Street Beat

‘ಮ್ಯಾಟ್ರಿಕ್ ಮೂವೀ ಮೇಕರ್ಸ್’ ನಿರ್ಮಾಣದ ಮೂರು ಚಿತ್ರಗಳಿಗೆ ಚಾಲನೆ

ಏಕಕಾಲಕ್ಕೆ ಮೂರು ಚಿತ್ರಗಳ ಮುಹೂರ್ತ

‘ಸೀತಾರಾಮ ರಾಜು’, ‘ದರ್ಶನ’ ಸೇರಿ ಒಟ್ಟಿಗೆ ಮೂರು ಚಿತ್ರಗಳಿಗೆ ಚಾಲನೆ

ಕುಮಾರ್‌, ಕೀರ್ತಿ ಕೃಷ್ಣ, ಸ್ವಸ್ತಿಕ್‌ ನಿರ್ದೇಶನದ ಚಿತ್ರಗಳು

ನಿರ್ಮಾಪಕ ಅರುಣಕುಮಾರ್ ಅವರ ‘ಮ್ಯಾಟ್ರಿಕ್ ಮೂವೀ ಮೇಕರ್ಸ್’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳ ಮುಹೂರ್ತ ಏಕಕಾಲಕ್ಕೆ ನೆರವೇರಿದೆ. ಬೆಂಗಳೂರಿನ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಒಟ್ಟಿಗೇ ಮೂರು ಚಿತ್ರಗಳಿಗೆ ಚಾಲನೆ ನೀಡಲಾಯಿತು.

ಮೊದಲನೇ ಚಿತ್ರವನ್ನು  ಈ ಹಿಂದೆ ‘ಅದೊಂದಿತ್ತು ಕಾಲ’ ಚಿತ್ರವನ್ನು ನಿರ್ದೇಶಿಸಿದ್ದ ಯುವ  ನಿರ್ದೇಶಕ ಕೀರ್ತಿ ಕೃಷ್ಣ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ‘ಸೀತಾರಾಮ ರಾಜು’ ಎಂದು ಹೆಸರಿಡಲಾಗಿದೆ. ಎರಡೇ ಚಿತ್ರವನ್ನು ಯುವ ನಿರ್ದೇಶಕ ಸ್ವಸ್ತಿಕ್ ನಿದೇಶನದಲ್ಲಿ ಮೂಡಿಬರುತ್ತಿದ್ದು, ಈ ಚಿತ್ರಕ್ಕೆ ‘ದರ್ಶನ’ ಎಂದು ಹೆಸರಿಡಲಾಗಿದೆ. ಇನ್ನು ಮೂರನೇ ಚಿತ್ರವನ್ನು ‘ಲವ್‌ ಯು ಮುದ್ದು’ ಖ್ಯಾತಿಯ ನಿರ್ದೇಶಕ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಟೈಟಲ್‌ ಇನ್ನಷ್ಟೇ ಅಂತಿಮವಾಗಬೇಕಿದೆ. ಸದ್ಯ ಈ ಮೂರೂ ಸಿನೆಮಾಗಳ ಸ್ಕ್ರಿಪ್ಟ್‌ ಮತ್ತು ಪ್ರೀ-ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇದೇ ಏಪ್ರಿಲ್‌ ಎರಡನನೇ ವಾರದಿಂದ ಚಿತ್ರಗಳ ಚಿತ್ರೀಕರಣ ಕಾರ್ಯಗಳು ಆರಂಭವಾಗಲಿದೆ.

‘ಸೀತಾರಾಮ ರಾಜು’ ಚಿತ್ರಕ್ಕೆ ಕಾರ್ತಿಕ್‌ ಮಹೇಶ್‌ ನಾಯಕ

‘ಸೀತಾರಾಮ ರಾಜು’ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಕಾರ್ತಿಕ್‌ ಮಹೇಶ್ ನಾಯಕನಾಗಿದ್ದು, ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ, ಉಳಿದಂತೆ ಆರ್ಮುಗಂ ರವಿಶಂಕರ್, ಜಗಪ್ಪ, ‘ಮಹಾನಟಿ’ ಖ್ಯಾತಿಯ ದೀಪಿಕಾ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ‘ಸೀತಾರಾಮ ರಾಜು’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ನಿರ್ದೇಶಕ ಕೀರ್ತಿ ಕೃಷ್ಣ, ‘ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಸಿನೆಮಾ. ಮೂರು ಪ್ರಮುಖ ಪಾತ್ರಗಳ ಸುತ್ತ ಇಡೀ ಸಿನೆಮಾದ ಕಥಾಹಂದರ ಸಾಗಲಿದೆ. ಈ ಸಿನೆಮಾದಲ್ಲಿ ‘ಸೀತಾ ರಾಮ’ನ ಜತೆಗೆ ಹನುಮನಾಗಿ ‘ರಾಜು’ ಪಾತ್ರವೂ ಬರುತ್ತದೆ. ಚಿಕ್ಕಮಗಳೂರು, ಬೆಂಗಳೂರು ಸುತ್ತ ನಡೆಯುವ ಕಥೆಯಿದು’ ಎಂದು ಮಾಹಿತಿ ನೀಡಿದರು.

ನಾಯಕ ಕಾರ್ತಿಕ್‌ ಮಹೇಶ್ ಮಾತನಾಡುತ್ತ, ‘ನನಗೆ ತುಂಬಾ ಕಾಡಿದಂಥ ಕಥೆ ಈ ಚಿತ್ರದ್ದು. ಒಂದು ಸುಂದರವಾದ ಲವ್ ಸ್ಟೋರಿಯೂ ಇದರಲ್ಲಿದೆ’ ಎಂದು ಹೇಳಿದರು. ನಾಯಕಿ ಪ್ರಿಯಾಂಕಾ ಕುಮಾರ್ ಮಾತನಾಡಿ, ‘ಇದೊಂದು ಎಮೋಷನಲ್ ಲವ್‌ಸ್ಟೋರಿ, ನನ್ನ ಪಾತ್ರಕ್ಕೆ ತುಂಬಾ ಲೇರ‍್ಸ್ ಇದೆ’ ಎಂದು ಹೇಳಿದರು. ನಟ ರವಿಶಂಕರ್ ಮಾತನಾಡಿ, ‘ನಿರ್ದೇಶಕ ಕೀರ್ತಿ ಹಾರ್ಡ್ ವರ್ಕ್ ಮಾಡೋ ಹುಡುಗ, ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ಕೆಲವು ಸೀನ್‌ಗಳನ್ನು ನನಗೆ ಹೇಳಿದ್ದಾರೆ, ಡೈಲಾಗ್‌ಗಳೂ ಅದ್ಭುತವಾಗಿವೆ’ ಎಂದು ಹೇಳಿದರು. ಸಂಭಾಷಣೆ ರಚಿಸಿದ ಕ್ರಾಂತಿಕುಮಾರ್, ಸಂಗೀತ ನಿರ್ದೇಶಕ ರಾಘವೇಂದ್ರ, ವಿ. ಛಾಯಾಗ್ರಾಹಕ ಅಭಿಲಾಶ್ ಕಳತಿ ಮುಂತಾದವರು ‘ಸೀತಾರಾಮ ರಾಜು’ ಚಿತ್ರದಲ್ಲಿ ತಮ್ಮ ಕೆಲಸದ ಕುರಿತಂತೆ ಮಾತನಾಡಿದರು.

‘ದರ್ಶನ’ ಚಿತ್ರಕ್ಕೆ ಪೃಥ್ವಿ ಅಂಬಾರ್‌ ಹೀರೋ…

ಇನ್ನು ಸ್ವಸ್ತಿಕ್ ಅವರ ನಿದೇಶನದಲ್ಲಿ ಮೂಡಿಬರುತ್ತಿರುವ ‘ದರ್ಶನ’ ಚಲನಚಿತ್ರಕ್ಕೂ ಇದೇ ಸಂದರ್ಭದಲ್ಲಿ ಚಾಲನೆ
ನೀಡಲಾಯಿತು. ಈ ಚಿತ್ರದಲ್ಲಿ ‘ಚೌಕಿದಾರ್’ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿದ್ದು, ನಾಯಕಿ ಪಾತ್ರದಲ್ಲಿ ನಿಶಾ ರವೀಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ. ‘ದರ್ಶನ’ ಚಿತ್ರದ ನಿರ್ದೇಶಕ ಸ್ವಸ್ತಿಕ್ ಮಾತನಾಡಿ,  ‘ಇದೊಂದು ಕಾಮಿಡಿ ಡ್ರಾಮಾ ಜಾನರ್ ಚಿತ್ರ. ಪ್ರಥಮ ಪ್ರಯತ್ನದ ಚಿತ್ರವೂ ಹೌದು, ಕಥೆ ಕೇಳಿ ಮೆಚ್ಚಿಕೊಂಡು ನಿರ್ಮಾಪಕರಾದ ಅರುಣ ಕುಮಾರ್ ಹಾಗೂ ಭವ್ಯಾ ಅರುಣ ಕುಮಾರ್‌ ಈ ಸಿನೆಮಾದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಸುತ್ತಮುತ್ತ ನಮ್ಮ ಚಿತ್ರದ ಚಿತ್ರೀಕರಣ ನಡೆಯಲಿದೆ. ಗೌರವ ಶೆಟ್ಟಿ, ಸಂತು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ಏಪ್ರಿಲ್‌ ತಿಂಗಳ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ’ ಎಂದರು. ‘ದರ್ಶನ’  ಚಿತ್ರದ ನಾಯಕ ನಟ ಪೃಥ್ವಿ ಅಂಬಾರ್ ಅವರಿಗೆ ನಿಶಾ ರವೀಂದ್ರ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಮಾತನಾಡಿ ತಬಲಾನಾಣಿ ಮತ್ತಿತರರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕುಮಾರ್‌ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೂ ಮುಹೂರ್ತ

ಇದೇ ಸಂದರ್ಭದಲ್ಲಿ ‘ಲವ್‌ ಯು ಮುದ್ದು’ ಖ್ಯಾತಿಯ ನಿರ್ದೇಶಕ ಕುಮಾರ್‌ ನಿರ್ದೇಶನದ ಇನ್ನೂ ಹೆಸರಿಡದ ಹೊಸ ಸಿನೆಮಾಕ್ಕೂ ಮುಹೂರ್ತ ನೆರವೇರಿತು. ಇದೇ ವೇಳೆ ಮಾತನನಾಡಿದ ನಿರ್ದೇಶಕ ಕುಮಾರ್‌, ‘ಈ ಚಿತ್ರದಲ್ಲಿ ನಟ ತಬಲಾನಾಣಿ ಅವರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಿದೆ. ‘ಎದ್ದೇಳು ಮಂಜುನಾಥ’ ಚಿತ್ರದಲ್ಲಿ ತಬಲಾನಾಣಿ ಅವರ ಪಾತ್ರ ನನ್ನ ಮನಸನ್ನು ತುಂಬಾ ದಿನಗಳಿಂದ ಕಾಡುತ್ತಿತ್ತು, ಅದೇ ಪಾತ್ರವನ್ನು ಈ ಚಿತ್ರದಲ್ಲೂ ಮುಂದುವರೆಸುತ್ತಿದ್ದೇವೆ. ಆದರೆ ಆ ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಧವಿಲ್ಲ, ಆ ಪಾತ್ರದ ಸುತ್ತ ನಡೆಯುವ ಕಥೆಯಿದು. ಪ್ರೇಕ್ಷಕರನ್ನು ನಗಿಸಲೇಬೇಕು ಅಂತ ಮಾಡ್ತಿರುವ ಚಿತ್ರ’ ಎಂದು ಹೇಳಿದ್ದಾರೆ.

ಬಹುವರ್ಷಗಳ ಕನಸು… ಇದೀಗ ನನಸು

ಮೂರು ಸಿನೆಮಾಗಳ ಮುಹೂರ್ತದ ಬಳಿಕ ಮಾತನಾಡಿದ ನಿರ್ಮಾಪಕ ಅರುಣ ಕುಮಾರ್, ‘ನಮಗೆ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು. ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ, ಅದೀಗ ಕಾರ್ಯರೂಪಕ್ಕೆ ಬರುತ್ತಿದೆ’ ಎಂದರು, ಸಹ ನಿರ್ಮಾಪಕಿ ಭವ್ಯಾ ಅರುಣಕುಮಾರ್ ಮಾತನಾಡಿ, ‘ಹಲವಾರು ವರ್ಷದಿಂದ ಸುಮಾರು ಕಥೆಗಳನ್ನು ಕೇಳಿದ್ದೇವೆ, ಅದರಲ್ಲಿ ಈ ಮೂರು ಕಥೆಗಳು ನಮಗೆ ತುಂಬಾ ಹಿಡಿಸಿದವು. ಹಾಗಾಗಿ ಇಂದು ಪ್ರಾರಂಭಿಸಿದ್ದೇವೆ. ಆದಷ್ಟು ಬೇಗ ಈ ಚಿತ್ರಗಳನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದರು.

Related Posts

error: Content is protected !!