Video

‘ವಾರಣಾಸಿ’ ಟೈಟಲ್ ಟೀಸರ್ ರಿಲೀಸ್‌

ಅದ್ಧೂರಿಯಾಗಿ ಹೊರಬಂತು ‘ವಾರಣಾಸಿ’ ಟೈಟಲ್‌ ಟೀಸರ್‌

ಎಸ್. ​​ಎಸ್ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಶನ್‌ನ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌…!

‘ರಾಮೋಜಿ ಫಿಲಂ ಸಿಟಿ’ಯಲ್ಲಿ ನಡೆದ ಸಮಾರಂಭದಲ್ಲಿ ಟೈಟಲ್‌ ಅನೌನ್ಸ್‌

‘ಆರ್‌ಆರ್‌ಆರ್’‌ ಸಿನೆಮಾದ ನಂತರ ತೆಲುಗು ನಿರ್ದೇಶಕ ಎಸ್‌. ಎಸ್‌. ರಾಜಮೌಳಿ ಹೊಸ ಸಿನೆಮಾವನ್ನು ಕೈಗೆತ್ತಿಕೊಂಡಿರುವುದು ಸಿನಿಪ್ರಿಯರಿಗೆ ಗೊತ್ತೇ ಇದೆ. ಈಗಾಗಲೇ ಈ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೀಗ ಈ ಸಿನೆಮಾದ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಈ ಸಿನೆಮಾಕ್ಕೆ ‘ವಾರಣಾಸಿ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ (ನ. 15ರಂದು) ಈ ಸಿನೆಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮ ಹೈದರಾಬಾದಿನ ‘ರಾಮೋಜಿರಾವ್ ಫಿಲಂ ಸಿಟಿ’ಯಲ್ಲಿ ಅದ್ಧೂರಿಯಾಗಿ ನಡೆಯಿತು. ಸಣ್ಣ ಟೀಸರ್ ಮೂಲಕ ‘ವಾರಣಾಸಿ’ ಸಿನೆಮಾದ ಟೈಟಲ್‌ ಅನ್ನು ಬಿಡುಗಡೆ ಮಾಡಲಾಯಿತು.

‘ವಾರಣಾಸಿ’ಯಲ್ಲಿ ರಾಜಮೌಳಿ, ಮಹೇಶ್‌ ಬಾಬು ಜೊತೆಯಾಟ…

ಅಂದಹಾಗೆ, ನಿರ್ದೇಶಕ ಎಸ್‌. ಎಸ್‌. ರಾಜಮೌಳಿ ಹಾಗೂ ಪ್ರಿನ್ಸ್‌ ಮಹೇಶ್ ಬಾಬು ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ವಾರಣಾಸಿ’ ಸಿನೆಮಾದ ಬಗ್ಗೆ ಸಹಜವಾಗಿಯೇ ಚಿತ್ರ ಪ್ರೇಮಿಗಳಿಗೆ ನಿರೀಕ್ಷೆ, ಕುತೂಹಲಗಳಿವೆ. ಆರಂಭದಲ್ಲಿ ‘ಎಸ್​​ಎಸ್​​ಎಂಬಿ29’ ಎಂಬ ತಾತ್ಕಾಲಿಕ ಹೆಸರಿನೊಂದಿಗೆ ಪ್ರಾರಂಭವಾದ ಸಿನೆಮಾಕ್ಕೆ ಆ ನಂತರ ‘ಗ್ಲೋಬ್ ಟ್ರೊಟ್ಟೆರ್’ ಎಂಬ ಮತ್ತೊಂದು ತಾತ್ಕಾಲಿಕ ಹೆಸರನ್ನು ಕೊಡಲಾಗಿತ್ತು. ಇದೀಗ ಈ ಸಿನೆಮಾದ ಅಧಿಕೃತ ಹೆಸರನ್ನು ಬಿಡುಗಡೆ ಮಾಡಲಾಗಿದ್ದು, ಸಿನೆಮಾದ ಟೈಟಲ್‌ ಬಗ್ಗೆ ಇದ್ದ ಎಲ್ಲಾ ಕುತೂಹಲಗಳಿಗೆ ಕೊನೆಗೂ ತೆರೆ ಬಿದ್ದಿದೆ.

ಟೈಟಲ್‌ ಟೀಸರ್‌ನಲ್ಲಿ ‘ವಾರಣಾಸಿ’ಯ ದರ್ಶನ..!

‘ಭಾರತದ ಪೌರಾಣಿಕ ಕಥೆಗಳನ್ನು ವಿಶ್ವಕ್ಕೆ ತೋರಿಸುವ ಗುರಿ ನಮಗಿದೆ’ ಎಂದು ನಿರ್ದೇಶಕ ರಾಜಮೌಳಿ ಈ ಹಿಂದೆಯೇ ಹೇಳಿದ್ದರು, . ಅದರಂತೆ ಈಗ ಭಾರತದ ಪೌರಾಣಿಕ ಕಥೆಗಳಲ್ಲಿ ವಿಶ್ವದ ಅತ್ಯಂತ ಪುರಾತನ ನಗರ ಎಂದೇ ಹೆಸರಾಗಿರುವ ‘ವಾರಣಾಸಿ’ಯ ಹೆಸರನ್ನು ರಾಜಮೌಳಿ ತಮ್ಮ ಸಿನೆಮಾಕ್ಕೆ ಇರಿಸಿದ್ದಾರೆ. ಆ ಮೂಲಕ ಸಿನೆಮಾದ ಕಥೆ ಭಾರತದ ಸನಾತನ ಧರ್ಮ ಮತ್ತು ಪೌರಾಣಿಕ ಕಥೆಗಳನ್ನು ಆಧರಿಸಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಇನ್ನು ಬಿಡುಗಡೆಯಾಗಿರುವ ‘ವಾರಣಾಸಿ’ ಸಿನೆಮಾದ ಟೈಟಲ್‌ ಟೀಸರಿನ ವಿಡಿಯೋದಲ್ಲಿ ನಾಯಕ ನಟ ಮಹೇಶ್ ಬಾಬು ಬಲಿಷ್ಠವಾದ ಒಂದು ಎತ್ತಿನ ಮೇಲೆ ಕೂತು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಮುನ್ನುಗ್ಗುತ್ತಿರುವ ವಿಡಿಯೋವನ್ನು ನಿರ್ದೇಶಕ ರಾಜಮೌಳಿ ತೋರಿಸಿದ್ದಾರೆ. ಹಿನ್ನೆಲೆಯಲ್ಲಿ ಶ್ರುತಿ ಹಾಸನ್ ಹಾಡಿರುವ ‘ಸಂಚಾರಿ-ಸಂಚಾರಿ…’ ಹಾಡು ಕೇಳಿ ಬರುತ್ತಿದೆ. ವಿಡಿಯೋ ನೋಡಿದರೆ ಅದು ಕ್ಲೈಮ್ಯಾಕ್ಸ್ ಫೈಟ್​​ನ ದೃಶ್ಯದಂತೆ ತೋರುತ್ತಿದೆ. ಜೊತೆಗೆ ಬೇರೆ ಬೇರೆ ಯುಗಗಳ ಝಲಕ್ ಅನ್ನು ಕೂಡ ಗ್ರಾಫಿಕ್ಸ್‌ನಲ್ಲಿ ತೋರಿಸಲಾಗಿದೆ.

‘ವಾರಣಾಸಿ’ ಸಿನೆಮಾದ ಟೈಟಲ್‌ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

2027ಕ್ಕೆ ಬಹುನಿರೀಕ್ಷಿತ ‘ವಾರಣಾಸಿ’ ತೆರೆಗೆ

ಇನ್ನು ನಿರ್ದೇಶಕ ರಾಜಮೌಳಿ ಹಾಗೂ ನಟ ಮಹೇಶ್ ಬಾಬು ಕಾಂಬಿನೇಶನ್‌ನ ‘ವಾರಣಾಸಿ’ ಸಿನೆಮಾನಲ್ಲಿ ನಟಿ  ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ‘ವಾರಣಾಸಿ’ ಸಿನೆಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ನಟ ಮಾಧವನ್‌ ಕೂಡ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ‘ವಾರಣಾಸಿ’ಯ ಹಾಡುಗಳಿಗೆ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ಜೊತೆಗೆ ಹಾಲಿವುಡ್​ನ ಸ್ಟಾರ್ ನಟನೊಬ್ಬರು ಸಹ ನಟಿಸಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ, ಸದ್ಯದ ಮಾಹಿತಿಯ ಪ್ರಕಾರ, 2027ರಲ್ಲಿ ಈ ಬಹುನಿರೀಕ್ಷಿತ ‘ವಾರಣಾಸಿ’ ಸಿನೆಮಾ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ ಎನ್ನಲಾಗಿದೆ.

Related Posts

error: Content is protected !!