Street Beat

ತೆರೆಗೆ ಬರಲು ಸಿದ್ದವಾದ ‘ಕೆಂಡದ ಸೆರಗು’

ಏಪ್ರಿಲ್ 17ಕ್ಕೆ ‘ಕೆಂಡದ ಸೆರಗು’ ತೆರೆಗೆ

ಮಾಲಾಶ್ರೀ-ಭೂಮಿ ಶೆಟ್ಟಿ ನಟನೆಯ ಸಾಮಾಜಿಕ ಕಥಾಹಂದರದ ಚಿತ್ರ

ಕನ್ನಡದಲ್ಲಿ ಲವ್‌ ಜಿಹಾದ್‌ ಮೇಲೊಂದು ಚಿತ್ರ!

ಈಗಾಗಲೇ ಹಿಂದಿ, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಲವ್‌ ಜಿಹಾದ್‌ ವಿಷಯಾವನ್ನು ಇಟ್ಟುಕೊಂಡು ಒಂದಷ್ಟು ಸಿನೆಮಾಗಳು ತೆರೆಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಈಗ ಕನ್ನಡದಲ್ಲೂ ಇಂಥದ್ದೇ ಲವ್‌ ಜಿಹಾದ್‌ ವಿಷಯವನ್ನು ಇಟ್ಟುಕೊಂಡು ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಕೆಂಡದ ಸೆರಗು’. ರಾಕಿ ಸೋಮ್ಲಿ ನಿರ್ದೇಶಿಸಿರುವ ‘ಕೆಂಡದ ಸೆರಗು’ ಚಿತ್ರವು ಸಾಮಾಜಿಕ ಸಂದೇಶದೊಂದಿಗೆ ಕ್ರೈಂ ತನಿಖೆಯ ಅಂಶವನ್ನೂ ಒಳಗೊಂಡಿರುವ ವಿಭಿನ್ನ ಕಥೆಯಾಗಿದೆ. ‘ಶ್ರೀ ಮುತ್ತು ಟಾಕೀಸ್’ ಬ್ಯಾನರ್‌ನಲ್ಲಿ ಕೋಟ್ರೆಶ್ ಗೌಡ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ‘ಕೆಂಡದ ಸೆರಗು’  ಚಿತ್ರದಲ್ಲಿ ಸ್ಯಾಂಡಲ್‌ವುಡ್ ‘ಆ್ಯಕ್ಷನ್ ಕ್ವೀನ್’ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭಿತ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧೂ ಲೋಕನಾಥ್, ಹರೀಶ್ ಅರಸು ಮೊದಲಾದ ಕಲಾವಿದರು ‘ಕೆಂಡದ ಸೆರಗು’ ಚಿತ್ರದ ಇತರ ಪ್ರಮುಖ ತಾರಾ ಬಳಗದಲ್ಲಿದ್ದಾರೆ. ಕಾದಂಬರಿ ಆಧಾರಿತ ಕಥಾಹಂದರ ಹೊಂದಿರುವ ‘ಕೆಂಡದ ಸೆರಗು’ ಚಿತ್ರ ಇದೇ ಏಪ್ರಿಲ್ 17ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಾಮಾಜಿಕ ಕಥಾಹಂದರದ ಕಥೆಗೆ ಸಿನೆಮಾ ಟಚ್‌…

‘ಕೆಂಡದ ಸೆರಗು’ ಚಿತ್ರದಲ್ಲಿ ಮಹಿಳೆಯ ಆತ್ಮಗೌರವ ಮತ್ತು ಹೋರಾಟದ ಕಥೆಯ ಜೊತೆಗೆ ಇಂದಿನ ಸಮಾಜದಲ್ಲಿ ಕೆಲವು ಯುವತಿಯರು ಎದುರಿಸುವ ಮೋಸ ಮತ್ತು ಅಪಾಯಗಳನ್ನೂ ತೋರಿಸಲಾಗಿದೆ. ಕಥೆಯ ಒಂದು ಭಾಗದಲ್ಲಿ ಯುವತಿಯೊಬ್ಬಳು ಪ್ರೀತಿಯ ಹೆಸರಿನಲ್ಲಿ ಮೋಸಕ್ಕೆ ಒಳಗಾಗುತ್ತಾಳೆ (ಲವ್ ಜಿಹಾದ್). ತಪ್ಪಾದ ವ್ಯಕ್ತಿಯ ಮೇಲೆ ನಂಬಿಕೆ ಇಡುವುದರಿಂದ ಅವಳ ಜೀವನದ ದಿಕ್ಕೇ ಬದಲಾಗುತ್ತದೆ ಮತ್ತು ಅವಳು ಅನೈತಿಕ ವಲಯದ ಜಾಲದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಅಂತಹ ಸಂದರ್ಭದಲ್ಲಿ ಮಾಲಾಶ್ರೀ ಅವರು ಶಕ್ತಿಶಾಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪ್ರವೇಶಿಸಿ ಆ ರಾಕೆಟ್ ಅನ್ನು ಬಯಲಿಗೆಳೆಯುವ ಕಾರ್ಯಕ್ಕೆ ಮುಂದಾಗುತ್ತಾರೆ. ಅವರ ಪಾತ್ರವು ಅಪರಾಧ ಜಾಲವನ್ನು ಭೇದಿಸಿ ಸತ್ಯವನ್ನು ಹೊರತರುವ ಹೋರಾಟವನ್ನು ತೋರಿಸುತ್ತದೆ. ಅಂತಿವಾಗಿ ವಿಷ ವರ್ತುಲದೊಳಗೆ ಸಿಲುಕುವ ಮಹಿಳೆಯರ ಹೋರಾಟ ಹೇಗಿರುತ್ತದೆ? ಅದರಿಂದ ಹೊರಬರುವ ಮಾರ್ಗವೇನು? ಎಂಬುದೇ ‘ಕೆಂಡದ ಸೆರಗು’ ಚಿತ್ರದ ಕಥಾಹಂದರ.

‘ಕೆಂಡದ ಸೆರಗು’ ಮೂಲಕ ‘ಆ್ಯಕ್ಷನ್ ಕ್ವೀನ್’ ಕಂಬ್ಯಾಕ್‌!

‘ಕೆಂಡದ ಸೆರಗು’ ಚಿತ್ರವು ಮಾಲಾಶ್ರೀ ಅವರ ಮತ್ತೊಂದು ಪ್ರಭಾವಿ ಕಮ್‌ಬ್ಯಾಕ್ ಆಗಿದ್ದು, ಸ್ಯಾಂಡಲ್‌ವುಡ್‌ನ ‘ಆ್ಯಕ್ಷನ್ ಕ್ವೀನ್’ ಎಂಬ ಹೆಸರನ್ನು ಮತ್ತೆ ನೆನಪಿಸುವಂತಿದೆ. ಸಾಮಾಜಿಕ ಸಂದೇಶ, ಭಾವನಾತ್ಮಕ ಕಥೆ ಮತ್ತು ರೋಚಕ ಘಟನೆಗಳ ಸಂಯೋಜನೆಯೊಂದಿಗೆ ಕೆಂಡದ ಸೆರಗು ಪ್ರೇಕ್ಷಕರಲ್ಲಿ ಚಿಂತನೆ ಹುಟ್ಟಿಸುವ ಚಿತ್ರವಾಗಲಿದೆ ಎಂಬುದು ‘ಕೆಂಡದ ಸೆರಗು’ ಚಿತ್ರತಂಡದ ವಿಶ್ವಾಸದ ಮಾತು. ‘ಕೆಂಡದ ಸೆರಗು’ ಚಿತ್ರಕ್ಕೆ ವಿಪಿನ್ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದು, ವೀರೇಶ್ ಕಂಬಳಿ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ತನ್ನ ಟೈಟಲ್‌, ಕಂಟೆಂಟ್‌ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಸುದ್ದಿಯಾಗುತ್ತಿರುವ ‘ಕೆಂಡದ ಸೆರಗು’ ಚಿತ್ರ ಹೇಗಿರಲಿದೆ? ಕನ್ನಡ ಚಿತ್ರಪ್ರೇಮಿಗಳಿಗೆ ‘ಕೆಂಡದ ಸೆರಗು’ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ? ಎಂಬುದು ಇದೇ ಏಪ್ರಿಲ್‌ ಅಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!