‘ಮೋಡ ಕವಿದ ವಾತಾವರಣ’ದಲ್ಲಿ ಸೆನ್ಸಾರ್ ಪಾಸ್…
‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಸೆನ್ಸಾರ್ ಅಸ್ತು
ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಸೆನ್ಸಾರ್ ನಿಂದ ‘ಯು/ಎ’ ಪ್ರಮಾಣಪತ್ರ
ಇದೇ 2026 ಜೂ. 26ಕ್ಕೆ ‘ಮೋಡ ಕವಿದ ವಾತಾವರಣ’ ತೆರೆಗೆ
ನಿರ್ದೇಶಕ ಸಿಂಪಲ್ ಸುನಿ ಸದ್ದಿಲ್ಲದೆ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ‘ಮೋಡ ಕವಿದ ವಾತಾವರಣ’ ಸಿನೆಮಾಕ್ಕೆ ಸೆನ್ಸಾರ್ ನಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹೌದು, ಈಗಾಗಲೇ ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕ ಗಾಂಧಿನಗರದಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ಮೋಡ ಕವಿದ ವಾತಾವರಣ’ ಸಿನೆಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್, ಮ್ಯಾಟ್ಸ್ ಇಲ್ಲದೆ ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ.
ಯುವ ಪ್ರತಿಭೆ ಶೀಲಮ್ ಹೀರೋ…
‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ನಿರ್ದೇಶಕ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಆಕ್ಷನ್- ಕಟ್ ಹೇಳಿದ್ದಾರೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಈ ಸಿನೆಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಶೀಲಮ್ ಅವರು ಈ ಹಿಂದೆ ಹಲವು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಹದಿಹರೆಯದ ನಯೀ ಕಹಾನಿ!
ಅಂದಹಾಗೆ, ‘ಮೋಡ ಕವಿದ ವಾತಾವರಣ’ ಹದಿಹರೆಯದ gen -G ಲವ್ ಸ್ಟೋರಿ ಹೊಂದಿರುವ ಸಿನೆಮಾ ಎಂಬುದು ಚಿತ್ರತಂಡದ ಮಾತು. ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ನಾಯಕ ನಟ ಶೀಲಮ್ ಅವರಿಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಈ ಹಿಂದೆ ಕನ್ನಡದಲ್ಲಿ ‘ಒಂದು ಸರಳ ಪ್ರೇಮಕಥೆ’ ಚಿತ್ರವನ್ನು ನಿರ್ಮಾಣ ಮಾಡಿದ್ದ ‘ರಾಮ್ ಮೂವೀಸ್’ ಬ್ಯಾನರ್ ಈ ಸಿನೆಮಾವನ್ನು ನಿರ್ಮಾಣ ಮಾಡಿದೆ.
ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜಂಟಿಯಾಗಿ ‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
ಮಾನ್ಸೂನ್ ವೇಳೆಗೆ ಥಿಯೇಟರಿನಲ್ಲಿ’ಮೋಡ ಕವಿದ ವಾತಾವರಣ’
‘ಮೋಡ ಕವಿದ ವಾತಾವರಣ’ ಸಿನೆಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಆದಿತ್ಯ ಕಶ್ಯಪ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಈಗಾಗಲೇ ಒಂದಷ್ಟು ನಿರೀಕ್ಷೆ ಮೂಡಿಸಲು ಯಸಸ್ವಿಯಾಗಿರುವ ‘ಮೋಡ ಕವಿದ ವಾತಾವರಣ’ ಥಿಯೇಟರಿನಲ್ಲಿ ಹೇಗಿರಲಿದೆ? ಎಂಬುದು ಇದೇ 2026ರ ಜೂನ್ 26ರಂದು ಗೊತ್ತಾಗಲಿದೆ.















