‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಟೀಸರ್ ವೈರಲ್…!
‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಟೀಸರ್‌ಗೆ ಮೆಚ್ಚುಗೆ
ಸೋಶಿಯಲ್ ಮೀಡಿಯಾಗಳಲ್ಲಿ ‘Congratulations ಬ್ರದರ್’ ಚಿತ್ರದ ಟೀಸರ್ ವೈರಲ್…
ವಿಭಿನ್ನ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆದ ಚಿತ್ರ
ಕೆಲ ವರ್ಷಗಳ ಹಿಂದೆ ಕರ್ನಾಟಕದ ರಾಜಕಾರಣಿ ಜಮೀರ್ ಅಹಮದ್ ಖಾನ್ ಮಾಧ್ಯಮಗಳ ಮುಂದೆ ಹೇಳಿದ್ದ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಎಂಬ ಡೈಲಾಗ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಮತ್ತು ಟ್ರೋಲ್ ಆಗಿದ್ದು, ಅನೇಕರಿಗೆ ಗೊತ್ತಿರಬಹುದು. ಆ ಬಳಿಕ ಅದೇ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಎಂಬ ಹೆಸರಿನಲ್ಲಿ ಹೊಸ ಸಿನೆಮಾವೊಂದು ಕೂಡ ಕನ್ನಡದಲ್ಲಿ ತೆರೆಗೆ ಬರುತ್ತಿರುವ ಸುದ್ದಿ ಕೂಡ ಹೊರಗೆ ಬಿದ್ದಿತ್ತು. ಇದೀಗ ಅದೇ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಸಿನೆಮಾ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೀಗ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಸಿನೆಮಾದ ಟೀಸರ್ ಕೂಡ ಬಿಡುಗಡೆಯಾಗಿದೆ. 
‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಟೀಸರ್ ಹೇಗಿದೆ…?
ಈಗಾಗಲೇ ತನ್ನ ಚಿತ್ರದ ಟೈಟಲ್ ಮೂಲಕವೇ ಗಾಂಧಿನಗರದಲ್ಲಿ ಒಂದಷ್ಟು ಸದ್ದು ಮಾಡಿದ್ದ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಚಿತ್ರದ ಥಿಯೇಟರಿಕಲ್ ಟೀಸರ್ ಇದೀಗ ಬಿಡುಗಡೆಯಾಗಿದೆ. ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಹಾಗೂ ಕಿರೀಟಿ ಅಭಿನಯದ ‘ಜೂನಿಯರ್’ ಚಿತ್ರದ ಪ್ರದರ್ಶನದ ಜೊತೆಗೆ ಚಿತ್ರಮಂದಿರಗಳಲ್ಲಿ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಚಿತ್ರದ ಥಿಯೇಟರಿಕಲ್ ಟೀಸರ್ ಕೂಡ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ‘ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್ ನಲ್ಲೂ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸದ್ಯ ಟೀಸರ್ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಸಿನೆಮಾದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಯೂಥ್‌ಫುಲ್ ಕಹಾನಿ…
ಇನ್ನು ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಅಪ್ಪಟ ಯೂಥ್‌ಫುಲ್ ಸಬ್ಜೆಕ್ಟ್ ಸಿನೆಮಾ ಎಂಬುದು ಟೀಸರ್ ನೋಡಿದವರಿಗೆ ಗೊತ್ತಾಗುತ್ತದೆ. ಚಿತ್ರದ ಟೀಸರ್ ಕೊಂಚ ವಿಶೇಷವಾಗಿ ಮೂಡಿಬಂದಿದ್ದು, ಸಾಮಾನ್ಯವಾಗಿ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದಾಗ ಆರಂಭದಲ್ಲಿ ತೆರೆಯ ಮೇಲೆ ಪಾನ್, ಗುಟ್ಕಾ ಆರೋಗ್ಯಕ್ಕೆ ಹಾನಿಕರ ಎಂಬ ವಿಡಿಯೋ ನಲ್ಲಿ ‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡೇ ಇರಲಿಲ್ಲ’ ಎಂಬ ದೃಶ್ಯ ಜನರಲ್ಲಿ ಜಾಗೃತಿ ಮೂಡಿಸುವುದನ್ನು ನೀವೆಲ್ಲ ನೋಡಿರುತ್ತೀರಿ.
‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಸಿನೆಮಾದ ಟೀಸರ್ ಅನ್ನು ಕೂಡ ಅದೇ ಶೈಲಿಯಲ್ಲಿ ‘ಪ್ರೀತಿ, ಪ್ರೇಮ ಇಂದೇ ತ್ಯಜಿಸಿ…’ ಎಂದು ವಿಭಿನ್ನವಾಗಿ ತೆರೆಮೇಲೆ ಹೇಳಲಾಗಿದೆ. ಟೀಸರ್ ನಲ್ಲಿ ಪ್ರೇಮಿಯ ನೋವು, ಸಂಕಟ, ಪರದಾಟದ ದೃಶ್ಯಗಳನ್ನು ಹಾಸ್ಯಭರಿತವಾಗಿ ಕಟ್ಟಿಕೊಡಲಾಗಿದೆ.
ಹೊಸಬರ ತ್ರಿಕೋನ ಪ್ರೇಮಕಥೆ…?
ಇದೊಂದು ವಿಭಿನ್ನ ಪ್ರೇಮ ಕಥೆಯನ್ನು ಒಳಗೊಂಡಿದ್ದು, ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗಲಿದೆ ಎನ್ನುವುದನ್ನು ಬಹಳ ನವಿರಾಗಿ, ಕುತೂಹಲ ಮೂಡಿಸುವಂತೆ ಚಿತ್ರೀಕರಿಸಲಾಗಿದೆ ಎಂಬುದು ಚಿತ್ರತಂಡದ ಮಾತು. ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಅಭಿನಯಿಸಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಕ್ಷಿತ್ ನಾಗ್ ಮೊದಲ ಬಾರಿಗೆ ಈ ಸಿನೆಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಸಂಜನಾ ದಾಸ್, ಅನುಷಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಶಶಿಕುಮಾರ್ ನಾಯಕನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದು, ಉಳಿದಂತೆ ರಕ್ಷಿತ್ ಕಾಪು , ಸುದರ್ಶನ್, ಚೇತನ್ ದುರ್ಗ ಮತ್ತಿತರರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 
ಶೀಘ್ರದಲ್ಲಿಯೇ ತೆರೆಗೆ ಬರುವ ಯೋಜನೆ…
‘ಪೆನ್ ಎನ್ ಪೇಪರ್ ಸ್ಟುಡಿಯೋಸ್’ ಹಾಗೂ ‘ಕಲ್ಲೂರ್ ಸಿನಿಮಾಸ್’ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ ಈ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ. ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಹಾಗೂ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರು, ಕಾರವಾರ ಸುತ್ತಮುತ್ತ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ, ಗುರುಪ್ರಸಾದ್ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಸಿನೆಮಾದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.















