ಕನ್ನಡ ಹಿರಿತೆರೆ-ಕಿರುತೆರೆಯ ಖ್ಯಾತ ನಟ ದಿಲೀಪ್ ರಾಜ್ ನಿಧನ
ಹೃದಯಾಘಾತದಿಂದ ಖ್ಯಾತ ನಟ ದಿಲೀಪ್ ರಾಜ್ ನಿಧನ
ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದ ನಟ
ಹೃದಯಾಘಾತದಿಂದ ಮನೆಯಲ್ಲೇ ಕೊನೆಯುಸಿರೆಳೆದ ದಿಲೀಪ್ ರಾಜ್
13 ಮೇ 2026, ಬೆಂಗಳೂರು: ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ (47) ಇಂದು (13 ಮೇ 2026, ಬುಧವಾರ) ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬುಧವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಮಲಗಿದ್ದ ನಟ ದಿಲೀಪ್ ರಾಜ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಅಷ್ಟರಲ್ಲಿ, ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಎರಡು ದಶಕಗಳ ಬಣ್ಣದ ಬದುಕು!
2002ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟ ದಿಲೀಪ್ ರಾಜ್, ಆರಂಭದಲ್ಲಿ ಕಿರುತೆರೆಯ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ನಟನೆಯ ಜೊತೆಗೆ ಅವರು ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದರು. ದಿಲೀಪ್ ರಾಜ್ ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕಿರುತೆರೆ. ‘ಜನನಿ’ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ಅವರು ನಂತರ ನಿರ್ಮಾಪಕರಾಗಿಯೂ ಯಶಸ್ವಿಯಾದರು. 
ಕಿರುತೆರೆ, ಹಿರಿತೆರೆ ಎರಡರಲ್ಲೂ ಸೈ…
2005ರಲ್ಲಿ ದಿಲೀಪ್ ರಾಜ್ ಹೀರೋ ಆಗಿ ‘ಬಾಯ್ ಫ್ರೆಂಡ್’ ಸಿನೆಮಾದ ಶಿವ ಹೆಸರಿನ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅದಾದ ಬಳಿಕ ಪುನೀತ್ ರಾಜ್ಕುಮಾರ್ ಜೊತೆ ನಟಿಸಿದ ‘ಮಿಲನ’ ಸಿನೆಮಾದ ಖಳನಟನ ಪಾತ್ರ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಆನಂತರ, ‘ಪರಿಚಯ’, ‘ಸುಗ್ರೀವ’, ‘ನನ್ನಿ ಪಾರು’, ‘ಬಾರ್ಡರ್’, ‘ಗೆಳೆಯ’, ‘ಗಾನಬಜಾನ’, ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ಪಂಚಾಮೃತ’, ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕೇವಲ ಕಿರುತೆರೆಗೆ ಸೀಮಿತವಾಗದೆ, ಉತ್ತಮ ಸಿನೆಮಾಗಳ ಮೂಲಕವೂ ಪ್ರೇಕ್ಷಕರನ್ನು ತಲುಪಿದ್ದರು. ಇತ್ತೀಚೆಗೆ ತೆರೆಗೆ ಬಂದ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಅವರು ಲಾಯರ್ ಪಾತ್ರ ಮಾಡಿದ್ದರು.
ಸಿನೆಮಾದ ಜೊತೆ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ದಿಲೀಪ್ ರಾಜ್, ‘ಹಿಟ್ಲರ್ ಕಲ್ಯಾಣ’, ‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದರು. ತಮ್ಮ ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ‘ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್’ ಸಂಸ್ಥೆಯಡಿ ಅನೇಕ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದರು. ‘ಜೀ ಕನ್ನಡ’ ವಾಹಿನಿಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಇವರ ನಿರ್ಮಾಣದ ಅತಿದೊಡ್ಡ ಯಶಸ್ಸು. ಇದರಲ್ಲಿ ಅವರು ‘ಅಭಿರಾಮ್ ಜಯಶಂಕರ್’ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಇದರ ಹೊರತಾಗಿ ‘ಪಾರು’ ಸೇರಿದಂತೆ ಹಲವು ಸೀರಿಯಲ್ಗಳಿಗೆ ಇವರು ಕೆಲಸ ಮಾಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯನ್ನು ಅವರು ನಿರ್ಮಾಣ ಮಾಡುತ್ತಿದ್ದರು ಹಾಗೂ ಇದಕ್ಕೆ ಕ್ರಿಯೇಟಿವ್ ಹೆಡ್ ಕೂಡ ಹೌದು.
ದಿಲೀಪ್ ರಾಜ್ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರ ಕಂಬನಿ
ದಿಲೀಪ್ ರಾಜ್ ಅವರ ಅಕಾಲಿಕ ಮರಣ ಅವರ ಕುಟುಂಬದವರಿಗೆ, ಆಪ್ತರಿಗೆ ಮತ್ತು ಚಿತ್ರರಂಗಕ್ಕೆ ತೀವ್ರ ಆಘಾತವನ್ನು ಉಂಟು ಮಾಡಿದೆ. ನಟರಾದ ರಿಷಭ್ ಶೆಟ್ಟಿ, ಉಪೇಂದ್ರ, ಗಣೇಶ್, ರವಿಶಂಕರ್ ಗೌಡ, ನವೀನ್ ಕೃಷ್ಣ, ಹಿರಿಯ ನಟ ದೊಡ್ಡಣ್ಣ, ನಟಿ ಸುಧಾರಾಣಿ, ನಿರ್ದೇಶಕ ಎಸ್. ನಾರಾಯಣ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರ ಅಭಿಮಾನಿಗಳು, ಸ್ನೇಹಿತರು ಅಗಲಿದ ಪ್ರತಿಭೆ ದಿಲೀಪ್ ರಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ರಾಮನಗರ ಸಮೀಪದ ತೋಟದಲ್ಲಿ ಅಂತ್ಯಕ್ರಿಯೆ
ಹೃದಯಾಘಾತದಿಂದ ನಿಧನರಾದ ನಟ ದಿಲೀಪ್ ರಾಜ್ ಅವರ ಮೃತ ದೇಹವನ್ನು ರಾಮನಗರ ತಾಲೂಕಿನ ಗುನ್ನೂರು ಬಳಿಯ ತೋಟದಲ್ಲಿ ಬುಧವಾರ ಸಂಜೆ ವೇಳೆಗೆ ಲಿಂಗಾಯುತ ಸಂಪ್ರದಾಯದಂತೆ ಮಣ್ಣು ಮಾಡಲಾಯಿತು. ಸುಮಾರು 10 ವರ್ಷಗಳ ಹಿಂದೆ ಗುನ್ನೂರು ಗ್ರಾಮದಲ್ಲಿ ದಿಲೀಪ್ ರಾಜ್, ಒಂದು ಎಕರೆ ಕೃಷಿ ಜಮೀನು ಖರೀದಿಸಿದ್ದರು. ಅಲ್ಲಿ ಫಾರ್ಮ್ ಹೌಸ್ ನಿರ್ಮಿಸಿದ್ದ ದಿಲೀಪ್ ರಾಜ್, ಕೃಷಿ ಚಟುವಟಿಕೆಗಳನ್ನು ನಡೆಸುತ್ತ ತಮ್ಮ ಬಿಡುವಿನ ಸಮಯವನ್ನು ಅಲ್ಲೇ ಕಳೆಯುತ್ತಿದ್ದರು. ಇದೀಗ ದಿಲೀಪ್ ರಾಜ್ ಕುಟುಂಬಸ್ಥರು ಅದೇ ಜಾಗದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.















