೀಕ್ಷಕರ ಸಂಖ್ಯೆ ಕಡಿಮೆ ಎಂದು. ಆದರೆ ಇಂತಹ ಸಮಯದಲ್ಲಿ ಕನ್ನಡದಲ್ಲಿ ವೀವರ್ಸ್ ಇದ್ದಾರೆ ಅನ್ನೋದನ್ನು ‘Zee5’ ತೋರಿಸಿಕೊಟ್ಟಿದೆ. ‘ಜೆರಾಕ್ಸ್’ ವೆಬ್ ಸರಣಿಯಲ್ಲಿ ನನ್ನದು ಪ್ರಕಾಶ್ ಪಾತ್ರ. ಶ್ರೀನಿಧಿ ಅದ್ಭುತ ಟೆಕ್ನಿಷಿಯನ್. ಒಳ್ಳೆ ಕಥೆಗಾರ. ಸೋಲು ಗೆಲುವು ತಲೆಕೆಡಿಸಿಕೊಳ್ಳದೆ ಕಂಟಿನ್ಯೂ ಆಗಿ ಧನಂಜಯ್ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಅದ್ಭುತ ಪ್ರಾಡಕ್ಟ್ ಹೊರತರಲು ಸಹಕರಿಸಿದ ನನ್ನ ಇಡೀ ತಂಡಕ್ಕೆ ಧನ್ಯವಾದ’ ಎಂದಿದ್ದಾರೆ.
ಥ್ರಿಲ್ಲರ್ ಸರಣಿಯನ್ನು ‘ಜೆರಾಕ್ಸ್’ ಬ್ರೇಕ್ ಮಾಡಲಿದೆಯಂತೆ..!
ವೆಬ್ ಸರಣಿಯ ಮುಖ್ಯಸ್ಥ ಆರ್. ಜೆ. ಪ್ರದೀಪ್ ಮಾತನಾಡಿ, ‘ಕರ್ನಾಟಕದ ಬೇರೆ ಭಾಗಗಳನ್ನು ಹೇಗೆ ಪ್ರತಿನಿಧಿಸುತ್ತೇವೆ ಎನ್ನುವುದು ‘Zee5’ ಕನ್ನಡದ ಉದ್ದೇಶವಾಗಿತ್ತು. ‘ಅಯ್ಯನ ಮನೆ’ ಮೂಲಕ ನಮ್ಮ ವೆಬ್ ಸಿರೀಸ್ ಜರ್ನಿ ಶುರುವಾಯ್ತು.
ಬಳಿಕ ‘ಮಾರಿಗಲ್ಲು’, ‘ಶೋಧ’ ನಂತರ ‘ರಾಕ್ಷಸ’ ವೆಬ್ ಸಿರೀಸ್ ಮಾಡಿದೆವು. ಎಲ್ಲವೂ ಥ್ರಿಲ್ಲರ್ ವೆಬ್ ಸೀರೀಸ್ ಆಯ್ತು. ಅದನ್ನು ಬ್ರೇಕ್ ಮಾಡಬೇಕು ಎಂದುಕೊಂಡಾಗ ಸಿಕ್ಕಿದ್ದು ಶ್ರೀನಿಧಿಯವರು. ಅವ್ರು ಬಂದು ಕಥೆ ಹೇಳಿದರು. ಅದ್ರಲ್ಲಿ ‘ಜೆರಾಕ್ಸ್’ ಮಿಷನ್ ಮನುಷ್ಯನನ್ನು ಡುಪ್ಲಿಕೇಟ್ ಮಾಡಿದಾಗ ಏನಾಗುತ್ತದೆ ಎಂಬ ಲೈನ್ ಬಹಳ ಇಷ್ಟವಾಯ್ತು. ನಮ್ ಟೀಂ, ಅವ್ರ ಟೀಂ ಕಥೆ ಮಾಡಿಕೊಂಡೆವು. ಬಳಿಕ ಧನಂಜಯ್ ಅವ್ರನ್ನು ಅಪ್ರೋಚ್ ಮಾಡಿದೆವು. ಅವ್ರು ಕಥೆ ಕೇಳಿ, ‘ಸಖತ್ ಆಗಿದೆ ಸಿನೆಮಾ ಮಾಡೋಣಾ’ ಎಂದರು. ಒಳ್ಳೆ ಕಥೆ, ಒಳ್ಳೆ ಟೀಂ ಸೇರಿಸುವ ಪ್ರಯತ್ನ ಇದು. ಈ ಜರ್ನಿ ಹೀಗೆ ಮುಂದುವರೆಯಲಿದೆ. ‘ಜೆರಾಕ್ಸ್’ ಒಂದು ವಿಭಿನ್ನ ಪ್ರಯತ್ನ. ಎಪಿಸೋಡ್ ನೋಡಿ ಲಾಜಿಕ್ ಹುಡುಕಬೇಡಿ. ಇದೊಂದು ಸೈಫೈ ಸಿಗ್ಮೆಂಟ್. ನೋಡುಗರಿಗೆ ಇಷ್ಟವಾಗಲಿದೆ ಎಂಬ ನಂಬಿಕೆಯಿದೆ’ ಎಂದರು.
‘ಬ್ಲಿಂಕ್’ ಸಿನೆಮಾ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್- ಕಟ್ ಹೇಳಿರುವ ‘ಜೆರಾಕ್ಸ್’ ವೆಬ್ ಸರಣಿಯಲ್ಲಿ ನಟರಾದ ನಾಗಭೂಷಣ್, ಪಾಯಲ್ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಮಂಜು ಪಾವಗಡ, ಓಂ ಪ್ರಕಾಶ್ ರಾವ್, ಶ್ರೀವತ್ಸ, ಯಶ್ವಂತ್ ಶೆಟ್ಟಿ, ವಿಜಯ್ ಪ್ರಸಾದ್, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್ ಗೌಡ ಮುಂತಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪಿ-ತಪ್ಪಿ ‘ಜೆರಾಕ್ಸ್’ ಕಾಪಿಗಳಿಗೆ ಜೀವ ಬಂದುಬಿಟ್ಟರೆ ಏನಾಗುತ್ತೆ? ಎಂಬ ಎಳೆಯನ್ನೇ ಇಟ್ಟುಕೊಂಡು ತಯಾರಾಗಿರುವ ಹಾಸ್ಯಭರಿತ ವೆಬ್ ಸೀರೀಸ್ ‘ಜೆರಾಕ್ಸ್’. ಡಾರ್ಕ್ ಕಾಮಿಡಿ, ಥ್ರಿಲ್ಲರ್, ಫ್ಯಾಂಟಸಿ ಅಂಶಗಳನ್ನ ಒಳಗೊಂಡಿದೆ. ಒಟ್ಟಾರೆ ‘Zee5’ನಲ್ಲಿ ಇದೇ ಏಪ್ರಿಲ್ 24ರಿಂದ ಈ ವೆಬ್ ಸರಣಿಯು ಪ್ರೇಕ್ಷಕರ ಮುಂದೆ ಬರುತ್ತಿದ್ದು, ‘ಜೆರಾಕ್ಸ್’ ಎಷ್ಟರ ಮಟ್ಟಿಗೆ ನೋಡುಗರ ಮನ ಗೆಲ್ಲಲಿದೆ ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ.















