ಮಲೆಯಾಳಂನ ‘ಕಥನಾರ್’ ಚಿತ್ರದ ಟ್ರೇಲರ್ ಬಿಡುಗಡೆ
ಮಾಲಿವುಡ್‌ನ ಬಹುನಿರೀಕ್ಷಿತ ‘ಕಥನಾರ್’ ಸಿನೆಮಾದ ಟ್ರೇಲರ್ ಔಟ್
ಈ ವರ್ಷದ ಮಲೆಯಾಳಂನ ಬಹುಕೋಟಿ ವೆಚ್ಚದ ‘ಕಥನಾರ್’ ತೆರೆಗೆ ಬರಲು ರೆಡಿ
ನಟ ಜಯಸೂರ್ಯ-ಅನುಷ್ಕಾ ಶೆಟ್ಟಿ ಕಾಂಬಿನೇಶನ್ ಚಿತ್ರ
ಈ ವರ್ಷ ಮಲೆಯಾಳಂನಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ, ಬಹುನಿರೀಕ್ಷಿತ ‘ಕಥನಾರ್’ ಸಿನೆಮಾದ ಬಿಡುಗಡೆಗೆ ತಯಾರಿ ಆರಂಭವಾಗಿದೆ. ಈಗಾಗಲೇ ‘ಕಥನಾರ್’ ಸಿನೆಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ,
ಇದೀಗ ‘ಕಥನಾರ್’ ಸಿನೆಮಾದ ಟ್ರೇಲರ್ ಅನ್ನು ಮಲೆಯಾಳಂ, ತಮಿಳು, ತೆಲುಗು, ಹಿಂದಿ, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದೆ.
ಅಂದಹಾಗೆ, ಮಲಯಾಳಂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಶ್ರೀ ಗೋಕುಲಂ ಮೂವೀಸ್’ ಬ್ಯಾನರ್ ನಡಿ ಗೋಕುಲಂ ಗೋಪಾಲನ್ ‘ಕಥನಾರ್’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳ ಸಾಲಿನಲ್ಲಿರುವ ‘ಕಥನಾರ್’ ಸಿನೆಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿದ್ದು, ಸುಮಾರು 15ಕ್ಕೂ ಹೆಚ್ಚು ಭಾಷೆಗಳಲ್ಲಿ ‘ಕಥನಾರ್’ ಸಿನೆಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಹೀಗಾಗಿ ‘ಕಥನಾರ್’ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಕನ್ನಡದ ಅವತರಣಿಕೆಯಲ್ಲೂ ಬಿಡುಗಡೆ ಮಾಡಿದೆ.
ಹೇಗಿದೆ ‘ಕಥನಾರ್’ ಸಿನೆಮಾದ ಟ್ರೇಲರ್..?
ಬಹು ಕಲಾವಿದರ ತಾರಾಗಣವನ್ನು ಒಳಗೊಂಡಿರುವ ‘ಕಥನಾರ್’ ಸಿನೆಮಾದಲ್ಲಿ ಮಲಯಾಳಂ ನಟ ಜಯಸೂರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಬಹುಕಾಲದ ನಂತರ ‘ಕಥನಾರ್’ ಸಿನೆಮಾದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಉಳಿದಂತೆ ಪ್ರಭುದೇವ, ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ ಮತ್ತು ಕುಲ್‌ಪ್ರೀತ್ ಯಾದವ್ ಮೊದಲಾದ ಖ್ಯಾತ ಕಲಾವಿದರ ಬೃಹತ್ ತಾರಾಬಳಗವೇ ‘ಕಥನಾರ್’ ಸಿನೆಮಾದಲ್ಲಿದೆ.
ಮಲೆಯಾಳಂನ ‘ಕಥನಾರ್’ ಚಿತ್ರದ ಕನ್ನಡದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಕಥನಾರ್’ ಎಂಬ ಆಕ್ಷನ್-ಫಿಕ್ಷನ್ ಕಹಾನಿ…
ಇನ್ನು ಬಿಡುಗಡೆಯಾಗಿರುವ ‘ಕಥನಾರ್’ ಸಿನೆಮಾದಲ್ಲಿ ವಿ.ಎಫ್.ಎಕ್ಸ್ ಹೈಲೈಟ್ಸ್ ಆಗಿದೆ. ಹಾಲಿವುಡ್ ಸಿನೆಮಾಗಳನ್ನು ನೆನಪಿಸುವಂತಹ ವಿ.ಎಫ್.ಎಕ್ಸ್ ಮತ್ತು ಹಿನ್ನೆಲೆ ಸಂಗೀತ, ವಿಷ್ಯುವಲ್ ಎಫೆಕ್ಟ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ನಾಯಕ ನಟ ಜಯಸೂರ್ಯ ತಮ್ಮ ವೃತ್ತಿಜೀವನದ ಸುಮಾರು ನಾಲ್ಕು ವರ್ಷಗಳನ್ನು ಈ ಚಿತ್ರಕ್ಕೆ ಮೀಸಲಿಟ್ಟಿದ್ದಾರೆ.
‘ಕಥನಾರ್’ ಸಿನೆಮಾಗೆ ಮಲೆಯಾಳಂನ ನಿರ್ದೇಶಕ ರೋಜಿನ್ ಥಾಮಸ್ ಆಕ್ಷನ್-ಕಟ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಕ್ಯಾಮರಾ ವರ್ಕ್ ಇದೆ. ರಾಹುಲ್ ಸುಬ್ರಮಣ್ಯನ್ ಸಂಗೀತ ಸಂಯೋಜಿಸಿದ್ದು, ಸಾಹಿತ್ಯವನ್ನೂ ಬರೆದಿರೋದು ವಿಶೇಷ. ರೋಜಿನ್ ಥಾಮಸ್ ಎಡಿಟಿಂಗ್ ಜೊತೆ ವಿಎಫ್‌ಎಕ್ಸ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಒಟ್ಟಾರೆ ತನ್ನ ಟೈಟಲ್, ಕಂಟೆಂಟ್, ತಾರಾಗಣ, ಇದೀಗ ತನ್ನ ಟ್ರೇಲರ್ ಮೂಲಕ ಒಂದಷ್ಟು ಸಿನಿಮಂದಿಯ ಗಮನ ಸೆಳೆಯುತ್ತಿರುವ ‘ಕಥನಾರ್’ ಚಿತ್ರವನ್ನು ಏಕಕಾಲಕ್ಕೆ 15ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ‘ಕಥನಾರ್’ ಭಾರತ ಮಾತ್ರವಲ್ಲದೆ ಯುರೋಪ್, ಆಸ್ಟ್ರೇಲಿಯಾ, ಸಿಂಗಾಪುರ, ಮಲೇಷಿಯಾ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ.















