ಡಾಲಿ ಧನಂಜಯ ನಿರ್ಮಾಣದ ‘ಜೆರಾಕ್ಸ್’ ವೆಬ್ ಸರಣಿ ಅನೌನ್ಸ್!
‘ಜೆರಾಕ್ಸ್’ ಕಾಮಿಡಿ ವೆಬ್ ಸೀರಿಸ್ ಘೋಷಿಸಿದ ಡಾಲಿ ಧನಂಜಯ
ಶೀಘ್ರದಲ್ಲಿಯೇ ‘ZEE5’ ನಲ್ಲಿ ಮೂಡಿಬರಲಿದೆ ‘ಜೆರಾಕ್ಸ್’ ಹಾಸ್ಯ ವೆಬ್ ಸರಣಿ…
‘ಜೆರಾಕ್ಸ್’ ವೆಬ್ ಸರಣಿಗೆ ಶ್ರೀನಿಧಿ ಬೆಂಗಳೂರು ನಿರ್ದೇಶನ
ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ (ಕಾಳೇನಹಳ್ಳಿ ಅಡವಿ ಸ್ವಾಮಿ ಧನಂಜಯ) ಈಗಾಗಲೇ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವುದು ಎಲದ್ಲರಿಗೂ ಗೊತ್ತೇ ಇದೆ. ತಮ್ಮ ‘ಡಾಲಿ ಪಿಕ್ಚರ್ಸ್’ ಲಾಂಛನದಲ್ಲಿ ಈಗಾಗಲೇ ಒಂದಷ್ಟು ಸಿನೆಮಾಗಳನ್ನು ನಿರ್ಮಿಸಿರುವ ನಟ ಕಂ ನಿರ್ಮಾಪಕ ಡಾಲಿ ಧನಂಜಯ ಇದೀಗ ಸದ್ದಿಲ್ಲದೆ ವೆಬ್ ಸರಣಿಯ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಹೌದು, ಇದೀಗ ಡಾಲಿ ಧನಂಜಯ್, ‘ಜೆರಾಕ್ಸ್’ ಎಂಬ ಹೊಸ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ವೆಬ್ ಸರಣಿಯನ್ನು ಘೋಷಿಸಿದ್ದಾರೆ.
ಇದು ಡಾಲಿ ಧನಂಜಯ ಅವರ ನಿರ್ಮಾಣದ ಮೊದಲ ಓಟಿಟಿ ವೆಬ್ ಸರಣಿಯಾಗಿದೆ. ‘ZEE5’ ಹಾಗೂ ‘ಡಾಲಿ ಪಿಕ್ಚರ್ಸ್’ ಸಹಯೋಗದಲ್ಲಿ ಮೂಡಿ ಬರುತ್ತಿರುವ ಈ ಸರಣಿಯನ್ನು ಈ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದ ‘ಬ್ಲಿಂಕ್’ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ.
ಇನ್ನು ಡಾಲಿ ಧನಂಜಯ್ ನಿರ್ಮಾಣದ ‘ಜೆರಾಕ್ಸ್’ ವೆಬ್ ಸರಣಿ ಡಾರ್ಕ್ ಕಾಮಿಡಿ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಓಟಿಟಿ ಪ್ರೇಕ್ಷಕರನ್ನು ಹೊಸರೀತಿಯಲ್ಲಿ ರಂಜಿಸಲು ಡಾಲಿ ಧನಂಜಯ್ ಮತ್ತು ಶ್ರೀನಿಧಿ ಕಾಂಬಿನೇಶನ್ ಸಜ್ಜಾಗಿದೆ.
‘ಜೆರಾಕ್ಸ್’ ವೆಬ್ ಸರಣಿ ಬಗ್ಗೆ ಡಾಲಿ ಏನಂತಾರೆ..?
ಇನ್ನು ‘ಜೆರಾಕ್ಸ್’ ವೆಬ್ ಸರಣಿ ಬಗ್ಗೆ ಮಾತನಾಡಿರುವ ನಟ ಕಂ ನಿರ್ಮಾಪಕ ಡಾಲಿ ಧನಂಜಯ್, ‘ಓಟಿಟಿ ವೇದಿಕೆಯಲ್ಲಿ ಇದುವರೆಗೆ ನಾನು ನಿರ್ಮಾಣ ಮಾಡಿರಲಿಲ್ಲ. ಈ ದಿಕ್ಕಿನಲ್ಲಿ ಕೆಲವು ಸಮಯದಿಂದ ಪ್ರಯತ್ನಿಸುತ್ತಿದ್ದೆ. ಸರಿಯಾದ ಕಥೆ ಮತ್ತು ಸೂಕ್ತ ವೇದಿಕೆಯಿಗಾಗಿ ಕಾಯುತ್ತಿದ್ದೆ. ಆಗ ನನಗೆ ‘ಜೆರಾಕ್ಸ್’ ಸಿಕ್ಕಿತು. ನಮ್ಮ ಮಣ್ಣಿನ ಕಥೆಗಳನ್ನು ಹೇಳುವಲ್ಲಿ ಮುಂಚೂಣಿಯಲ್ಲಿರುವ ಜೀ5 ಜೊತೆ ಕೆಲಸ ಮಾಡುವ ಅವಕಾಶ ನನಗೆ ಪ್ರೇರಣೆಯಾಯಿತು. ಜೊತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನನ್ನ ಆಶಯಕ್ಕೂ ಇದು ಸೂಕ್ತವಾಗಿದೆ. ಈ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಡಲು ನಾನು ತುಂಬಾ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.
ಕಾಮಿಡಿ ಕಂಟೆಂಟ್… ಫುಲ್ ಎಂಟರ್ಟೈನ್ಮೆಂಟ್…!
ಇನ್ನು ‘ಜೆರಾಕ್ಸ್’ ವೆಬ್ ಸರಣಿಯ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ‘ಇದೊಂದು ಸಂಪೂರ್ಣ ಮನರಂಜನಾತ್ಮಕ ಪ್ರಯೋಗ. ಡಾರ್ಕ್ ಕಾಮಿಡಿ, ಥ್ರಿಲ್ಲರ್ ಹಾಗೂ ಫ್ಯಾಂಟಸಿ ಅಂಶಗಳೊಂದಿಗೆ ಕಥೆಯನ್ನು ಪ್ರಯೋಗಿಸಲು ‘ಜೆರಾಕ್ಸ್’ ಉತ್ತಮ ಅವಕಾಶ. ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡುವ ‘ಜೀ5’ (ZEE5) ವೇದಿಕೆ ಈ ಕಥೆಗೆ ಸೂಕ್ತ ವೇದಿಕೆಯಾಗಿದೆ. ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ‘ಡಾಲಿ ಪಿಕ್ಚರ್ಸ್’ ಜೊತೆ ಕೆಲಸ ಮಾಡುವುದು ನನಗೆ ಇನ್ನಷ್ಟು ಸಂತೋಷ ತಂದಿದೆ’ ಎಂದು ಹೇಳಿದ್ದಾರೆ.
‘ಜೆರಾಕ್ಸ್’ ವೆಬ್ ಸರಣಿ ಸ್ಟ್ರೀಮಿಂಗ್ ಯಾವಾಗ..?
ಸದ್ಯ ‘ಜೆರಾಕ್ಸ್’ ವೆಬ್ ಸರಣಿಯ ಅಧಿಕೃತ ಘೋಷಣೆ ಹೊರಬಿದ್ದಿದೆ. ‘ಜೆರಾಕ್ಸ್’ ವೆಬ್ ಸರಣಿಯಲ್ಲಿ ಯಾರೆಲ್ಲ ಕಲಾವಿದರು ಮತ್ತು ತಂತ್ರಜ್ಞರು ಇರಲಿದ್ದಾರೆ..? ‘ಜೆರಾಕ್ಸ್’ ವೆಬ್ ಸರಣಿ ಯಾವಾಗ ಸ್ಟ್ರೀಮಿಂಗ್ ಆಗಲಿದೆ..? ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳನ್ನು ಪ್ರೋತ್ಸಾಹಿಸುವ ವೇದಿಕೆಯಾಗಿ ಪ್ರಸಿದ್ಧವಾಗಿರುವ ‘ಜೀ5’ (ZEE5), ಇದೀಗ ‘ಜೆರಾಕ್ಸ್’ ವೆಬ್ ಸರಣಿಯ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಒಟ್ಟಾರೆ, ಯುವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮತ್ತು ಡಾಲಿ ಧನಂಜಯ ಅವರ ಸಹಯೋಗದ ‘ಜೆರಾಕ್ಸ್’ ವೆಬ್ ಸರಣಿ ಓಟಿಟಿ ಪ್ರೇಕ್ಷಕರಲ್ಲಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದೆ ಎಂದು ಹೇಳಬಹುದು.















