ಇದೇ ಏ. 17ಕ್ಕೆ ‘ಕೆಂಡದ ಸೆರಗು’ ಚಿತ್ರ ತೆರೆಗೆ
ಮಹಿಳಾ ಪ್ರಧಾನ ‘ಕೆಂಡದ ಸೆರಗು’ ಏ. 17ಕ್ಕೆ ಬಿಡುಗಡೆ
ಸಾಮಾಜಿಕ ಸಂದೇಶದ ಜೊತೆಗೆ ಕ್ರೈಂ ತನಿಖೆಯ ಎಳೆಯನ್ನು ಹೊತ್ತ ಚಿತ್ರ
ರಾಕಿ ಸೋಮ್ಲಿ ನಿರ್ದೇಶನದ ಚಿತ್ರ
‘ಕೆಂಡದ ಸೆರಗು’ ಎಂಬ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ‘ಕೆಂಡದ ಸೆರಗು’ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದೆ. ಇದೇ ಏಪ್ರಿಲ್ 17ಕ್ಕೆ ‘ಕೆಂಡದ ಸೆರಗು’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. 
ಯುವತಿಯರ ಹೋರಾಟದ ಕಥೆ
ಇನ್ನು ‘ಕೆಂಡದ ಸೆರಗು’ ಚಿತ್ರದಲ್ಲಿ ಸ್ಯಾಂಡಲ್ವುಡ್ ಆ್ಯಕ್ಷನ್ ಕ್ವೀನ್ ಖ್ಯಾತಿಯ ಮಾಲಾಶ್ರೀ ಖಾಕಿಯಲ್ಲಿ ಖದರ್ ತೋರಿಸಿದ್ದು, ಕಿರುತೆರೆ ಹಾಗೂ ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿರುವ ಭೂಮಿ ಶೆಟ್ಟಿ ಕುಸ್ತಿಪಟುವಾಗಿ ಅಭಿನಯಿಸಿದ್ದಾರೆ. ಚೊಚ್ಚಲ ನಿರ್ದೇಶನದಲ್ಲಿ ರಾಕಿ ಸೋಮ್ಲಿ ಗಟ್ಟಿಕಥೆಯನ್ನು ಹೇಳಲು ಹೊರಟಿದ್ದಾರೆ. ಮಹಿಳೆಯ ಆತ್ಮಗೌರವ ಮತ್ತು ಹೋರಾಟದ ಕಥೆಯ ಜೊತೆಗೆ ಇಂದಿನ ಸಮಾಜದಲ್ಲಿ ಕೆಲ ಯುವತಿಯರು ಎದುರಿಸುವ ಮೋಸ ಮತ್ತು ಅಪಾಯಗಳನ್ನೂ ತೆರೆ ಮೇಲೆ ತರುವ ಪ್ರಯತ್ನ ನಡೆಯುತ್ತಿದೆ. 
ಚಿತ್ರದಲ್ಲಿ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ ಅಲ್ಲದೇ ಶೋಭಿತಾ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧು ಲೋಕನಾಥ್, ಹರೀಶ್ ಅರಸು ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಶ್ರೀ ಮುತ್ತು ಟಾಕೀಸ್’ ಮತ್ತು ‘ಎಸ್.ಕೆ ಪ್ರೊಡಕ್ಷನ್ಸ್’ ಬ್ಯಾನರ್ ಅಡಿ ಕೆ. ಕೋಟ್ರೆಶ್ ಗೌಡ ನಿರ್ಮಿಸುತ್ತಿರುವ ‘ಕೆಂಡದ ಸೆರಗು’ ಚಿತ್ರಕ್ಕೆ ವಿಪಿನ್ ವಿ. ರಾಜ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಕೆಂಡದ ಸೆರಗು’ ಚಿತ್ರದ ಹಾಡುಗಳಿಗೆ ವೀರೇಶ್ ಕಂಬ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ.















