Straight Talk

ರಚಿತಾ ರಾಮ್ ಬಣ್ಣದ ಬದುಕಿಗೆ 14 ವರ್ಷ!

‘ಡಿಂಪಲ್ ಕ್ವೀನ್’ ರಚಿತಾ ಸಿನಿಯಾನಕ್ಕೆ 14 ವರ್ಷದ ಸಂಭ್ರಮ

‘ಬುಲ್ ಬುಲ್’ ಬೆಡಗಿಗೆ ಸಿನಿಪ್ರಿಯರು, ಅಭಿಮಾನಿಗಳಿಂದ ಶುಭ ಹಾರೈಕೆ…

ಕಿರುತೆರೆಯಿಂದ ಹಿರಿತೆರೆಗೆ ಯಶಸ್ವಿಯಾಗಿ ಸಾಗಿಬಂದ ಪಯಣ

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನೆಮಾಗಳು ತೆರೆ ಕಾಣುತ್ತವೆ. ಈ ಸಿನೆಮಾಗಳ ಮೂಲಕ ನೂರಾರು ಹೊಸ ಕಲಾವಿದೆಯರು ನಾಯಕ ನಟಿಯರಾಗಿ ಚಿತ್ರರಂಗಕ್ಕೆ ಪ್ರವೇಶವಾಗುತ್ತಲೇ ಇರುತ್ತಾರೆ. ಹೀಗೆ ಚಿತ್ರರಂಗಕ್ಕೆ ಅಡಿಯಿಟ್ಟ ಕೆಲವೇ ಕೆಲವು ಬೆರಳೆಣಿಕೆಯಷ್ಟು ನಾಯಕ ನಟಿಯರು ಮಾತ್ರ ಇಲ್ಲಿ ಬಹುಕಾಲ ಉಳಿಯುತ್ತಾರೆ. ಸಿನಿಪ್ರಿಯರ ಮನ-ಗಮನ ಎರಡನ್ನೂ ಸೆಳೆಯಲು ಯಶಸ್ವಿಯಾಗುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕದಿಂದ ತನ್ನದೇ ಆದ ಛಾರ್ಮ್‌ ಉಳಿಸಿಕೊಂಡು ಬಂದಿರುವ ಅಂತಹ ಕೆಲವೇ ಕೆಲವು ಬೆರಳೆಣಿಕೆಯಷ್ಟು ನಾಯಕ ನಟಿಯರ ಪೈಕಿ ರಚಿತಾ ರಾಮ್‌ ಕೂಡ ಒಬ್ಬರು. ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರಿಗೆ ಬೇಡಿಕೆ ಕಡಿಮೆ, ನಾಯಕ ನಟಿಯರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಾಲ ತಮ್ಮ ಸ್ಟಾರ್‌ಡಮ್‌ ಉಳಿಸಿಕೊಂಡು ಇರೋದು ಕಷ್ಟ, ಕನ್ನಡ ಚಿತ್ರರಂಗದಲ್ಲಿ ಕನ್ನಡದ ನಾಯಕ ನಟಿಯರಿಗೆ ಮನ್ನಣೆ ಕಡಿಮೆ.., ಎಂಬ ಹತ್ತಾರು ಅಪವಾದದ ಮಾತುಗಳ ನಡುವೆಯೂ, ರಚಿತಾ ರಾಮ್‌ ಅದೆಲ್ಲವನ್ನೂ ಸುಳ್ಳಾಗಿಸಿಕೊಂಡು, ಬಣ್ಣದ ಲೋಕದಲ್ಲಿ ಮುನ್ನಡೆಯುತ್ತಿರುವ ನಟಿ. ಹಾಗಾಗಿ, ರಚಿತಾ ರಾಮ್‌ ಇತ್ತೀಚಿನ ತಲೆಮಾರಿನ ನಾಯಕ ನಟಿಯರ ಸಾಲಿನಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡು ನಿಲ್ಲುತ್ತಾರೆ.

ದಶಕ ಕಳೆದರೂ ಕಡಿಮೆಯಾಗದ ರಚ್ಚು ಎಂಬ ‘ಗುಳಿಕೆನ್ನೆ ಹುಡುಗಿ’ ಕ್ರೇಜ್‌!

ಅಂದಹಾಗೆ, ನಟಿ ರಚಿತಾ ರಾಮ್‌ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿ ಇದೇ 2026ರ ಮೇ ತಿಂಗಳಿಗೆ ಬರೋಬ್ಬರಿ 14 ವರ್ಷವಾಗುತ್ತದೆ. ‘ಬುಲ್‌ ಬುಲ್‌’ ಸಿನೆಮಾದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೆ ಕಾಲಿಟ್ಟು 14 ವರ್ಷವಾದರೂ, ರಚಿತಾ ರಾಮ್‌ ಅವರಿಗೆ ಚಿತ್ರರಂಗದಲ್ಲಿ ಕಿಂಚಿತ್ತೂ ಬೇಡಿಕೆ ಕಡಿಮೆಯಾಗಿಲ್ಲ ಎಂಬುದು ವಿಶೇಷ. ಇಂದಿಗೂ ಅದೇ ಚಾರ್ಮ್, ಅದೇ ಗ್ಲಾಮರ್ , ಅದೇ ಡಿಮ್ಯಾಂಡ್ ಉಳಿಸಿಕೊಂಡಿರುವ ಕೆಲವೇ ಕೆಲವು ನಾಯಕ ನಟಿಯರ ಪೈಕಿ ರಚಿತಾ ರಾಮ್‌ ಕೂಡ ಒಬ್ಬರು ಎಂಬುದನ್ನು ಇಡೀ ಚಿತ್ರರಂಗವೇ ಒಪ್ಪಿಕೊಳ್ಳುತ್ತದೆ.

ಸ್ಯಾಂಡಲ್‌ವುಡ್‌ನಲ್ಲಿ ವರ್ಷಕ್ಕೆ ನೂರಾರು ನಾಯಕ ನಟಿಯರು ಬರುತ್ತಾರೆ, ಹೋಗುತ್ತಾರೆ. ಆದ್ರೆ ದಶಕ ಕಳೆದರೂ ಅದೇ ಕ್ರೇಜ್, ಅದೇ ಸೌಂದರ್ಯ ಮತ್ತು ಅದೇ ‘ಡಿಂಪಲ್’ ಜಾದೂ ಉಳಿಸಿಕೊಂಡಿರುವ ನಟಿ ಎಂದರೆ ಅದು ‘ಬುಲ್ ಬುಲ್’ ಬ್ಯೂಟಿ ರಚಿತಾ ರಾಮ್ ಮಾತ್ರ ಎಂಬುದು ಅವರ ಅಪ್ಪಟ ಅಭಿಮಾನಿಗಳ ಅಂತರಾಳದ ಮಾತು.

ರಚಿತಾ ಈ ತಲೆಮಾರಿನ ಸ್ಯಾಂಡಲ್‌ವುಡ್‌ನ ‘ಅರಸಿ’…

ಬಹುತೇಕರಿಗೆ ಗೊತ್ತಿರುವಂತೆ, ನಟಿ ರಚಿತಾ ರಾಮ್ ಕಿರುತೆರೆಯ ‘ಅರಸಿ’ ಸೀರಿಯಲ್ ಮೂಲಕ ಬಂದ ಕನ್ನಡದ ಜನತೆಗೆ ಪರಿಚಯವಾದ ನಟಿ. ಕಿರುತೆರೆಯಲ್ಲಿ ವಿಂದ್ಯಾ ರಾಮ್ ಎಂಬ ಹೆಸರಿನ ನಟಿಯಾಗಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಈ ‘ಗುಳಿಕೆನ್ನೆ ಹುಡುಗಿ’ ನಂತರ ರಚಿತಾ ರಾಮ್ ಆಗಿ ಬದಲಾಗೋಕೆ ಕಾರಣವಾಗಿದ್ದು ‘ಬುಲ್ ಬುಲ್’ ಸಿನೆಮಾ. ತಮ್ಮ ಮೊದಲ ಸಿನೆಮಾದಲ್ಲೇ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್ ಜೊತೆಗೆ‌ ‘ಬುಲ್‌ ಬುಲ್‌’ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದ ವಿಂದ್ಯಾ ರಾಮ್‌ ಉರೂಫ್‌ ರಚಿತಾ ರಾಮ್‌, ಇಡೀ ಗಾಂಧಿನಗರದ ಹುಬ್ಬೇರುವಂತೆ ಮಾಡಿದ್ದರು.

ಮೊದಲ ಸಿನೆಮಾದಲ್ಲೇ, ತಮ್ಮ ಅಭಿನಯದ ಮೂಲಕ ಹಿರಿತೆರೆ ಪ್ರೇಕ್ಷಕರ ಗಮನವನ್ನೂ ಸೆಳೆಯಲು ಯಶಸ್ವಿಯಾದ ರಚಿತಾ ರಾಮ್‌, ಆ ನಂತರ ಕನ್ನಡ ಚಿತ್ರರಂಗದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ‘ಬುಲ್‌ ಬುಲ್‌’ ಸಿನೆಮಾದ ಸೂಪರ್‌ ಹಿಟ್‌ ಸಕ್ಸಸ್‌ ರಚಿತಾ ರಾಮ್‌ ಎಂಬ ಕನ್ನಡದ ಹುಡುಗಿಯನ್ನ ಮುಂದೆ ಸ್ಯಾಂಡಲ್ ವುಡ್ ನ ನಂ. 1 ನಟಿಯಾಗಿ ‘ಬುಲ್ ಬುಲ್’ ಅಂತಲೇ ಗುರುತಿಸುವಂತೆ ಮಾಡಿತು.

ಸ್ಟಾರ್ ಹೀರೋಗಳ ಫೇವರೆಟ್‌ ಹೀರೋಯಿನ್‌…

‘ಬುಲ್‌ ಬುಲ್‌’ ಸಿನೆಮಾದಲ್ಲಿ ನಾಯಕ ನಟ ದರ್ಶನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡ ರಚಿತಾ ರಾಮ್‌, ಆನಂತರ ಕನ್ನಡದ ಸ್ಟಾರ್‌ ನಾಯಕ ನಟರಾದ ‘ಪವರ್‌ಸ್ಟಾರ್‌’ ಪುನೀತ್‌ ರಾಜಕುಮಾರ್‌,  ‘ಕಿಚ್ಚ’ ಸುದೀಪ್, ‘ಹ್ಯಾಟ್ರಿಕ್‌ ಹೀರೋ’ ಶಿವರಾಜ್ ಕುಮಾರ್, ‘ರೋರಿಂಗ್‌ ಸ್ಟಾರ್’‌ ಶ್ರೀಮುರಳಿ, ರಮೇಶ್ ಅರವಿಂದ್, ‘ಆಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ, ಶ್ರೀನಗರ ಕಿಟ್ಟಿ ‌ಹೀಗೆ ಎಲ್ಲ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡರು. ಕನ್ನಡ ಮಾತ್ರವಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಲೈವಾ ಸೂಪರ್ ಸ್ಟಾರ್ ರಜಿನಿ ಜೊತೆಗೆ ‘ಕೂಲಿ’ ಸಿನೆಮಾದಲ್ಲಿಯು ವಿಶೇಷ ಪಾತ್ರದಲ್ಲಿ ನಟಿಸಿದ್ದ ರಚಿತಾ ರಾಮ್‌ ತಮಿಳು ಸಿನಿಮಂದಿಯ ಗಮನವನ್ನೂ ಸೆಳೆದಿದ್ದರು.

ಬ್ಯಾಕ್‌ ಟು ಬ್ಯಾಕ್‌ ಸಿನೆಮಾಗಳಲ್ಲಿ ಬಿಝಿ!

ಸದ್ಯ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರಿಂದ ‘ಡಿಂಪಲ್‌ ಕ್ವೀನ್‌’ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಮತ್ತೊಂದೆಡೆ, ರಚಿತಾ ರಾಮ್ ಬ್ಯಾಕ್‌ ಟು ಬ್ಯಾಕ್‌ ಸಿನೆಮಾಗಳಲ್ಲಿ ಬಿಝಿಯಾಗಿದ್ದು, ಒಂದರ ಹಿಂದೊಂದು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ರಚಿತಾ ರಾಮ್‌ ಸದ್ಯ ಧ್ರುವ ಜೊತೆ ‘ಕ್ರಿಮಿನಲ್’, ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ಸಿನೆಮಾಗಳಲ್ಲಿ ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲಿ ರಚಿತಾ ರಾಮ್‌ ಅಭಿನಯಿಸುತ್ತಿರುವ ಎರಡು ಸಿನೆಮಾಗಳು ಶೀಘ್ರದಲ್ಲಿಯೇ ಅನೌನ್ಸ್ ಆಗುವ ಸಾಧ್ಯತೆಯಿದೆ.

Related Posts

error: Content is protected !!