ಮದುವೆಯ ಅಧಿಕೃತ ಆಮಂತ್ರಣ ಹಂಚಿಕೊಂಡ ರಶ್ಮಿಕಾ ಮಂದಣ್ಣ!
ಕೊನೆಗೂ ಮದುವೆಯ ಅಧಿಕೃತ ಆಮಂತ್ರಣ ನೀಡಿದ ರಶ್ಮಿಕಾ
‘ನಮ್ಮದು ‘ವಿರೋಶ್’ ಜೋಡಿ, ಮದುವೆಗೆ ಬನ್ನಿ…’ ಎಂದ ಕೊಡಗಿನ ಬೆಡಗಿ
ವೆಡ್ಡಿಂಗ್ ಕಾರ್ಡ್ ವೈರಲ್ ವದಂತಿಗಳಿಗೆ ತೆರೆ
ಕಳೆದ ಕೆಲ ವರ್ಷಗಳಿಂದಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಮದುವೆ ಬಗ್ಗೆ ಗಾಸಿಪ್‌ಗಳು ಜೋರಾಗಿಯೇ ಸದ್ದು ಮಾಡುತ್ತಿದ್ದವು. ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದರೂ ಒಬ್ಬರಿಗೊಬ್ಬರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಕಳೆದ ಅಕ್ಟೋಬರ್‌ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಫೆಬ್ರವರಿ 2 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಸದ್ಯ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದ್ದು, ಈ ಜೋಡಿಯ ವಿವಾಹ ಕುರಿತಾದ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ.
ಇದೇ ಫೆ. 26 ರಂದು ವಿಜಯ್ ದೇವೆಕೊಂಡ – ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದು, ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಗುರು ಹಿರಿಯರ ಸಮ್ಮುಖದಲ್ಲಿ ವಿಜಯ್ – ರಶ್ಮಿಕಾ ವಿವಾಹವಾಗಲಿದ್ದಾರೆ. ಅದಾದ ಬಳಿಕ ಮಾರ್ಚ್ 4 ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾ ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. 
ವಿಜಯ್ – ರಶ್ಮಿಕಾ ವಿವಾಹ ಪತ್ರಿಕೆ ಬಹಿರಂಗ!
ಇನ್ನು ಕಳೆದ ಕೆಲ ದಿನಗಳಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಗೆ ಅತಿಥಿಗಳನ್ನ ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರಿಕೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಮದುವೆ ಫೆಬ್ರವರಿ 26 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಉದಯಪುರ ಪ್ಯಾಲೆಸ್‌ನಲ್ಲಿ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮದುವೆ ನಡೆಯುತ್ತಿದೆ ಎನ್ನಲಾಗಿದ್ದರೂ,
ಮದುವೆ ಪತ್ರಿಕೆಯಲ್ಲಿ ಮದುವೆಯ ಸ್ಥಳದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಈ ಪುಟ್ಟ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಅತ್ಯಾಪ್ತರು, ಉದ್ಯಮ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 4 ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾ ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂಬ ಮಾಹಿತಿ ಮಾತ್ರ ವಿವಾಹ ಪತ್ರಿಕೆಯಲ್ಲಿದೆ.
ಮದುವೆಯ ಬಗ್ಗೆ ಮಾಹಿತಿ ನೀಡಿದ ರಶ್ಮಿಕಾ
‘ಗೀತಾ ಗೋವಿಂದಂ’ ಕ್ಯೂಟ್ ಜೋಡಿ ಈಗ ನಿಜಜೀವನದಲ್ಲೂ ಹಸೆಮಣೆ ಏರಲು ಸಜ್ಜಾಗಿದೆ. ಇದೇ ಫೆ. 26 ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಪ್ತಪದಿ ತುಳಿಯಲಿದ್ದು, ಮದುವೆ ಆಮಂತ್ರಣವನ್ನು ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
‘ನೀವೇ ನಮ್ಮ ಜೋಡಿಯನ್ನು ‘ವಿರೋಶ್’ ಎಂದಿದ್ದೀರಿ. ನಮ್ಮದು ವಿರೋಶ್ ಜೋಡಿ, ಮದುವೆಗೆ ಬನ್ನಿ’ ಎಂದು ಅತಿಥಿಗಳಿಗೆ ನಟಿ ರಶ್ಮಿಕಾ ಪ್ರೀತಿಯ ಆಹ್ವಾನ ನೀಡಿದ್ದಾರೆ.
‘ನನ್ನ ಪ್ರೀತಿ ಪಾತ್ರರೇ… ನಾನು ಯಾವುದೇ ಯೋಜನೆಗಳನ್ನು ರೂಪಿಸೋದಕ್ಕೂ ಮೊದಲು, ನನಗಾಗಿ ಏನನ್ನಾದರೂ ಆರಿಸಿಕೊಳ್ಳುವ ಮೊದಲು ನೀವು ಇರುತ್ತೀರಿ. ತುಂಬಾ ಪ್ರೀತಿಯಿಂದ, ನೀವು ನಮಗೆ ಒಂದು ಹೆಸರನ್ನು ಇಟ್ಟಿದ್ದೀರಿ. ನೀವು ನಮ್ಮನ್ನು ‘ವಿರೋಶ್’ ಎಂದು ಕರೆದಿದ್ದೀರಿ. ಹೀಗಾಗಿ, ಇಂದು ತುಂಬು ಹೃದಯದಿಂದ ಗೌರವಾರ್ಥವಾಗಿ ನಿಮ್ಮನ್ನು ಆಹ್ವಾನಿಸುತ್ತೇವೆ. ನಾವು ಅದನ್ನು ‘ವಿರೋಶ್ ಮದುವೆ’ ಎಂಬ ಹೆಸರಿನಿಂದ ಕರೆಯೋಕೆ ಬಯಸುತ್ತೇವೆ.
ನಮ್ಮನ್ನು ತುಂಬಾ ಪ್ರೀತಿಯಿಂದ ನೋಡುತ್ತಿರುವುದಕ್ಕೆ ಧನ್ಯವಾದಗಳು. ನೀವು ನಮ್ಮ ಮದುವೆಯ ಭಾಗವಾಗಿದ್ದೀರಿ. ಅಪ್ಪುಗೆ ಮತ್ತು ಪ್ರೀತಿಯೊಂದಿಗೆ ಸ್ವಾಗತ’ ಎಂದು ರಶ್ಮಿಕಾ ಮಂದಣ್ಣ ಮದುವೆ ಆಮಂತ್ರಣ ನೀಡಿದ್ದಾರೆ. ಒಟ್ಟಾರೆ ಕಳೆದ ಕೆಲ ದಿನಗಳಿಂದ ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ವಿವಾಹ ಪತ್ರಿಕೆ, ಆಮಂತ್ರಣದ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್‌ಗಳಿಗೆ ಕೊನೆಗೂ ರಶ್ಮಿಕಾ ಅವರೇ ಫುಲ್‌ಸ್ಟಾಪ್ ಇಟ್ಟಂತಾಗಿದೆ.















